ಮಂಡ್ಯ: ಪ್ರಕೃತಿ ಇಲ್ಲದೇ ಮಾನವ ಸಂಕುಲ ಸೇರಿದಂತೆ ಪ್ರಾಣಿ-ಪಕ್ಷಿಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ಪ್ರಕೃತಿಯ ಸಂರಕ್ಷಣೆಗಾಗಿ ಎಲ್ಲರೂ ಯುವ ಸೇನಾನಿಗಳಾಗಿ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಂಡ್ಯ ಸಹಯೋಗದಲ್ಲಿ ನಡೆದ ಲಕ್ಷ-ವೃಕ್ಷ ಆಂದೋಲನ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಮಾತನಾಡಿ, ಸಮಾಜದ ಹಾಗೂ ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬ ಯುವಕ-ಯುವತಿಯರ ಕರ್ತವ್ಯವಾಗಿದೆ ಎಂದರು.
ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ 12 ಸಾವಿರಕ್ಕೂ ಹೆಚ್ಚು ಸಸಿ ವಿತರಣೆ ಮಾಡುತ್ತಿದ್ದೇವೆ. ಅದೇ ರೀತಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ 22 ಸಾವಿರ ವಿದ್ಯಾರ್ಥಿಗಳಿಗೂ ಕೂಡ ಸಸಿಗಳನ್ನು ಕೊಡುವ ಯೋಜನೆ ಮಾಡಿಕೊಂಡಿದ್ದೇವೆ ಎಂದರು.
ಲಕ್ಷ-ವೃಕ್ಷ ಆಂದೋಲನ ಇಡೀ ದೇಶದಲ್ಲೇ ಮಂಡ್ಯ ಜಿಲ್ಲೆಯಲ್ಲಿ ಅನುಷ್ಠಾನವಾಗಿರುವ ನೂತನ ಕಾರ್ಯಕ್ರಮ. ವಿದ್ಯಾರ್ಥಿಗಳು ಸಸಿಗಳನ್ನು ನಿಮ್ಮ ಮನೆ ಅಂಗಳ, ಶಾಲೆ ಅಥವಾ ನಿಮ್ಮ ಜಮೀನಿನಲ್ಲಿ ನೆಟ್ಟು ಸಂರಕ್ಷಣೆ ಮಾಡಿ, ಮುಂದಿನ ವರ್ಷ ಸಂರಕ್ಷಣೆ ಮಾಡಿದ ಗಿಡದೊಂದಿಗೆ ನಿಮ್ಮ ಛಾಯಾಚಿತ್ರಗಳನ್ನು ತೆಗೆದು ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟರೆ ಜಿಲ್ಲಾಡಳಿತದಿಂದ ಅಭಿನಂದನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಅರಣ್ಯ ಇಲಾಖೆ ಡಿಎಫ್ಒ ವೆಂಕಟೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಜಿ. ಗುರುಸ್ವಾಮಿ, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕರಾದ ರಂಗಸ್ವಾಮಿ, ಮಂಗಲ ಎಂ.ಯೋಗೇಶ್, ಪ್ರಾಂಶುಪಾಲರಾದ ತಮ್ಮಣ್ಣಗೌಡ, ನಾರಾಯಣ್ ಹಾಜರಿದ್ದರು.