Advertisement

ಮಳೆಗಾಲ ಶುರುವಾದಂತೆ ಮರಳು ದಂಧೆ ಕರಿನೆರಳು

07:25 AM Jun 17, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಬರದ ಜಿಲ್ಲೆಯಲ್ಲಿ ಮಳೆಗಾಲ ಶುರುವಾದಂತೆ ಅಕ್ರಮ ಮರಳು ದಂಧೆ ಮತ್ತೆ ಎಗ್ಗಿಲ್ಲದೇ ತಲೆ ಎತ್ತಿದ್ದು, ಮಳೆ ನೀರು ಹರಿದು ಕೆರೆ, ಕುಂಟೆಗಳಲ್ಲಿ ಹಾಗೂ ರಾಜಕಾಲುವೆಗಳಲ್ಲಿ ಸಂಗ್ರಹವಾಗಿರುವ ಮರಳು ಸಾಗಾಟಕ್ಕೆ ದಂಧೆಕೋರರ ನಡುವೆ ಪೈಪೋಟಿ ನಡೆಯುತ್ತಿದ್ದು, ನಿತ್ಯ ನಗರ, ಪಟ್ಟಣಗಳಿಗೆ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮ ಮರಳು ಸಾಗಾಟ ಶುರುವಾಗಿದೆ.

Advertisement

ಮರಳು ದಂಧೆ ಕಾರುಬಾರು: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಬರಗಾಲ ಆವರಿಸಿದ ಹಿನ್ನಲೆಯಲ್ಲಿ ಮರಳು ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಿತ್ತು. ಪೊಲೀಸ್‌ ಇಲಾಖೆ ಕೂಡ ಅಕ್ರಮವಾಗಿ ಲಾರಿಗಳಲ್ಲಿ ಮರಳು ಸಾಗಾಟಕ್ಕೆ ಬ್ರೇಕ್‌ ಹಾಕಿತ್ತು. ಆದರೆ ಜಿಲ್ಲೆಯಲೀಗ ಮಳೆಗಾಲ ಶುರುವಾಗುತ್ತಿದ್ದಂತೆ ಮತ್ತೆ ಅಕ್ರಮ ಮರಳು ದಂಧೆಯ ಕಾರುಬಾರು ಜೋರಾಗಿ ಸದ್ದು ಮಾಡುತ್ತಿರುವುದು ಕಂದಾಯ ಹಾಗೂ ಪೊಲೀಸ್‌ ಇಲಾಖೆ ಕಾರ್ಯವೈಖರಿಯನ್ನು ಅನುಮಾನದಿಂದ ನೋಡುವಂತಾಗಿದೆ.

ಕೆರೆ, ಕುಂಟೆಗಳಲ್ಲಿ ಗುಂಡಿ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯು ಮಿತಿಮೀರಿದೆ. ಕೆರೆ, ಕುಂಟೆಗಳಲ್ಲಿ ನೀರು ಇಲ್ಲದೇ ಬರಿದಾಗಿ ಬರ ತಾಂಡವವಾಡುತ್ತಿದೆ. ಜಿಲ್ಲೆಯ ಯಾವುದೇ ಮೂಲೆಗೆ ಹೋದರೂ ಕೆರೆ, ಕುಂಟೆಗಳಲ್ಲಿ ದೊಡ್ಡ ದೊಡ್ಡ ಗುಂಡಿ ಹಾಗೂ ಹಳ್ಳಗಳನ್ನು ತೋಡಿ ಮರಳು ತೆಗೆದಿರುವ ಕುರುಹುಗಳು ಎದ್ದು ಕಾಣುತ್ತಿವೆ.

ಸತತ ಹತ್ತಾರು ವರ್ಷಗಳಿಂದಲೂ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಒಂದು ಕಾಲಕ್ಕೆ ಎಗ್ಗಿಲ್ಲದೇ ರಾಜಕಾರಣಿಗಳ ಹಾಗೂ ಪೊಲೀಸ್‌ ಇಲಾಖೆಗಳ ನೆರಳಿನಲ್ಲಿ ನಡೆದ ಮರಳು ದಂಧೆಯೇ ಜಿಲ್ಲೆಯಲ್ಲಿ ಅತಿಯಾದ ಜಲಕ್ಷಾಮಕ್ಕೆ ಕಾರಣವಾಗಿದೆ.

ಜಿಲ್ಲೆಗೆ ಬರುವ ಕೆಲ ನಿಷ್ಠಾವಂತ ಪೊಲೀಸ್‌ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕಾಳಜಿ ವಹಿಸಿ ಅಕ್ರಮ ಮರಳು ದಂಧೆಯ ಆಟೋಟಕ್ಕೆ ಕಡಿವಾಣ ಹಾಕುತ್ತಿದ್ದರು. ಸದ್ಯ ದಂಧೆಗೆ ಬ್ರೇಕ್‌ ಬಿದ್ದಿದೆಯಾದರೂ ಮಳೆಗಾಲ ಶುರುವಾದಂತೆ ಮತ್ತೆ ರಾಜಾರೋಷವಾಗಿ ನಡೆಯುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.

Advertisement

ಟ್ರ್ಯಾಕ್ಟರ್‌ಗಳಲ್ಲಿ ತಂದು ಲಾರಿಗೆ ತುಂಬಿಸುತ್ತಾರೆ: ಸದ್ಯ ಜಿಲ್ಲೆಯಲ್ಲಿ ಅಕ್ರಮ ಮರಳು ಲಾರಿಗಳ ಸದ್ದು ಕಡಿಮೆಯಾದರೂ ಟ್ರ್ಯಾಕ್ಟರ್‌ಗಳ ಆರ್ಭಟ ಮಾತ್ರ ಜೋರಾಗಿಯೇ ಕಾಣುತ್ತಿದೆ. ಚಿಂತಾಮಣಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಅಕ್ರಮ ಮರಳು ಸಾಗಾಟ ತಲೆ ಎತ್ತಿದ್ದು, ನಿತ್ಯ ಕೆರೆ, ಕುಂಟೆಗಳಲ್ಲಿನ ಮರಳು ಸಂಗ್ರಹಿಸಿ ರಾಜಧಾನಿ ಬೆಂಗಳೂರಿಗೆ ಸೇರಿದಂತೆ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ನಿರ್ಮಿಸಲಾಗುತ್ತಿರುವ ಗೃಹ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಬಳಕೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ.

ಲಾರಿಗಳಲ್ಲಿ ಮರಳು ಸಾಗಿಸಿದರೆ ಅನುಮಾನ ಬರುತ್ತದೆ ಎಂದು ಈಗ ಟ್ರ್ಯಾಕ್ಟರ್‌ಗಳಲ್ಲಿ ಮರಳು ತುಂಬಿಸಿಕೊಂಡು ಮತ್ತೆ ಲಾರಿಗಳಿಗೆ ತುಂಬಿಸುವ ಕೆಲಸ ನಡೆಯುತ್ತಿದೆ. ಆಧುನಿಕವಾಗಿ ಎಷ್ಟೇ ಎಂ.ಸ್ಯಾಂಡ್‌ ಮರಳನ್ನು ಸರ್ಕಾರ ಬಳಕೆಗೆ ಉತ್ತೇಜ ನೀಡುತ್ತಿದ್ದರೂ ಮರಳಿಗೆ ವ್ಯಾಪಕ ಬೇಡಿಕೆ ಇರುವುದರಿಂದ ಬೆಂಗಳೂರಿನಲ್ಲಿ ನಿರ್ಮಿಸುವ ಬೃಹದಾಕಾರದ ವಾಣಿಜ್ಯ ಕಟ್ಟಡಗಳಿಗೆ ಇಲ್ಲಿಂದ ಮರಳು ಸಾಗಿಸುತ್ತಿದ್ದಾರೆ.

ಈ ರೀತಿ ಅಕ್ರಮ ಮರಳು ಸಾಗಾಟಕ್ಕೆ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕೆಲ ಪೇದೆಗಳೇ ದಂಧೆಗೆ ಪೋಷಣೆಯಾಗಿ ನಿಂತಿದ್ದಾರೆಂಬ ಆರೋಪ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸುವ ಪ್ರವೃತ್ತಿ ಕೈ ಬಿಟ್ಟಿರುವುದಕ್ಕೆ ಮತ್ತೆ ದಂಧೆ ಶುರವಾಗಿದೆಯೆಂಬ ಆರೋಪವಿದೆ.

ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ, ಬಟ್ಲಹಳ್ಳಿ, ಕೆಂಚಾರ‌್ಲಹಳ್ಳಿ, ಗೌರಿಬಿದನೂರಿನ ಮಂಚೇನಹಳ್ಳಿ, ಶಿಡ್ಲಘಟ್ಟದ ದಿಬ್ಬೂರು, ಚಿಕ್ಕಬಳ್ಳಾಪುರದ ಗ್ರಾಮಾಂತರ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಶುರುವಾಗಿದೆ.

ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಮುಖ ಜವಾಬ್ದಾರಿ ವಹಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಈಗ ಮರಳು ದಂಧೆಯ ಬಗ್ಗೆ ಮೌನ ವಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕಡಿವಾಣ ಹಾಕಬೇಕಿದೆ.

ಮಾಮೂಲಿ ಕೊಟ್ಟರೆ ಟ್ರ್ಯಾಕ್ಟರ್‌ ಬಿಡ್ತಾರಂತೆ: ಚಿಂತಾಮಣಿ ಗ್ರಾಮಾಂತರ ಠಾಣೆ ಆವರಣದಲ್ಲಿ ಭಾನುವಾರ ಒಂದೇ ದಿನ 10 ಕ್ಕೂ ಹೆಚ್ಚು ಮರಳು ಟ್ರ್ಯಾಕ್ಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಆದರೆ ಕೆಲ ಟ್ರ್ಯಾಕ್ಟರ್‌ ಮಾಲೀಕರೇ ಆರೋಪಿಸುವಂತೆ ಪೊಲೀಸರಿಗೆ ಮಾಮೂಲಿ ಕೊಟ್ಟರೆ ಬಿಡುತ್ತಾರೆ. ಇಲ್ಲದಿದ್ದರೆ ಕೇಸ್‌ ಹಾಕಿ ಠಾಣೆಗೆ ಕರೆಸುತ್ತಾರೆಂದು ಹೆಸರು ಹೇಳಲು ಇಚ್ಛಿಸದ ಟ್ರ್ಯಾಕ್ಟರ್‌ ಚಾಲಕ ದೂರಿದರು. ಟ್ರ್ಯಾಕ್ಟರ್‌ಗೆ 150 ರಿಂದ 200 ರೂ. ಕೊಡಬೇಕು. ಇಲ್ಲ ಅಂದರೆ ಪರವಾನಿಗೆ ಪಡೆದಿಲ್ಲ ಎಂದು ಎಫ್ಐಆರ್‌ ಹಾಕುತ್ತಾರೆ. ಮರಳು ಸಾಗಾಟಕ್ಕೆ ಪೊಲೀಸರ ಸಹಕಾರ ಇದೆ ಎಂಬ ಆರೋಪ ಮಾಡಿದರು.

ಗಣಿ ಇಲಾಖೆ ಅಧಿಕಾರಿಗಳು ನಾಪತ್ತೆ: ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿಂದು ಕೆರೆ, ಕುಂಟೆಗಳು ನೀರಿಲ್ಲದೇ ಬತ್ತಿ ಹೋಗಿರಲು ಅಕ್ರಮ ಮರಳು ದಂಧೆ ಕಾರಣವಾಗಿದ್ದು, ಈ ದಂಧೆಗೆ ಗಣಿ ಇಲಾಖೆ ಅಧಿಕಾರಿಗಳ ಕೊಡುಗೆಯು ಇದೆ.

ಅಕ್ರಮದ ಬಗ್ಗೆ ಚಕಾರ ಎತ್ತದ ಇಲಾಖೆ ಅಧಿಕಾರಿಗಳು ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳುವ ಮರಳು ಟ್ರ್ಯಾಕ್ಟರ್‌ ಅಥವಾ ಲಾರಿಗಳ ಮೇಲೆ ಗಣಿ ಇಲಾಖೆ ಅಧಿಕಾರಿಗಳು ಕೇಸ್‌ ದಾಖಲಿಸುತ್ತಿರುವುದು ಬಿಟ್ಟರೆ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಾಟ ಮಾಡುವ ಲಾರಿ ಅಥವಾ ಟ್ರ್ಯಾಕ್ಟರ್‌ಗಳನ್ನು ಹಿಡಿದ ಉದಾಹರಣೆಗಳಿಲ್ಲ.

ಸದ್ಯ ಜಿಲ್ಲೆಯಲ್ಲಿ ಮಳೆಗಾಲ ಶುರುವಾದಂತೆ ಅಕ್ರಮ ಮರಳು ದಂಧೆ ಮತ್ತೆ ಶುರುವಾದರೂ ಗಣಿ ಇಲಾಖೆ ಅಧಿಕಾರಿಗಳು ಮಾತ್ರ ದಂಧೆಗೆ ಕಡಿವಾಣ ಹಾಕುವ ಬದ್ಧತೆ ಹಾಗೂ ಪ್ರಾಮಾಣಿಕತೆ ತೋರದಿರುವುದು ಚರ್ಚೆಗೆ ಗ್ರಾಸವಾಗಿದೆ.

ಗಮನಕ್ಕೆ ಬಂದಿಲ್ಲ ಎಂದ ತಹಶೀಲ್ದಾರ್‌: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆರೆ, ಕುಂಟೆಗಳಲ್ಲಿ ಮತ್ತೆ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ, ಪೊಲೀಸರು ಕಾರ್ಯಾಚರಣೆ ನಡೆಸಿ ಹತ್ತಾರು ಟ್ರ್ಯಾಕ್ಟರ್‌ಗಳನ್ನು ಹಿಡಿದಿರುವ ಬಗ್ಗೆ ಉದಯವಾಣಿಗೆ ಚಿಂತಾಮಣಿ ತಹಶೀಲ್ದಾರ್‌ ವಿಶ್ವನಾಥ್‌ರವರ ಪ್ರತಿಕ್ರಿಯೆ ಕೇಳಿದರೆ, ಅಕ್ರಮ ಮರಳು ಸಾಗಾಟ ನನ್ನ ಗಮನಕ್ಕೆ ಬಂದಿಲ್ಲ ಎಂದರು. ಈ ಬಗ್ಗೆ ನಾಳೆಯಿಂದಲೇ ಕ್ರಮ ವಹಿಸುತ್ತೇವೆ. ಅಕ್ರಮ ಮರಳು ಸಾಗಾಟಕ್ಕೆ ಅವಕಾಶ ನೀಡುವುದಿಲ್ಲ ಎಂದರು.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next