Advertisement

ಬಿಆರ್‌ಜಿಎಫ್‌ ಬಾಕಿ ಅನುದಾನ ತಕ್ಷಣ ಬಳಸಿ

11:59 AM Jan 07, 2017 | Team Udayavani |

ದಾವಣಗೆರೆ: ಬಿಆರ್‌ಜಿಎಫ್‌ (ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ) ಯೋಜನೆಯಡಿ ಉಳಿದಿರುವ 99.99 ಲಕ್ಷ ರೂ.ಗಳನ್ನು ಆದಷ್ಟು ಶೀಘ್ರ ಬಳಕೆ ಮಾಡಿ, ಉಪಯೋಗಿತ ಪ್ರಮಾಣ ಪತ್ರ ನೀಡುವ ಸಂಬಂಧ ಸ್ಥಳೀಯ ಸಂಸ್ಥೆಗಳನ್ನು ಒತ್ತಾಯಿಸಲು ಜಿಲ್ಲಾ ಯೋಜನಾ ಸಮಿತಿ ಸಭೆ ಸಲಹೆ ನೀಡಿದೆ. 

Advertisement

ಜಿಪಂ ಅಧ್ಯಕ್ಷರೂ ಆಗಿರುವ ಉಮಾ ರಮೇಶ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ 2015-16ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಬಿಆರ್‌ಜಿಎಫ್‌ ಅನುದಾನದ ಪೈಕಿ 99.99 ಲಕ್ಷ ರೂ. ಇನ್ನೂ ಬಳಕೆ ಆಗಿಲ್ಲ. ತಾಂತ್ರಿಕವಾಗಿ ಖಾತೆಯಲ್ಲಿಯೇ ಉಳಿದುಕೊಂಡಿದೆ.

ಈ ಮಧ್ಯ ಕೇಂದ್ರ ಸರ್ಕಾರ ಆಗಸ್ಟ್‌ 18, 2016ರ ನಂತರವೂ ಬಳಕೆಯಾಗದ ಬಿಆರ್‌ಜಿಎಫ್‌ ಅನುದಾನ ಇದ್ದರೆ ತಕ್ಷಣ ಅದನ್ನು ವಾಪಸ್‌ ಖಾತೆಗೆ ಹಾಕುವಂತೆ ಸೂಚಿಸಿದೆ ಎಂಬುದನ್ನು ಮುಖ್ಯ ಯೋಜನಾಧಿಕಾರಿ ಬಸವನಗೌಡ ಸಭೆ ಗಮನಕ್ಕೆ ತಂದರು. 

ಮುಖ್ಯ ಲೆಕ್ಕಾಧಿಕಾರಿ ಅಂಜಿನಪ್ಪ , ಕೇಂದ್ರದ ಆದೇಶದಂತೆ ನಿಧಿ ಬಳಕೆಯಾಗದೇ ಇದ್ದಲ್ಲಿ, ಅದನ್ನು ವಾಪಸ್‌ ಮಾಡಬೇಕು ಎಂಬ ಆದೇಶ ಪತ್ರವನ್ನು ಓದಿ ತಿಳಿಸಿದರು. ಆಗ, ಕೆಲ ಸದಸ್ಯರು ಅನುದಾನ ಬಳಕೆಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹರಿಹರ ನಗರ ಸಭೆಯ ಸದಸ್ಯರ ನಡುವೆ ಈ ಸಂಬಂಧ ವಾಗ್ವಾದ ಸಹ ನಡೆಯಿತು.

ಶಾಸಕರ ನಡೆಯಿಂದ ಅನುದಾನ ಬಳಕೆಯಾಗಿಲ್ಲ ಎಂಬ ಮಾತು ಸಹ ಕೇಳಿಬಂದವು. ಈ ಮಧ್ಯೆ ಬಹುತೇಕ ಸದಸ್ಯರು ಹರಿಹರ ನಗರ ಸಭೆಗೆ ಬಿಡುಗಡೆಯಾದ 92 ಕೋಟಿ, ಉಳಿದ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ 7.99 ಲಕ್ಷ ರೂ.ಗಳನ್ನು ಬಳಕೆಮಾಡಿ, ಉಪಯೋಗಿತ ಪ್ರಮಾಣ ಪತ್ರ ನೀಡಿ ಎಂಬ ಸಲಹೆ ನೀಡಿದರು.

Advertisement

ಸಭೆ ಆರಂಭದಲ್ಲಿ ಮುಖ್ಯ ಯೋಜನಾಧಿಕಾರಿ, ಯೋಜನಾ ಸಮಿತಿಯ ರಚನೆ, ಸದಸ್ಯರ ಆಯ್ಕೆ, ಅಧ್ಯಕ್ಷೆ ಆಯ್ಕೆ, ಮಾಡಬೇಕಾದ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಹೊನ್ನಾಳಿ ತಾಲೂಕಿನ ಸದಸ್ಯ ಎಂ.ಪಿ. ರಮೇಶ್‌ ಸಭೆಯನ್ನು ವರ್ಷದ ನಂತರ ಕರೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ವಿವಿಧ ಯೋಜನೆಗಳ ಕಾಮಗಾರಿಗಳ ಬದಲಾವಣೆ ಕುರಿತು ಯಾವುದೇ ಮಾಹಿತಿ ಇಲ್ಲದಂತಾಗುತ್ತದೆ. ಸಮಿತಿ ಕೈಗೊಂಡ ನಿರ್ಣಯಗಳನ್ನು ಏಕಾಏಕಿ ಬದಲಾಯಿಸಲಾಗುತ್ತದೆ. ಇದನ್ನು ತಡೆಯಲು ಕನಿಷ್ಠ 3 ತಿಂಗಳಿಗೊಮ್ಮೆ ಸಭೆ ಕರೆಯಿರಿ ಎಂದರು. 

ಇದಕ್ಕೆ ಬಸವನಗೌಡ ಉತ್ತರಿಸಿ, ಸರ್ಕಾರ ನಿಯಮಾವಳಿ ರೂಪಿಸುವಲ್ಲಿ ಮಾಡಿದ ವಿಳಂಬದಿಂದ ಸಭೆ ತಡವಾಗಿ ಕರೆಯಲಾಗಿದೆ. ಮುಂದೆ 3 ತಿಂಗಳಿಗೊಮ್ಮೆ ಕರೆಯಲಾಗುವುದು. ವಾಸ್ತವದಲ್ಲಿ ಚುನಾವಣೆ ನಡೆಸಿರುವುದು ಸಹ ಇನ್ನೂ ನಿಯಮಾವಳಿ ಅಂತಿಮಗೊಳ್ಳುವ ಮುನ್ನವೇ.

ಇಡೀ ರಾಜ್ಯದಲ್ಲಿ ಯಾವ ಜಿಲ್ಲೆ ಸಹ ಇದುವರೆಗೆ ಯೋಜನಾ ಸಮಿತಿ ರಚಿಸಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್‌. ಅಶ್ವತಿ, ಯೋಜನಾ ಸಮಿತಿಯ ಸದಸ್ಯರು, ಎಲ್ಲಾ ತಾಲೂಕು ಮಟ್ಟದ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next