ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್ಕೆಸಿಸಿಐ) ಆಯೋಜಿಸುತ್ತಿರುವ ಮೂರು ದಿನಗಳ ಆಸಿಯನ್ ವಾಣಿಜ್ಯ ಮೇಳವನ್ನು ಫೆ.25ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಫ್ಕೆಸಿಸಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರದ ಸಹಯೋಗದಲ್ಲಿ ದೇಶದ ಮೊದಲ ಆಸಿಯನ್ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ವಾಣಿಜ್ಯ ಮೇಳ ಹಮ್ಮಿಕೊಂಡಿದ್ದೇವೆ. ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ರಫ್ತು ಮತ್ತು ಆಮದು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 30 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಮೇಳದಲ್ಲಿ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ವಿವಿಧ ಗೋಷ್ಠಿಗಳು, ವಿಷಯ ಮಂಡನೆ ನಡೆಯಲಿದೆ. 2 ಸಾವಿರ ಪ್ರತಿನಿಧಿಗಳು, 125 ಭಾಷಣಕಾರರು, 1500 ಸಂಸ್ಥೆಗಳು ಹಾಗೂ 120 ಪ್ರದರ್ಶನ ಮಳಿಗೆಗಳು ಇರಲಿದೆ ಎಂದು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಸಹಿತವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುರೇಶ್ ಪ್ರಭು, ನಿರ್ಮಲಾ ಸೀತಾರಾಮನ್, ಸದಾನಂದಗೌಡ, ಅನಂತ್‌ಕುಮಾರ್ ಹಗಡೆ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮೊದಲಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು. 30 ಮಂದಿ ರಾಯಭಾರಿಗಳು, 12 ಗೌರವ ಕೌನ್ಸೆಲ್ಸ್ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಬಾಹ್ಯಾಕಾಶ, ರಕ್ಷಣೆ, ಅಟೊಮೊಬೈಲ್, ಆಟೊಕಾಂಪೊನೆಂಟ್, ಮೂಲಸೌಕರ್ಯ,
ತೋಟಗಾರಿಕೆ, ಆಹರಾ ಸಂಸ್ಕರಣೆ, ನವೀಕರಿಸಬಹುದಾದ ಇಂಧನ, ಚಿನ್ನಾಭರಣ, ಮೆಡಿಕಲ್ ಎಲೆಕ್ಟ್ರಾನಿಕ್ಸ್, ಜವಳಿ ಮತ್ತು ಗಾರ್ಮೆಂಟ್ಸ್, ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್‌ಅಪ್ ಹಾಗೂ ಪ್ರವಾಸೋದ್ಯಮ ಮತ್ತು ಲಾಜೆಸ್ಟಿಕ್ ಮೊದಲಾದ ವಿಷಯದ ಕುರಿತು ಸಮಗ್ರ ವಿಚಾರ ವಿನಿಯಮ ನಡೆಯಲಿದೆ ಎಂದರು.