ಪಾಟ್ನಾ: ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗವೇ ಮುಖ್ಯ ವಿಚಾರವಾಗಲಿದೆ ಎಂದು ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ತಿಳಿಸಿದ್ದು, ಶನಿವಾರ (ಅಕ್ಟೋಬರ್ 24, 2020) ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
ಹತ್ತು ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಪ್ರಣಾಳಿಕೆಯಲ್ಲಿ ಆರ್ ಜೆಡಿ ಭರವಸೆ ನೀಡಿದೆ. ನಿರುದ್ಯೋಗಿಗಳಿಗೆ 1,500 ರೂಪಾಯಿ ಭತ್ಯೆ ನೀಡಲಾಗುವುದು ಎಂದು ತಿಳಿಸಿದೆ.
ನಾವು ಹತ್ತು ಲಕ್ಷ ಸರ್ಕಾರಿ ಉದ್ಯೋಗ ನೀಡುವ ಭರವಸೆ ಕೊಟ್ಟಿರುವುದರಲ್ಲಿ ಯಾವುದೇ ಗಿಮಿಕ್ ಇಲ್ಲ. ಆದರೆ ಡಬ್ಬಲ್ ಎಂಜಿನ್ ಬಿಜೆಪಿ ಸರ್ಕಾರದಂತೆ 50 ಲಕ್ಷ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆ ನೀಡಬಹುದಿತ್ತು ಎಂದು ತೇಜಸ್ವಿ ತಿರುಗೇಟು ನೀಡಿದ್ದಾರೆ.
ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಬಿಹಾರ ಬಜೆಟ್ ನಲ್ಲಿ ಹೇಗೆ ಹತ್ತುಲಕ್ಷ ಉದ್ಯೋಗಕ್ಕೆ ಅನುದಾನ ಹೊಂದಿಸುತ್ತದೆ ಎಂದು ಡಿಸಿಎಂ ಸುಶೀಲ್ ಕುಮಾರ್ ಮೋದಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ, ಬಿಹಾರ ಸರ್ಕಾರ ಯಾವುದೇ ತೊಂದರೆ ಇಲ್ಲದೆ 4 ಲಕ್ಷ ಉದ್ಯೋಗವನ್ನು ನೀಡಬಹುದಾಗಿದೆ. 2.13 ಲಕ್ಷ ಕೋಟಿ ರೂಪಾಯಿ ಬಿಹಾರದ ಬಜೆಟ್ ಗಾತ್ರ. ಇದರಲ್ಲಿ ಕೇವಲ ಶೇ.60ರಷ್ಟು ಮಾತ್ರ ವಿನಿಯೋಗಿಸಲಾಗಿದೆ. ನಿತೀಶ್ ಕುಮಾರ್ ಅವರಿಗೆ ಉಳಿದ ಶೇ.40ರಷ್ಟು ಹಣ ವಿನಿಯೋಗಿಸುವ ಸಾಮರ್ಥ್ಯ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವಿಮಾನದಲ್ಲಿ ಭಯೋತ್ಪಾದಕ! ದಿಲ್ಲಿ-ಗೋವಾ ವಿಮಾನದಲ್ಲಿ ಆತಂಕ ಸೃಷ್ಟಿಸಿದ ಪ್ರಯಾಣಿಕ
ಆರ್ ಜೆಡಿ ಪ್ರಣಾಳಿಕೆಯ ಮುಖ್ಯಾಂಶಗಳು:
ಒಂದು ವೇಳೆ ಆರ್ ಜೆಡಿ ಅಧಿಕಾರಕ್ಕೆ ಏರಿದರೆ ಬಿಹಾರದ ಎಲ್ಲಾ ಹಳ್ಳಿಗಳನ್ನೂ ಮಾದರಿ ಹಳ್ಳಿಗಳನ್ನಾಗಿ ಪರಿವರ್ತಿಸಲಾಗುವುದು.
*ಬಿಹಾರದಲ್ಲಿ ನೂತನವಾಗಿ ಕೈಗಾರಿಕೆ ಸ್ಥಾಪಿಸುವವರಿಗೆ ತೆರಿಗೆ ಮನ್ನಾದ ಯೋಜನೆ
*ನೂತನ ಕೈಗಾರಿಕಾ ನೀತಿ ಜಾರಿ
*ಗುತ್ತಿಗೆ ಶಿಕ್ಷಕರು, ಉರ್ದು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು
*ಬಿಹಾರದ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಮತ್ತು ಸರ್ಕಾರಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಶುಲ್ಕವನ್ನು ನೀಡಬೇಕಾದ ಅಗತ್ಯವಿಲ್ಲ
*ಎಲ್ಲಾ ಹಳ್ಳಿಗಳಲ್ಲಿಯೂ ಸಿಸಿಟಿವಿ ಅಳವಡಿಕೆ
*ಬಡವರ ಮತ್ತು ವೃದ್ದಾಪ್ಯ ಮಾಸಿಕ ವೇತನವನ್ನು 400 ರೂಪಾಯಿಯಿಂದ 1,000 ರೂಪಾಯಿಗೆ ಏರಿಕೆ