Advertisement

ಚೀನಾ- ಭಾರತ ಬಾಂಧವ್ಯ ಸುಧಾರಣೆಗೆ ಜೈಶಂಕರ್‌ “ಅಷ್ಟ ಸೂತ್ರ’

10:01 PM Jan 28, 2021 | Team Udayavani |

ನವದೆಹಲಿ: ಭಾರತ- ಚೀನಾ ಬಾಂಧವ್ಯ ಕವಲು ದಾರಿಯಲ್ಲಿದೆ. ಎಂಟು ಸೂತ್ರಗಳನ್ನು ಪಾಲಿಸಿದರೆ ಬಾಂಧವ್ಯ ಮರಳಿ ಯಥಾಸ್ಥಿತಿಗೆ ಬರಲಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ 13ನೇ ಅಖೀಲ ಭಾರತ ಚೀನಾ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಗೆ ಸಂಬಂಧಿಸಿದಂತೆ ಇರುವ ಎಲ್ಲಾ ಒಪ್ಪಂದಗಳನ್ನು ಜಾರಿಗೊಳಿಸುವ ಬಗ್ಗೆ ಸಹಮತ ಇರಬೇಕು. ಏಷ್ಯಾದಲ್ಲಿ ಎರಡೂ ರಾಷ್ಟ್ರಗಳು ಪ್ರಬಲವಾಗುವ ಬಗ್ಗೆ ಪರಸ್ಪರ ಗೌರವ ಹೊಂದಿರಬೇಕು ಎಂದು ಪ್ರತಿಪಾದಿಸಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ನಡೆದ ಘಟನೆಗಳು, ಈ ಹಿಂದಿನ ಒಪ್ಪಂದ ಮತ್ತು ಯೋಧರ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ವ್ಯಕ್ತವಾಗಿದ್ದ ಸಹಮತದಿಂದ ಚೀನಾ ಹಿಂದಕ್ಕೆ ಸರಿದಂತೆ ಕಾಣುತ್ತದೆ ಎಂದೂ ಜೈಶಂಕರ್‌ ಹೇಳಿದ್ದಾರೆ. ಕಳೆದ ವರ್ಷ ನಡೆದ ಘಟನೆ ಎರಡೂ ದೇಶಗಳು ಹೊಂದಿರುವ ಬಾಂಧವ್ಯದ ಮೇಲೆ ಪ್ರತಿಕೂಲ ಛಾಯೆ ಬೀರಿರುವುದು ಸ್ಪಷ್ಟ. ಗಡಿಯಲ್ಲಿ ಶಾಂತಿ ನೆಲೆಸಿದಾಗಲೇ ಎಲ್ಲಾ ರೀತಿಯ ಅಭಿವೃದ್ಧಿ ಮತ್ತು ಸೌಹಾರ್ದಯುತ ವಾತಾವರಣ ಸೃಷ್ಟಿಯಾಗಲು ಸಾಧ್ಯ ಎಂದೂ ಹೇಳಿದ್ದಾರೆ.

ಇದನ್ನೂ ಓದಿ:ಕೋಣದ ಜತೆ 9 ವರ್ಷದ ಬಾಲಕನ ಕಂಬಳ ಓಟ ಪ್ರಾಕ್ಟಿಸ್! ಕಂಬಳದಲ್ಲೇ ಸಾಧನೆ ಮಾಡಬೇಕೆಂಬ ಹಂಬಲವಂತೆ

ಎಂಟು ಸೂತ್ರಗಳೇನು?
– ಎಲ್‌ಎಸಿಯಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಈಗಾಗಲೇ ಜಾರಿಯಾಗಿರುವ ಒಪ್ಪಂದಗಳನ್ನು ಜಾರಿಗೆ ತರಬೇಕು.

Advertisement

– ಎಲ್‌ಎಸಿಯನ್ನು ಗೌರವಿಸಬೇಕು ಮತ್ತು ಎಚ್ಚರಿಕೆ ನಿಲುವು ಹೊಂದಿರಬೇಕು. ಅದನ್ನು ಬದಲಾಯಿಸುವ ಏಕಪಕ್ಷೀಯ ನಿಲುವು ಒಪ್ಪಲು ಸಾಧ್ಯವಾಗದು.

– ಗಡಿಯಲ್ಲಿ ಶಾಂತಿ, ನೆಮ್ಮದಿ ಕಾಯ್ದುಕೊಳ್ಳುವುದೇ ಉತ್ತಮ ಬಾಂಧವ್ಯ ವೃದ್ಧಿಯ ದಾರಿಯಾಗಿರಬೇಕು. ಅದಕ್ಕೇ ಧಕ್ಕೆ ಬಂದರೆ ಉಳಿದ ಅಂಶಗಳು ನಿರ್ಲಕ್ಷಿಸಲ್ಪಡುತ್ತವೆ.

– ಎರಡೂ ದೇಶಗಳು ಬಹುಧ್ರುವೀಯ ಜಗತ್ತನ್ನು ಅಂಗೀಕರಿಸಿವೆ. ಜತೆಗೆ ಏಷ್ಯಾದಲ್ಲಿ ಕೂಡ ಹಲವು ಸ್ತರಗಳು ಇರುವುದನ್ನು ಗೌರವಿಸಬೇಕು.

– ಪ್ರತಿ ರಾಷ್ಟ್ರವೂ ಅದರದ್ದೇ ಆಗಿರುವ ಹಿತಾಸಕ್ತಿ, ಆದ್ಯತೆಗಳನ್ನು ಹೊಂದಿರುತ್ತದೆ. ಎರಡು ರಾಷ್ಟ್ರಗಳ ನಡುವೆ ಪರಸ್ಪರ ಸಂಬಂಧ ಹೊಂದಿರುವಾಗ ಸೂಕ್ಷ್ಮ ವಿಚಾರಗಳ ಬಗ್ಗೆ ಏಕೀಕೃತ ನಿಲುವು ಹೊಂದಲು ಸಾಧ್ಯವಿಲ್ಲ.

– ಎರಡೂ ರಾಷ್ಟ್ರಗಳು ಪ್ರಬಲವಾಗಿ ಬೆಳೆಯುತ್ತಿವೆ. ಹೀಗಾಗಿ, ಭಾರತ ಮತ್ತು ಚೀನಾ ತಮ್ಮ ನಿಲುವುಗಳನ್ನು ಪರಸ್ಪರ ಗೌರವಿಸಬೇಕು.

– ಎರಡೂ ದೇಶಗಳ ನಡುವೆ ಇರಬಹುದಾದ ಹಲವು ರೀತಿಯ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಆದ್ಯತೆ ಬೇಕು.

– ಅತ್ಯುತ್ತಮ ನಾಗರಿಕತೆ ಹೊಂದಿರುವ ಭಾರತ ಮತ್ತು ಚೀನಾ ದೀರ್ಘ‌ಕಾಲೀನವಾಗಿರುವ ದೃಷ್ಟಿಕೋನಗಳನ್ನು ಹೊಂದಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next