ನಾನೀಗ, ಒಂದು ಸಾಕ್ಷ್ಯಚಿತ್ರ ನಿರ್ಮಾಣದ ಕೆಲಸದಲ್ಲಿ ಬ್ಯುಸಿ ಇದ್ದೇನೆ. ಅದು ಭಾರತೀ ವಿಷ್ಣುವರ್ಧನ್ ಅವರನ್ನು ಕುರಿತ ಸಾಕ್ಷ್ಯಚಿತ್ರ. ಸಾಕಷ್ಟು ಸಿನಿಮಾಗಳನ್ನು ರೆಫರೆನ್ಸ್ ಆಗಿ ತಗೊಂಡು, ಅದಕ್ಕೆ ಸ್ಕ್ರಿಪ್ಟ್ ಬರೆದು, ಅದರ ನಿರೂಪಣೆ, ನಿರ್ದೇಶನ ಮಾಡಿದ್ದೇನೆ. ಈ ಸಾಕ್ಷ್ಯ ಚಿತ್ರಕ್ಕೆ ಸಬ್ ಟೈಟಲ್ಸ್ ಕೆಲಸ ಬಾಕಿ ಉಳಿದಿತ್ತು. ಈಗ, ಲಾಕ್ ಡೌನ್ ಕಾರಣಕ್ಕೆ ಸಿಕ್ಕಿದ ಬಿಡುವಿನಲ್ಲಿ, ಆ ಕೆಲಸ ಮಾಡಿ ಮುಗಿಸಿದ್ದೇನೆ. ನನಗೆ ಲೇಖನ ಬರೆಯುವುದರಲ್ಲಿ ಆಸಕ್ತಿ ಇದೆ. ನನ್ನ ಫಿಲಿಂಗ್ಸ್ ನ ಅಕ್ಷರರೂಪಕ್ಕಿಳಿಸಿ, ಅದನ್ನು ಪತ್ರಿಕೆಗಳಿಗೆ ಕಳಿಸ್ತೀನಿ. ಇಷ್ಟದ ಹಾಡುಗಳನ್ನು ಹಾಡುವುದು, ಹೊಸ ಹಾಡುಗಳನ್ನು ಕೇಳುವುದು, ಅತ್ಯುತ್ತಮ ಅನಿಸುವ ಸಿನಿಮಾಗಳನ್ನು ನೋಡುವುದು, ವೆಬ್ ಸೀರೀಸ್ ನೋಡುವುದು, ಅವುಗಳ ಕುರಿತು ಮಾಹಿತಿ ಸಂಗ್ರಹಿಸುವುದು… ಇದೆಲ್ಲಾ ನನ್ನ ಮೆಚ್ಚಿನ ಹವ್ಯಾಸಗಳು. ಇದಕ್ಕೆಲ್ಲಾ ಈಗ ಸಾಕಷ್ಟು ಸಮಯ ಸಿಕ್ಕಿದೆ.
ಸಾಹಿತ್ಯ ಕುರಿತು ನಮ್ಮ ಮನೆಯಲ್ಲಿ ಎಲ್ಲರಿಗೂ ಆಸಕ್ತಿ ಇದೆ. ಹಾಗಾಗಿ, ಇಷ್ಟದ ಕಾದಂಬರಿಯನ್ನು ಓದುವುದು, ಆ ಕುರಿತು ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡುವುದು ನನ್ನ ಇನ್ನೊಂದು ಅಭ್ಯಾಸ. ಅದು ಬಿಟ್ಟರೆ, ಮನೆ ಕೆಲಸದಲ್ಲಿ ಅಮ್ಮನಿಗೆ, ಹೆಂಡತಿಗೆ- ನನ್ನ ಕೈಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡ್ತೇನೆ. ನಮ್ಮ ಮಕ್ಕಳಿಗೆ ಎಷ್ಟೋ ಹಳೆಯ ಆಟಗಳ ಪರಿಚಯವೇ
ಇಲ್ಲ. ಅವರಿಗೆ ಆಟಗಳ ಪರಿಚಯ ಮಾಡಿಕೊಡ್ತಾ ಇದ್ದೇನೆ. ಅವರ ಜೊತೆ ನಾನೂ ಆಡ್ತೇನೆ. ಸ್ವಾರಸ್ಯ ಅಂದ್ರೆ, ನಮ್ಮ ಮಕ್ಕಳ ಕಾಲದ ಕಂಪ್ಯೂರ್ಟ ಗೇಮ್ಸ್ ನನಗೂ ಗೊತ್ತಿಲ್ಲ. ಅದನ್ನು ಅವರೂ ಹೇಳಿಕೊಡ್ತಾರೆ. ಕೆಲವು ಸಲ ನಾನು ಟೀಚರ್ಸ್, ಮಕ್ಕಳು ಸ್ಟೂಡೆಂಟ್ಸ್ ಕೆಲವು ಬಾರಿ ಮಕ್ಕಳೇ ಟೀಚರ್ಸ್, ನಾನು ಸ್ಟೂಡೆಂಟ್ಸ್!
ಇಷ್ಟು ದಿನ, ಶೂಟಿಂಗ್ ಕಾರಣಕ್ಕೆ ಮನೆಯವರ ಜೊತೆ ಕೂತು ತಿಂಡಿ ತಿನ್ನಲಿಕ್ಕೆ- ಊಟ ಮಾಡಲಿಕ್ಕೆ ಆಗ್ತಾನೇ ಇರಲಿಲ್ಲ. ಹೆಚ್ಚಿನ ಸಂದರ್ಭದಲ್ಲಿ, ಶೂಟಿಂಗ್ ಮುಗಿಸಿ ಮನೆಗೆ ಬರುವವೇಳೆಗೆ ತುಂಬಾ ತಡ ಆಗಿರ್ತಾ ಇತ್ತು. ಆಗ ಎಲ್ಲರನ್ನೂ ಮಿಸ್ ಮಾಡ್ಕೊಳ್ತಾ ಇದ್ದೆ. ಲಾಕ್ ಡೌನ್ ಕಾರಣಕ್ಕೆ, ಎಲ್ಲರೊಂದಿಗೆ ಇರುವುದಕ್ಕೆಈಗ ಅವಕಾಶ ಸಿಕ್ಕಿದೆ. ಆ ಖುಷಿಯನ್ನು ಅನುಭವಿಸ್ತಾ ಇದ್ದೇನೆ…
● ಅನಿರುದ್ಧ ಜತಕರ, ಕಿರುತೆರೆ ನಟ- ನಿರ್ದೇಶಕ