Advertisement

ಜನರ ಸೇವೆ, ದೇವರ ಸೇವೆಯಿದ್ದಂತೆ: ಅಣ್ಣಾ ಹಜಾರೆ

03:56 PM Jan 06, 2018 | Team Udayavani |

ಕೊಪ್ಪಳ: ಜನರ ಸೇವೆಯು ದೇವರ ಸೇವೆಯಿದ್ದಂತೆ. ಇಂದಿನ ಯುವ ಜನಾಂಗದಲ್ಲಿ ಜನರ ಸೇವೆ ಮಾಡಬೇಕು ಎನ್ನುವ ಭಾವನೆ ಮೂಡಬೇಕು. ನನ್ನ ಜನ,  ನನ್ನ ದೇಶ ಎನ್ನುವ ಮನೋಭಾವನೆ ಎಲ್ಲರಲ್ಲೂ ಮೂಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಯುವ ಜನಾಂಗಕ್ಕೆ ಸಲಹೆ  ನೀಡಿದರು. 

Advertisement

ನಗರದ ಕೈಲಾಸ ಮಂಟಪದಲ್ಲಿ ಬುಧವಾರ ಸಂಜೆ ಅನುಭಾವಿಗಳ ಅಮೃತ ಚಿಂತನ ಗೋಷ್ಠಿಯಲ್ಲಿ ಭಕ್ತ ಸಮೂಹವನ್ನುದ್ದೇಶಿಸಿ ಅವರು  ಮಾತನಾಡಿದರು. ರೈತರ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇದೇ ಮಾ.23ರಿಂದ ದೆಹಲಿಯ ರಾಮಲೀಲಾ ಮಂದಿರದಲ್ಲಿ ಹೋರಾಟ  ಹಮ್ಮಿಕೊಳ್ಳಲಾಗುತ್ತಿದೆ.

ದೇಶದ ರೈತರು ತೀವ್ರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರೈತರು ದೇಶದ ಬೆನ್ನೆಲುಬು ಎಂದು ಹೇಳಿಕೊಳ್ಳುವ ಈ  ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೆ ನಿತ್ಯ ಸಾಯುತ್ತಿದ್ದಾರೆ. ದೇಶದ ಎಲ್ಲ ರೈತರು ಸಾಲದಿಂದ ಬಳಲುತ್ತಿದ್ದಾರೆ.

ನಮ್ಮದು ಕೃಷಿ  ಪ್ರಧಾನವಾದ ದೇಶವಾದರೂ ಸಹಿತ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ನಾವು ಸ್ಪಂದಿಸಬೇಕಿದೆ. ರೈತರ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟು ಹೋರಾಟ ರೂಪಿಸಲಾಗುತ್ತಿದೆ ಎಂದರು. 

ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಓಡಿಸ್ಸಾ  ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಹೋರಾಟದ ಕುರಿತು ಚರ್ಚಿಸಲಾಗಿದೆ. ನಮ್ಮ ಹೋರಾಟಕ್ಕೆ ಕರ್ನಾಟಕದಲ್ಲಿ ಸಂಪೂರ್ಣ ಬೆಂಬಲವಿದೆ.

Advertisement

ಯುವಕರು ತಮ್ಮ ಗ್ರಾಮ, ನಾಡು ಹಾಗೂ ದೇಶಾಭಿಮಾನ ಮೆರೆಯಬೇಕಾಗಿದೆ. ದುಶ್ಚಟಗಳಿಂದ ದೂರವಿರಬೇಕು. ದೇಶದಲ್ಲಿ  ತಾಂಡವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ನಾವೆಲ್ಲ ಹೋರಾಟಕ್ಕಿಳಿಯಬೇಕಿದೆ ಎಂದರು. ಆನಂದ ನಮಗೆ ಎಲ್ಲಿಯೂ ಸಿಗುವುದಿಲ್ಲ. ಆಂತರಿಕವಾಗಿಯೇ ನಮಗೆ ಆನಂದ ಸಿಗುತ್ತದೆ. 

ಆದರೆ ಅದನ್ನು ನಾವು ಕಂಡುಕೊಳ್ಳಬೇಕಿದೆ. ಜೀವನದಲ್ಲಿ ಪ್ರತಿಯೊಬ್ಬರು ಶುದ್ಧ ಆಚಾರ- ವಿಚಾರದ ಅಂಶಗಳನ್ನು ಮೈಗೂಡಿಸಿಕೊಂಡರೆ ಜಗತ್ತನ್ನೆ ಗೆಲ್ಲಬಹುದು. ಅಲ್ಲದೆ, ಪ್ರತಿವೊಬ್ಬರು ಸ್ವತ್ಛತೆಗೆ ಹೆಚ್ಚಿನ ಆಧ್ಯತೆ ನೀಡುವ ಜೊತೆಗೆ ತಮ್ಮ  ಗ್ರಾಮಗಳನ್ನು ಸಾರಾಯಿ ಮುಕ್ತ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next