Advertisement

ಕೃಷಿಯ ಆಶಾ ಕಿರಣ

06:00 AM Nov 05, 2018 | |

ಪದವಿ ಪಡೆದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ, ಮಂಗಳೂರಿನಲ್ಲಿ ಸ್ವಂತ ಉದ್ದಿಮೆ ಶುರು ಮಾಡಿ ಕೊನೆಗೆ ಒಂದು ದಿನ ಇವೆಲ್ಲ ಸಾಕು, ಕೃಷಿಯೇ ಬೇಕು ಅಂತ ಅನಿಸಿದಾಗ ತಾತನ ಕಾಲದ ಕೃಷಿ ಭೂಮಿ ಕೈ ಬೀಸಿ ಕರೆಯಿತು. ಈಗ ನೋಡಿ, ಸಾಯವ ಕೃಷಿಕರಾಗಿ ಕೈ ತುಂಬ ಲಾಭ ಮಾಡುತ್ತಿದ್ದಾರೆ ಸುಳ್ಯದ ವಿಷ್ಣು ಕಿರಣ.  

Advertisement

ಹೆಸರು ವಿಷ್ಣುಕಿರಣ ನೀರಬಿದಿರೆ. ಸುಳ್ಯ ಪೇಟೆಯಿಂದ 8 ಕಿ.ಮೀ ದೂರದಲ್ಲಿ ಇಪ್ಪತ್ತು ಎಕರೆಯಲ್ಲಿ ತೆಂಗು, ಕಂಗು, ಕೋಕೋ, ಕಾಳುಮೆಣಸು, ಜಾಯಿಕಾಯಿ, ರಬ್ಬರ್‌ ಅಲ್ಲದೆ ತರತರದ ಹೂಗಿಡಗಳು, ವೈವಿಧ್ಯಮಯ ತರಕಾರಿಗಳ ನಂದನವನ್ನೇ ಸೃಷ್ಟಿ ಮಾಡಿದ್ದಾರೆ.  ಮಣ್ಣಿನೊಂದಿಗೆ ಮಾತನಾಡಿ, ಅದರ ಬೇಕು ಬೇಡಗಳನ್ನು ತಿಳಿದುಕೊಳ್ಳುವ ಕಲೆ ಇವರಿಗೆ ಸಿದ್ಧಿಸಿದೆ. 

ವಿಷ್ಣು ಕಿರಣ ಬೆಂಗಳೂರಿನ ಕಂಪ್ಯೂಟೆಕ್‌ ಇಂಡಿಯಾ ಕಂಪೆನಿಯಲ್ಲಿ  ಉದ್ಯೋಗ ಶುರು ಮಾಡಿದರು.  ಕೆಲ ವರ್ಷ ಮಂಗಳೂರಿನಲ್ಲಿ ಸ್ವಂತ ಉದ್ದಿಮೆ ನಡೆಸಿದರು.  ಒಂದು ದಿನ ಎಲ್ಲವೂ ಬೇಡ ಎಂದೆನಿಸಿ,  ಹಿರಿಯರು ಮಾಡಿಟ್ಟ ಕೃಷಿಭೂಮಿಯ ದುಡಿಮೆಯಲ್ಲಿ ಅಡಗಿದ್ದ ಲಾಭವನ್ನು ಕಂಡು ಕೊಂಡಿದ್ದೇ, ಈಗ  ಜಮೀನಿನಲ್ಲಿ ಮಹಣ್ತೀದ ಬದಲಾವಣೆಗಳನ್ನು ತಂದಿದ್ದಾರೆ ವಿಷ್ಣು.

ಇವರು ಸಾವಯವ ಕೃಷಿ.  ಒಂದು ಮಿಶ್ರ ತಳಿ, ಎಂಟು ಗಿರ್‌, ಮಲಾ°ಡ್‌ ಗಿಡ್ಡ ದೇಸೀ ತಳಿಯ ಹಸುಗಳನ್ನು ಸಾಕಿದ್ದಾರೆ. ಈ ಹಸುಗಳ ಸಗಣಿಯನ್ನು ನೇರವಾಗಿ ಬಳಸಿದರೆ ಸಾಕಾಗುವುದಿಲ್ಲ, ಪ್ರತಿಫ‌ಲವೂ ಕಡಿಮೆ ಎಂದು ತಮ್ಮದೇ ಯೋಚನೆಯಲ್ಲಿ ರೂಪಗೊಂಡ ಕೃಷಿ ಸಂಜೀನಿ ಸಾವಯವ ಗೊಬ್ಬರವನ್ನು ತಯಾರಿಸಿ ಬಳಸಿ ನೋಡಿದರು. ಇದರಿಂದ ತೋಟದ ತೆಂಗು ತೊನೆದೂಗಿದವು. ಅಡಿಕೆ ಮರದಲ್ಲಿ ನಾಲ್ಕರಿಂದ ಐದು ಭರ್ತಿ ಗೊನೆಗಳು ತುಂಬಿಕೊಂಡವು. ಈಗ ವಿಷ್ಣುಕಿರಣ ಕಂಡುಹಿಡಿದ ಈ ಗೊಬ್ಬರಕ್ಕಾಗಿ ಬೇರೆ ಕೃಷಿಕರು ಕಾದು ನಿಲ್ಲುತ್ತಿದ್ದಾರೆ. ಇದನ್ನೇ ಉದ್ಯಮವಾಗಿ ಮಾಡಲು ಅವರಿಗೆ ಇಷ್ಟವಿಲ್ಲ. ಹಾಗಾಗಿ, ತಾನು ಬಳಸಿ ಮಿಗುವ ಒಂದೂವರೆ ಟನ್‌ ಗೊಬ್ಬರವನ್ನು ಪ್ರತೀ ತಿಂಗಳೂ ಇತರ ರೈತರಿಗೆ ಕೊಡುತ್ತಾರೆ. ಅಡಿಕೆ ಮರಕ್ಕೆ ಈ ಗೊಬ್ಬರ ಬಳಸಿದರೆ ಫ‌ಸಲು ಅಧಿಕವಷ್ಟೇ ಅಲ್ಲ, ನಳ್ಳಿ ಉದುರುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಮರದ ಬುಡದಲ್ಲಿ ತೇವಾಂಶ ಹೆಚ್ಚಾಗಿ ಉಳಿಯುವುದರಿಂದ ನೀರಿನ ಮಿತ ಬಳಕೆ ಮಾಡಬಹುದು.

ವಿಷ್ಣುಕಿರಣ ಗೊಬ್ಬರ ತಯಾರಿಸುವ ಬಗೆಯೂ ವಿಶಿಷ್ಟವಾಗಿದೆ. ಕಾಂಕ್ರೀಟಿನ ತೊಟ್ಟಿಯೊಂದರಲ್ಲಿ ದಿನವೂ ಕಸರಹಿತವಾಗಿ ಸೆಗಣಿಯನ್ನು ಸಂಗ್ರಹಿಸುತ್ತಾರೆ. ಇನ್ನೊಂದು ತೊಟ್ಟಿಯಲ್ಲಿ ಒಂದು ಪದರ ಹರಡಿ, ಅದಕ್ಕೆ ಬೇವಿನಹಿಂಡಿ ಸೇರಿಸುತ್ತಾರೆ. ಮತ್ತೆ ಒಂದು ಪದರ ಸೆಗಣಿ ಬಳಿಕ ಇದೇ ಕ್ರಮದಲ್ಲಿ ಹೊಂಗೆ ಹಿಂಡಿ, ಹರಳಿಂಡಿ, ಶಿಲಾರಂಜಕಗಳನ್ನು ಮಿಶ್ರ ಮಾಡುತ್ತಾರೆ. ಗೋಮೂತ್ರ, ಕಪ್ಪುಬೆಲ್ಲ, ಬೇಲಿ ಬಳಿಯ ಸತ್ವಯುತ ಮಣ್ಣು, ದ್ವಿದಳ ಧಾನ್ಯದ ಹುಡಿ ಇತ್ಯಾದಿಗಳ ಮಿಶ್ರಣವನ್ನು ಕೊಳೆಯಿಸಿ, ಮಥಿಸಿ ತಯಾರಾದ ಜೀವಾಮೃತವನ್ನು ಇದರೊಂದಿಗೆ ಬೆರೆಸುತ್ತಾರೆ. 45 ದಿನಗಳ ಕಾಲ ಗಾಳಿಯಾಡದಂತೆ ಟಾರ್ಪಾಲಿನ್‌ ಮುಚ್ಚಿಡುತ್ತಾರೆ. ಬಳಿಕ ಜರಡಿ ಹಿಡಿದರೆ ಅದು ಕೃಷಿ ಬಳಕೆಗೆ ಯೋಗ್ಯವಾದ ಸಂಜೀವಿನಿ.

Advertisement

ಈ ಗೊಬ್ಬರವನ್ನು ಹೂ ಗಿಡಗಳು, ತರಕಾರಿ ಗಿಡಗಳಿಗೆ ಒಂದೆರಡು ಹಿಡಿ ವಾರಕ್ಕೊಮ್ಮೆ ಹಾಕಿದರೂ ಅದರ ಅದ್ಭುತ ಪರಿಣಾಮವನ್ನು ತೋರಿಸುತ್ತದೆ. ಹೀಗಾಗಿ,  ಅಂಥೋರಿಯಮ್‌, ಡೇಲಿಯಾ ಮೊದಲಾದ ಗಿಡಗಳಲ್ಲಿ ಹೂ ತುಂಬಿ ಬಾಗುತ್ತಿವೆ, ಬೀನ್ಸ್‌ ಬಳ್ಳಿಯಿಂದ ಕೈತುಂಬ ಕಾಯಿ ಕೊಯ್ಯುತ್ತಿದ್ದಾರೆ. ಅಪರೂಪದ ನೆಲ್ಲಿಕಾಯಿ ಗಾತ್ರದ ನಾಟಿ ಟೊಮೆಟೊ ಗಿಡ ಕೆಂಪು ಕೆಂಪು ಹಣ್ಣುಗಳಿಂದ ತುಂಬಿಕೊಂಡಿದೆ.  ಈ ಗೊಬ್ಬರ ಬಳಸಿ ಬೆಳೆದ ಕಾಯಿಗಳು ಕೊಳೆಯುವುದಿಲ್ಲ, ಹೆಚ್ಚು ದಿನ ಉಳಿಯುತ್ತವೆ. ಬೇಯುವಾಗಲೇ ಹೊಸ ಪರಿಮಳ ಬರುತ್ತದೆ. ರುಚಿಯೂ ಹೆಚ್ಚು ಎನ್ನುತ್ತಾರೆ.  ಮಿಣ್ಣಿನಲ್ಲಿ ಸೂಕ್ಷ್ಮ ಜೀಗಳು ವೃದ್ಧಿಯಾಗುತ್ತಿವೆ ಎನ್ನುವುದಕ್ಕೆ ಗೊಬ್ಬರದ ಎಡೆಯಿಂದ ಮೊಣಕೈ ಗಾತ್ರದ ಎರೆಹುಳಗಳನ್ನು ಎಳೆದು ತೋರಿಸುತ್ತಾರೆ. ಪ್ರತೀ ವರ್ಷ ಫ‌ಸಲು ಹೆಚ್ಚುತ್ತದೆ. ಪರಿಸರಕ್ಕೆ ಪೂರಕವಾಗಿರುವ,  ವಾಸನೆ ಇಲ್ಲದ ಈ ಗೊಬ್ಬರವನ್ನು ಬೇರೆಡೆಗೆ ಸಾಗಿಸುವಾಗ ಕಿರಿಕಿರಿ ಇಲ್ಲ ಎನ್ನುತ್ತಾರೆ ವಿಷ್ಣುಕಿರಣ. 

ಭತ್ತ, ಬಾಳೆ ಸೇರಿದಂತೆ ಎಲ್ಲ ತೋಟಗಾರಿಕೆ ವ್ಯವಸಾಯಕ್ಕೂ ಈ ಗೊಬ್ಬರ ಬಳಕೆ ಮಾಡಿ ಫ‌ಲಿತಾಂಶ ಕಂಡುಕೊಂಡಿರುವ ವಿಷ್ಣುಕಿರಣ ಒಂದು ಅಡಿಕೆ ಮರಕ್ಕೆ ಇದನ್ನು ಎರಡರಿಂದ ನಾಲ್ಕು ಕಿಲೋದಷ್ಟು ಹಾಕಿದರೆ ಸಾಕಂತೆ. ಹಸಿರೆಲೆ ಗೊಬ್ಬರ ತಯಾರಿಸಲು ಒಂದು ಬುಟ್ಟಿಗೆ ಐವತ್ತು ರೂಪಾಯಿ ಖರ್ಚಾಗುತ್ತದೆ. ಪರಿಣಾಮ ಕಡಿಮೆ. ಆದರೆ ಇದರಲ್ಲಿ ಹಣ, ಶ್ರಮ ಉಳಿತಾಯವಾಗಿ ಹೆಚ್ಚು ಲಾಭ ಸಿಗುತ್ತದೆ. ತೆಂಗಿನಮರಕ್ಕೆ ನಾಲ್ಕರಿಂದ ಎಂಟು ಕಿಲೋ ಹಾಕಬಹುದು. ಸಾರಜನಕ, ರಂಜಕ, ಪೊಟ್ಯಾಷ್‌, ಸತು ಎಲ್ಲವೂ ಅಗತ್ಯವಾದ ಪರಿಮಾಣದಲ್ಲಿದ್ದು ಬೇಕಾದಾಗ ನಿಧಾನವಾಗಿ ಬಿಡುಗಡೆಯಾಗುವುದು ಇದರ ಗುಣ ಎಂದು ವರ್ಣಿಸುತ್ತಾರೆ.

ತರಕಾರಿ, ಹೂಗಿಡಗಳ ಕೀಟ, ರೋಗ, ಶಿಲೀಂಧ್ರ ಬಾಧೆಗಳ ಶಮನಕ್ಕೆ ವಿಷ್ಣುಕಿರಣ ಕಂಡು ಹಿಡಿದಿರುವ ಕೀಟನಾಶಕದಲ್ಲಿ ಇಪ್ಪತ್ನಾಲ್ಕು ಗಿಡಮೂಲಿಕೆಗಳ ಸಾರ ಅಡಗಿದೆ. ಗೋಮೂತ್ರ, ಮಜ್ಜಿಗೆ, ಬೇವಿನ ಸಾರವಿದೆ. ಒಂದು ಲೀಟರ್‌ ನೀರಿಗೆ 50ಮಿ. ಲೀ. ಈ ಔಷಧವನ್ನು ಬೆರೆಸಿ ಬುಡಕ್ಕೆ ಹೋದರೆ ಗೊಬ್ಬರವಾಗಿ ಬೆಳೆಗಳನ್ನು ಸಮೃದ್ಧಗೊಳಿಸುತ್ತದೆ.

ತಾವು ಸಾಕುತ್ತಿರುವ ಹಸುಗಳಿಗೆ ವಿಷ್ಣುಕಿರಣ ಅತ್ಯಧಿಕ ಪ್ರಮಾಣದಲ್ಲಿ ಹೈಡ್ರೋಪೋನಿಕ್‌ ವಿಧಾನದಲ್ಲಿ ತಯಾರಿಸಿದ ಮೇವನ್ನು ಬಳಸುವ ಮೂಲಕ ಹಣ ಉಳಿತಾಯವಾಗುತ್ತದೆ, ಹೆಚ್ಚು ಫ‌ಲ ಸಿಗುತ್ತದೆಂಬುದನ್ನು ತೋರಿಸಿಕೊಡುತ್ತಾರೆ. ಮೇವು ತಯಾರಿಸಲು ಪ್ರತ್ಯೇಕವಾಗಿ “ಹಸಿರುಮನೆ’ ಕಟ್ಟಿದ್ದಾರೆ. ಕಡಿಮೆ ಬೆಲೆಗೆ ಸಿಗುವ ಧಾನ್ಯವೆಂದರೆ ಮೆಕ್ಕೆಜೋಳ. ಬೆಂಗಳೂರಿನಿಂದ ಅದನ್ನು ತರಿಸುತ್ತಾರೆ. ಇಪ್ಪತ್ನಾಲ್ಕು ತಾಸು ನೀರಿನಲ್ಲಿ ನೆನೆಸಿದ ಕಾಳುಗಳನ್ನು 48 ತಾಸುಗಳ ಕಾಲ ಬೆಚ್ಚಗೆ ಗೋಣಿಚೀಲದಲ್ಲಿ ಕಟ್ಟುತ್ತಾರೆ. ಮೊಳಕೆಯೊಡೆಯುವ ಕಾಳುಗಳನ್ನು ಟ್ರೇಗಳಲ್ಲಿ ಹರಡಿ ಹಸಿರುಮನೆಯೊಳಗಿರಿಸಿ ಗಿಡಗಳು ಒಣಗದಂತೆ ನೀರಿನ ಹನಿಗಳನ್ನು ಸಿಂಪಡಿಸುತ್ತ ಇರುತ್ತಾರೆ. 

ಎಂಟು ದಿನಗಳಾದ ಗಿಡಗಳ ಪದರವನ್ನು ಕಿತ್ತು ಬಿಡಿಸಿ ಒಂದು ಹಸುವಿಗೆ ಆರರಿಂದ ಹತ್ತು ಕಿ.ಲೊ ತನಕ ಕೊಡುತ್ತಾರೆ. ಹೈಡ್ರೋಪೋನಿಕ್‌ ಮೇವು ನೀಡಿದರೆ ಹಸಿರಮೇವು ಕಡಿಮೆ ಕೊಡಬಹುದು, ಸ್ವಲ್ಪ ಒಣಮೇವು ಕೊಟ್ಟರೆ ಸಾಕು, ಹಿಂಡಿಯ ಪ್ರಮಾಣದಲ್ಲಿ ದಿನಕ್ಕೆ ನಾಲ್ಕು ಕಿಲೋ ಉಳಿಸಿದರೂ ಹಾಲಿನ ಪ್ರಮಾಣ ಇಳಿಯುವುದಿಲ್ಲವಂತೆ. 

– ಪ. ರಾಮಕೃಷ್ಣ ಶಾಸ್ತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next