ಸ್ಟಾರ್ಗಳು ಈಗ ತಮ್ಮನ್ನು ನೋಡಲೇಬೇಕೆಂದು ಉತ್ಕಟವಾಗಿ ಆಸೆ ಪಡುವ, ಅನಾರೋಗ್ಯಕ್ಕೊಳಗಾಗಿದ್ದುಕೊಂಡೂ ನೆಚ್ಚಿನ ನಟನನ್ನು ನೋಡಲು ಬಯಸುವ ಅಭಿಮಾನಿಗಳ ಆಸೆ ಈಡೇರಿಸುತ್ತಿದ್ದಾರೆ. ಈ ಮೂಲಕ ಸ್ಟಾರ್ ನಟರು ಅಭಿಮಾನಿ ವರ್ಗಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಮೊನ್ನೆಯಷ್ಟೇ ಶಿವರಾಜಕುಮಾರ್ ಮೈಸೂರಿನ ಅಭಿಮಾನಿಯೊಬ್ಬರನ್ನು ಕರೆಸಿಕೊಂಡು ಭೇಟಿಯಾಗಿ ಅವರ ಆಸೆ ಈಡೇರಿಸಿದ ಬೆನ್ನಲ್ಲೇ ಈಗ ಪುನೀತ್ ರಾಜಕುಮಾರ್ ಹಾಗೂ ಸುದೀಪ್ ಕೂಡಾ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿ ಅವರ ಆಸೆ ಈಡೇರಿಸಿದ್ದಾರೆ.
ದಾವಣಗೆರೆಯ ಪ್ರೀತಿ ಎಂಬ 12 ವರ್ಷದ ಪುಟ್ಟ ಅಭಿಮಾನಿಗೆ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಬೇಕೆಂಬ ಆಸೆ. ಆದರೆ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರೀತಿಗೆ ಅದು ಸಾಧ್ಯವಾಗಿರಲಿಲ್ಲ. ಈ ವಿಷಯ ಪುನೀತ್ ಕಿವಿಗೆ ಬಿದ್ದಿದೆ. ಸಾಕಷ್ಟು ದಿನಗಳಿಂದ ಅಭಿಮಾನಿಯನ್ನು ಭೇಟಿಯಾಗಬೇಕೆಂದುಕೊಂಡಿದ್ದ ಪುನೀತ್ಗೆ ಅದು ಸೋಮವಾರ ಸಾಧ್ಯವಾಗಿದೆ. “ಅಂಜನಿ ಪುತ್ರ’ ಚಿತ್ರೀಕರಣದ ಸೆಟ್ಗೆ ಪ್ರೀತಿಯನ್ನು ಕರೆಸಿಕೊಂಡ ಪುನೀತ್, ಒಂದಷ್ಟು ಹೊತ್ತು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಅವರ ಚಿಕಿತ್ಸೆಗೆ ಸಹಾಯ ಮಾಡುವುದಾಗಿಯೂ ಹೇಳಿದ್ದಾರೆ.
ಈ ಮೂಲಕ ಪುನೀತ್ ರಾಜಕುಮಾರ್ ತಮ್ಮ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ಪುನೀತ್ ಅವರ ಭೇಟಿಯಾಗಿ ಪ್ರೀತಿ ಹಾಗೂ ಅವರ ಕುಟುಂಬ ಕೂಡಾ ಖುಷಿಯಾಗಿದೆ. ಇದು ಪುನೀತ್ ತನ್ನ ಅಭಿಮಾನಿಯನ್ನು ಭೇಟಿಯಾದ ಕಥೆಯಾದರೆ, ಸುದೀಪ್ ಕೂಡಾ ಭಾನುವಾರ ತಮ್ಮ ಇಬ್ಬರು ಅಭಿಮಾನಿಗಳನ್ನು ಮನೆಗೆ ಕರೆಸಿಕೊಂಡು ಅವರ ಆಸೆ ಈಡೇರಿಸಿದ್ದಾರೆ. ಇತ್ತೀಚೆಗೆ “ಹೆಬ್ಬುಲಿ’ ಚಿತ್ರದ ಪ್ರಚಾರದ ವೇಳೆ ಬೆಳಗಾವಿಗೆ ಭೇಟಿ ಕೊಡಲಿಲ್ಲ ಎಂದು ಬೇಸರಗೊಂಡ ಸುದೀಪ್ ಅವರ ಇಬ್ಬರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ಆ ಸಮಯದಲ್ಲಿ ಸುದೀಪ್, “ದುಡುಕಬೇಡಿ, ನಿಮ್ಮನ್ನು ಭೇಟಿಯಾಗುತ್ತೇನೆ’ ಎಂಬ ಭರವಸೆ ನೀಡಿದ್ದರು. ಈಗ ಅಭಿಮಾನಿಗಳಿಗೆ ನೀಡಿದ ಭರವಸೆಯನ್ನು ಸುದೀಪ್ ಈಡೇರಿಸಿದ್ದಾರೆ. ಭಾನುವಾರ ಸಚಿನ್ ಹಾಗೂ ಪ್ರವೀಣ್ ಎಂಬ ಆ ಇಬ್ಬರು ಅಭಿಮಾನಿಗಳನ್ನು ಮನೆಗೆ ಕರೆಸಿಕೊಂಡ ಸುದೀಪ್, ಅವರ ಆಸೆ ಈಡೇರಿಸುವ ಜೊತೆಗೆ ಯಾವ ಕಾರಣಕ್ಕೂ ಯಾವುದೇ ರೀತಿಯ ದುಷ್ಕೃತ್ಯಕ್ಕೆ ಕೈ ಹಾಕಬಾರದು ಎಂದು ಬುದ್ಧಿವಾದ ಕೂಡಾ ಹೇಳಿದ್ದಾರೆ. ಸುದೀಪ್ ಅವರನ್ನು ನೋಡಿ ಖುಷಿಯಾದ ಅಭಿಮಾನಿಗಳು ತಮ್ಮ ಕ್ಷಮೆ ಕೇಳಿ ಖುಷಿಯಿಂದ ವಾಪಾಸ್ಸಾಗಿದ್ದಾರೆ.