ಕಲಬುರಗಿ: ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಬಾಕಿಯಿರುವ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಹಾಗೂ ನಿಗದಿತ 3500 ರೂ. ವೇತನ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷಕ್ಷ ಎಸ್.ಎಂ.ಶರ್ಮಾ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸುಮಾರು 6 ತಿಂಗಳಿಂದ ಬರಬೇಕಾಗಿರುವ ಕೇಂದ್ರ ಪ್ರೋತ್ಸಾಹ ಧನ ಈ ಕೂಡಲೇ ಬಿಡುಗಡೆ ಮಾಡಬೇಕು. ನಿಗದಿತ ವೇತನ 3500 ರೂ.ಗಳನ್ನು ಜಿಲ್ಲೆಯ ಎಲ್ಲ ಆಶಾಕಾರ್ಯಕರ್ತೆಯರಿಗೆ ಸಮರ್ಪಕವಾಗಿ ಒದಗಿಸಬೇಕು. ಕೇಂದ್ರ ಸರ್ಕಾರ ಹೆಚ್ಚಿಸಿರುವ 1000 ರೂ. ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲ ರೀತಿಯ ಸರ್ವೆ ನಿಗದಿತ ಹಣವನ್ನು ಸರಿಯಾದ ಸಮಯಕ್ಕೆ ನೀಡಬೇಕು. ಆಶಾ ಕಾರ್ಯಕರ್ತೆಯರ ಯಾವುದೇ ರೀತಿಯ ವೇತನವನ್ನು ನಿಗದಿತ ತಿಂಗಳು ಹಾಗೂ ದಿನಾಂಕದೊಂದಿಗೆ ಬ್ಯಾಂಕ್ ಪಾಸ್‌ಬುಕ್ ನಲ್ಲಿ ನಮೂದಿಸಬೇಕು. ಜಿಲ್ಲೆಯ ಎಲ್ಲ ತಾಲೂಕು
ಪಿಎಚ್‌ಸಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಆಶಾ ವಿಶ್ರಾಂತಿ ಕೋಣೆ ನಿರ್ಮಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಸಿಮ್ ಕಾರ್ಡ್ ಸಮರ್ಪಕವಾಗಿ ವಿತರಿಸಬೇಕು. ಪ್ರತಿ ವರ್ಷ ಎರಡು ಜತೆ ಆಶಾ ಸಮವಸ್ತ್ರ ವಿತರಿಸಬೇಕು.
ಬಲವಂತವಾಗಿ ಸ್ಟೂಟಮ್ ಸಂಗ್ರಹ ನಿಲ್ಲಿಸಬೇಕು. ಆಶಾ ಕಾರ್ಯಕರ್ತೆಯರ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ನಡೆಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಚಂದಮ್ಮ, ವಿ.ಜಿ. ದೇಸಾಯಿ, ನಿಂಗಣ್ಣ ಜಂಬಗಿ, ಶಿವಲಿಂಗಮ್ಮ, ನಾಗವೇಣಿ, ಕವಿತಾ, ಚನ್ನಮ್ಮ, ಸಿದ್ದಮ್ಮ, ಗೌರಮ್ಮ, ಲಕ್ಷ್ಮೀ, ಭಾಗ್ಯಶ್ರೀ, ಅನಸುಯಾ, ಬಸಮ್ಮ, ಕವಿತಾ, ಲಕ್ಷ್ಮೀ, ವಿದ್ಯಾವತಿ, ಬಕ್ಕಮ್ಮ ಭಾಗವಹಿಸಿದ್ದರು.