Advertisement

ಕಾಗದ ಬರುತ್ತೆ, ಬೇರೆ ಅಂಚೆ ಸೇವೆಗಳು ಇಂದು ಸ್ಥಗಿತ

11:03 AM Sep 18, 2017 | Harsha Rao |

ಮಹಾನಗರ : ಮಂಗಳೂರು ಅಂಚೆ ವಿಭಾಗ ವ್ಯಾಪ್ತಿಯ ಪ್ರಧಾನ ಅಂಚೆ ಕಚೇರಿ, ಉಪ ಅಂಚೆ ಕಚೇರಿಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಅಂಚೆ ಸೇವೆಗಳು ಎರಡು ದಿನಗಳ ಮಟ್ಟಿಗೆ ಸ್ಥಗಿತಗೊಳ್ಳಲಿವೆ.

Advertisement

ಮಂಗಳೂರು ಅಂಚೆ ವಿಭಾಗ ವ್ಯಾಪ್ತಿಯಲ್ಲಿ ಕೋರ್‌ ಸಿಸ್ಟಮ್‌ ಇಂಟಿ ಗ್ರೇಟೆಡ್‌ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ. ಇದಾದ ಬಳಿಕ ಅಂಚೆ ಸೇವೆ ಇನ್ನಷ್ಟು ವೇಗ ಪಡೆಯಲಿದೆ. ಪ್ರಸ್ತುತ ಬಹುತೇಕ ಅಂಚೆ ಕಚೇರಿಗಳಲ್ಲಿ ಲೋಕಲ್‌  ಸರ್ವರ್‌ಗಳ ಬಳಕೆ ಮಾಡಲಾಗುತ್ತಿತ್ತು. ಇದರಿಂದ ಅಂಚೆ ಕಚೇರಿ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿದ್ದವು. ಇದಕ್ಕೆ‌ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂಡಿಯಾ ಪೋಸ್ಟ್‌ 2012 ಯೋಜನೆಯ ಭಾಗವಾಗಿ ದೇಶದ ಎಲ್ಲ ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ತಂತ್ರಜ್ಞಾನವನ್ನು ಹಂತ ಹಂತವಾಗಿ ಅಳ ವಡಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮಂಗಳೂರು ಅಂಚೆ ವಿಭಾಗದಲ್ಲಿ ಅಳವಡಿಸಲಾಗುತ್ತಿದ್ದು, ಪ್ರಮುಖ ದಾಖ ಲೆಗಳನ್ನು ಟಿಸಿಎಸ್‌ ಕಂಪೆನಿಗೆ ಹಸ್ತಾಂತರ ಮಾಡಲಿರುವುದರಿಂದ ಸೆ. 18 ಹಾಗೂ 19ರಂದು ಅಂಚೆ ಕಚೇರಿಗಳ ಸೇವೆ ಸ್ಥಗಿತ ಕೊಳ್ಳಲಿದೆ. ಆ ಬಳಿಕ ಮಂಗಳೂರು ವ್ಯಾಪ್ತಿಯಲ್ಲಿ ಎಲ್ಲ ಅಂಚೆ ಸೇವೆಗಳು ಮತ್ತಷ್ಟು ತಾಂತ್ರಿಕ ಸುಧಾರಣೆಗಳೊಂದಿಗೆ ಗ್ರಾಹಕ ರಿಗೆ ಇನ್ನಷ್ಟು ಜನಸ್ನೇಹಿಯಾಗಲಿದೆ.

ತಂತ್ರಜ್ಞಾನದ ಪ್ರಯೋಜನ

ಪರೀಕ್ಷಾ ಶುಲ್ಕ, ಸ್ಪೀಡ್ ಪೋಸ್ಟ್ , ನೀರಿನ ಬಿಲ್‌, ವಿದ್ಯುತ್‌ ಬಿಲ್‌ಗ‌ಳನ್ನು ಗ್ರಾಹಕರು ಅಂಚೆ ಕಚೇರಿಗಳಲ್ಲಿ ಪಾವತಿಸುತ್ತಿದ್ದರು. ಆದರೆ ಅಂಚೆ ಕಚೇರಿಗಳಲ್ಲಿ ಲೋಕಲ್‌ ಸರ್ವರ್‌ ಬಳಕೆಯಾಗುತ್ತಿದ್ದುದರಿಂದ ಅದು ಕಾರ್ಯಾಚರಿಸಲು ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಕಟ್ಟಿದ ಬಿಲ್‌ನ ಮಾಹಿತಿ ಕೆಲವು ದಿನಗಳ ಬಳಿಕ ದೊರೆಯುತ್ತಿತ್ತು. ಆದರೆ ಇನ್ನು ಮುಂದೆ ಅಂಚೆ ಕಚೇರಿಗಳಲ್ಲಿ ಯಾವುದೇ ಮಾಹಿತಿ ಕ್ಷಣ ಮಾತ್ರಗಳಲ್ಲಿ ಲಭಿಸಲಿದೆ. ಸ್ಪೀಡ್ಪೋಸ್ಟ್  ಮಾಡಿದರೆ ಅದು ಎಲ್ಲಿಗೆ ತಲುಪಿದೆ, ಸಮಯ ಹಾಗೂ ಪೋಸ್ಟ್‌ ರವಾನೆಯಾದ ಸಂದೇಶವೂ ಮೊಬೈಲ್‌ಗ‌ಳಿಗೆ ವೇಗವಾಗಿ ತಲುಪಲಿದೆ. ಮಂಗಳೂರು ಪ್ರಧಾನ ಅಂಚೆ ಕಚೇರಿ ಯಿಂದ ದೇಶದ ಯಾವ ಅಂಚೆ ಕಚೇರಿಗಳಲ್ಲಿ ಯಾವ ಸ್ಟಾಂಪ್‌ ಎಷ್ಟಿದೆ, ಫ್ರಾಂಕಿಂಗ್‌ ಯಂತ್ರ ಮುಂತಾದ ಹಲವು ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಈ ತಂತ್ರಜ್ಞಾನದ ಮುಖೇನ ಅಂಚೆ ಕಚೇರಿ ಯಲ್ಲಿ ಖಾತೆ ಹೊಂದಿದ ವ್ಯಕ್ತಿಯ ಮಾಹಿತಿ ಒಂದೇ ಕಡೆ ಭದ್ರವಾಗಿ ಇರಲಿದೆ. ಒಂದೇ ಕ್ಲಿಕ್‌ನಲ್ಲಿ ಖಾತೆ, ಉಳಿತಾಯಗಳ ಬಗ್ಗೆ ತಟ್ಟನೆ ಮಾಹಿತಿ ಪಡೆಯಬಹುದು.

ಹಳ್ಳಿಗಳಲ್ಲೂ ಆರ್‌ಐಸಿಟಿ ತಂತ್ರಜ್ಞಾನ

Advertisement

ಗ್ರಾಮೀಣ ಭಾಗಗಳಲ್ಲಿ ಕಾರ್ಯಾಚರಿ ಸುತ್ತಿರುವ ಅಂಚೆ ಕಚೇರಿಗಳಿಗೆ ಇನ್ನೂ ಆರು ತಿಂಗಳಲ್ಲಿ ಆರ್‌ಐಸಿಟಿ ತಂತ್ರಜ್ಞಾನ  ಬರಲಿದೆ. ಆ ಮೂಲಕ ಗ್ರಾಮೀಣ ಭಾಗಗಳಲ್ಲೂ ಸರ್ವರ್‌ ಸೇವೆ ಲಭ್ಯವಾಗಲಿದೆ. ಇದರಿಂದ ಕೈಯಿಂದ ರಶೀದಿ ಪಡೆಯುವುದು, ನಿಧಾನ ಗತಿಯ ಸೇವೆ ಮಾಯಾವಾಗಲಿದೆ. ಆರ್‌ಐಸಿಟಿ ತಂತ್ರಜ್ಞಾನದಿಂದ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಲು ಬರುವ ಸಂದರ್ಭದಲ್ಲಿ ಭಾವಚಿತ್ರ ಸಂಗ್ರಹ, ಮುದ್ರಿತ ರಶೀದಿ, ಖಾತೆಗೆ ವೇಗವಾಗಿ ಹಣ ಜಮಾವಣೆ  ಮಾಡಲು ಸಾಧ್ಯವಿದೆ. ಇದು 3ಜಿ ಕನೆಕ್ಷನ್‌ ಪಡೆದಿದ್ದು, ಸಿಮ್‌ ಮೂಲಕ ಕಾರ್ಯಾಚರಿಸಲಿದೆ. ಶೀಘ್ರವೇ ಈ ಸೇವೆ ಕಾರ್ಯಾರಂಭಿಸಲಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಶೀಘ್ರವೇ ಕಾರ್ಡ್‌ ಸ್ಪೈಪ್‌ ವ್ಯವಸ್ಥೆ
ಪ್ರಸ್ತುತ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಎಟಿಎಂ ಕಾರ್ಡ್‌ ನೀಡುತ್ತಿದೆ. ಅಂಚೆ ಕಚೇರಿಯ ಕಾರ್ಡ್‌ನ್ನು ಯಾವುದೇ ಬ್ಯಾಂಕುಗಳಲ್ಲಿಯೂ ಡ್ರಾ ಮಾಡಿಕೊಳ್ಳುವ ಅವಕಾಶ ಇದೆ. ಆದರೆ ಸ್ಪೈಪ್‌ ಮಾಡಲು ಅವಕಾಶ ಕಲ್ಪಿಸಲಾಗಿಲ್ಲ. ಶೀಘ್ರವೇ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಅಂಚೆಗೆ ಬರಲಿದೆ  ಹೈಟೆಕ್‌ ಸೇವೆ
ಸುಲಭ  ಬಿಲ್‌ ಪಾವತಿ
ಗ್ರಾಹಕ ಸ್ನೇಹಿ ಯೋಜನೆ

ಸುವ್ಯವಸ್ಥಿತ ವ್ಯವಹಾರಕ್ಕೆ ಸಹಾಯ
ತಂತ್ರಜ್ಞಾನಗಳಿಂದಲೇ ಬಹುತೇಕ ಕೆಲಸ ಕಾರ್ಯಗಳು ನಡೆಯುತ್ತಿರುವಾಗ ನಿಧಾನಗತಿಯ ವ್ಯವಹಾರಗಳು ಗ್ರಾಹಕರಿಗೆ ಕಿರಿಕಿರಿಯುಂಟು ಮಾಡುತ್ತವೆ. ಅಂಚೆ ಕಚೇರಿಗಳಲ್ಲಿ ಅಳವಡಿಸುತ್ತಿರುವ ನೂತನ ತಂತ್ರಜ್ಞಾನದ ಮೂಲಕ ಅಂಚೆ ಕಚೇರಿ ವ್ಯವಹಾರಗಳು ವ್ಯವಸ್ಥಿತವಾಗಲಿವೆ ಹಾಗೂ ಇನ್ನಷ್ಟು ವೇಗ ಪಡೆಯಲಿದೆ.
ಎಂ.ಜಗದೀಶ್‌ ಪೈ, ಹಿರಿಯ ಅಂಚೆ ಅಧೀಕ್ಷಕರು, ಬಲ್ಮಠ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next