Advertisement

ಲಂಕೆಯನ್ನು ಕೈಬಿಟ್ಟ ಚೀನ

12:14 AM Apr 15, 2022 | Team Udayavani |

ಬೀಜಿಂಗ್‌: ಅತ್ಯಾಪ್ತ ಮಿತ್ರ ಪಾಕಿಸ್ಥಾನವನ್ನು ಹಾಗೂ ಭಾರತದ ನೆರೆಯ ದೇಶ ಶ್ರೀಲಂಕೆಯನ್ನು ಕೈಬಿಟ್ಟಿತೇ ಚೀನ? ಏಕೆಂದರೆ ಎರಡೂ ರಾಷ್ಟ್ರಗಳಿಗೆ ಅಗತ್ಯ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚೀನ ಸರಕಾರ ಸಾಲ ನೀಡಿದೆ.

Advertisement

ಪಾಕಿಸ್ಥಾನಕ್ಕೆ 4 ಬಿಲಿಯನ್‌ ಡಾಲರ್‌, ಶ್ರೀಲಂಕಾಕ್ಕೆ 2.5 ಬಿಲಿಯನ್‌ ಡಾಲರ್‌ ಮೊತ್ತದ ಸಾಲವನ್ನು ಕೊಡುತ್ತೇನೆ ಎಂದು ಹೇಳಿದ್ದರೂ ಇದುವರೆಗೆ ಅದನ್ನು ನೀಡಿಲ್ಲ. ಶ್ರೀಲಂಕೆಯಲ್ಲಿ ಅರ್ಥ ವ್ಯವಸ್ಥೆ ಹಳಿತಪ್ಪಿ ಜನರು ರಾಜಪಕ್ಸ ಸರಕಾರದ ವಿರುದ್ಧ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಶ್ರೀಲಂಕಾದ ಹಿರಿಯ ಅಧಿಕಾರಿಯೊಬ್ಬರು ಬೀಜಿಂಗ್‌ಗೆ ತೆರಳಿದ್ದ ವೇಳೆ, “ನಮ್ಮ ನೆರವಿಗೆ ಚೀನ ಬಂದೀತು’ ಎಂದು ಹೇಳಿಕೊಂಡಿದ್ದರು. ಚೀನ ನೆರವಿನ ಬದಲಾಗಿ, ಹೊಸದಿಲ್ಲಿಯಿಂದಲೇ ತೈಲೋತ್ಪನ್ನಗಳು, ಆಹಾರ ವಸ್ತುಗಳನ್ನು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಯಿತು. ಲಂಕೆಯ ಪಿಂಟೋ ಪೆಡ್ರೋ ಇನ್‌ಸ್ಟಿಟ್ಯೂಟ್‌ ಆಫ್ ಡೆವಲಪ್‌ಮೆಂಟ್‌ನ ಪ್ರಧಾನ ಸಂಶೋಧಕ ಮುತ್ತುಕೃಷ್ಣ ಸರ್ವನಾಥನ್‌ ಹೇಳುವ ಪ್ರಕಾರ “ಲಂಕೆಯಲ್ಲಿ ಚೀನ ಸರಕಾರದ ಹೂಡಿಕೆ ಮತ್ತು ಯೋಜನೆಗಳು ಕೇವಲ ಸೀಮಿತ ವ್ಯಾಪ್ತಿಯದ್ದು. ದೇಶದ ವಿತ್ತೀಯ ಸಮಸ್ಯೆಗೂ ಅದಕ್ಕೂ ಸಂಬಂಧವಿಲ್ಲ. ಏಕೆಂದರೆ, ಸದ್ಯ ಆ ರಾಷ್ಟ್ರವೇ ಬಿಕ್ಕಟ್ಟಿನಲ್ಲಿದೆ’ ಎಂದಿದ್ದಾರೆ, ಗಮನಾರ್ಹವೆಂದರೆ ಐಎಂಎಫ್ ಕೂಡ ಲಂಕೆಗೆ ನೆರವು ನೀಡುವುದರ ಬದಲು, “ದ್ವೀಪ ರಾಷ್ಟ್ರ ಮುಳುಗುತ್ತಿರುವ ಹಡಗು’ ಎಂದೇ ವ್ಯಾಖ್ಯಾನಿಸಿದೆ.

ಇದರ ಜತೆಗೆ ಭಾರತವನ್ನು ಹೊರತುಪಡಿಸಿ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ “ಸಹಾಯದ ರೂಪ’ದಲ್ಲಿ ಸಾಲ ನೀಡಿ, ಅವುಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುತ್ತಿತ್ತು ಚೀನ. 2020ರಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ ಪದೇ ಪದೆ ಜಾರಿಯಾದ ಲಾಕ್‌ಡೌನ್‌ನಿಂದಾಗಿ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಶಾಂಘೈ ಮತ್ತು ಶೆನ್‌ಜೆನ್‌ ನಗರಗಳಲ್ಲಿ ವಿಶೇಷವಾಗಿ ಕೈಗಾರಿಕೆ ಗಳು ಮುಚ್ಚುವ ಸ್ಥಿತಿ ಉಂಟಾಗಿದೆ. ಐಎಂಎಫ್, ವಿಶ್ವಬ್ಯಾಂಕ್‌ಗಳಿಗಿಂತ ಹೆಚ್ಚಿನ ಮೊತ್ತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನೀಡುತ್ತಿದೆ.

ಕಳೆಗುಂದಿದ ಸಡಗರ :

Advertisement

ಲಂಕಾದಲ್ಲಿ ಎಲ್ಲೆಲ್ಲೂ ಪ್ರತಿಭಟನೆ ಕಾವು ಏರುತ್ತಲೇ ಇದೆ. ಅಸಲಿಗೆ ಶ್ರೀಲಂಕಾ ಜನತೆಗೆ ಬುಧವಾರ ಹೊಸ ವರ್ಷ, ಹಿಂದೂಗಳಿಗೆ ಯುಗಾದಿ ಇದ್ದಂತೆ. ಆದರೆ, ಯಾವುದೇ ಜನರಲ್ಲಿ ಆ ಹೊಸ ವರ್ಷದ ಉತ್ಸಾಹವೇ ಇರಲಿಲ್ಲ. ಆವಶ್ಯಕ ವಸ್ತುಗಳ ಅಭಾವ ಉಂಟಾಗಿದೆ. ಸದ್ಯಕ್ಕೆ ಲಭ್ಯವಿರುವ ವಸ್ತುಗಳ ಬೆಲೆ ಗಗನಕ್ಕೇರಿದೆ. ಡೀಸೆಲ್‌, ಪೆಟ್ರೋಲ್‌, ವಿದ್ಯುತ್‌ ಬರ ಆವರಿಸಿದೆ. ಹೀಗಿರುವಾಗ ಹಬ್ಬದ ಸಂಭ್ರಮವಿದ್ದೀತೇ? ಹಾಗಾಗಿ ಅಲ್ಲಿನ ಜನರು ತಮ್ಮ ಹೊಸ ವರ್ಷದ ದಿನಾಚರಣೆಯನ್ನು ಪ್ರತಿಭಟನೆಯ ನೆರಳಿನಲ್ಲೇ ಕಳೆದಿದ್ದಾರೆ.

ಭಾರತದಿಂದ 15 ಸಾವಿರ ಕೋಟಿ ರೂ. ಸಹಾಯ? :

ದಿವಾಳಿಯಾಗಿರುವ ಶ್ರೀಲಂಕಾಕ್ಕೆ ಭಾರತ ಮತ್ತಷ್ಟು ನೆರವಿನ ಹಸ್ತ ಚಾಚಲು ನಿರ್ಧರಿಸಿದ್ದು 15 ಸಾವಿರ ಕೋಟಿ ರೂ.ಗಳ ಸಹಾಯ ಮಾಡಲು ಚಿಂತನೆ ನಡೆ ಸಿದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ನಾವು ಈಗಾಗಲೇ ಶ್ರೀಲಂಕಾಕ್ಕೆ ಆರ್ಥಿಕ ಸಹಾಯದ ಜತೆಗೆ ಆಹಾರ, ಇಂಧನ ಸರಬರಾಜು ಸೇರಿದಂತೆ ಕೆಲವು ಸಹಾಯಗಳನ್ನು ಮಾಡಿ  ದ್ದೇವೆ. ಈಗ ಪುನಃ ಆರ್ಥಿಕ ಸಹಾಯ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ 15 ಸಾವಿರ ಕೋಟಿ ರೂ. ಸಹಾಯ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next