Advertisement

ರಂಗನಟ ವಿ.ಕೆ.ಸುವರ್ಣರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

05:25 PM May 30, 2017 | |

ಮುಂಬಯಿ: ನಗರದ ಪ್ರಸಿದ್ಧ ರಂಗನಟ, ನಿರ್ದೇಶಕ, ಸಂಘಟಕ ವಿ. ಕೆ. ಸುವರ್ಣ ಅವರಿಗೆ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಯನ್ನು ಮೇ 24 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನಿಸಲಾಯಿತು.

Advertisement

ರಂಗಭೂಮಿ ಫೈನ್‌ಆರ್ಟ್ಸ್ ನವಿಮುಂಬಯಿ ಸಂಸ್ಥೆಯ ಅಧ್ಯಕ್ಷರಾಗಿ ಕಳೆದ 49 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿರುವ ಹಿರಿಯ ರಂಗಕಲಾವಿದ, ನಿರ್ದೇಶಕ ವಿ. ಕೆ. ಸುವರ್ಣ ಪಡುಬಿದ್ರೆ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಎಚ್‌. ಎಲ್‌. ಎನ್‌. ರಾವ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ಖ್ಯಾತ ಚಲನಚಿತ್ರ ನಿರ್ದೇಶಕ ಸಾಯಿಪ್ರಕಾಶ್‌, ದೂರದರ್ಶನ ಕೇಂದ್ರ ದಿಲ್ಲಿಯ ದಕ್ಷಿಣ ವಲಯದ ಮಹಾನಿರ್ದೇಶಕ ನಾಡೋಜ ಡಾ| ಮನೋಹರ ಜೋಶಿ ಅವರು ಉಪಸ್ಥಿತರಿದ್ದು ವಿ. ಕೆ. ಸುವರ್ಣ ಅವರನ್ನು ಅಭಿನಂದಿಸಿ ಶುಭಹಾರೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿ. ಕೆ. ಸುವರ್ಣ ಅವರು, ಖ್ಯಾತ ಕನ್ನಡ ಚಲನಚಿತ್ರ ನಟಿ ಡಾ| ಭಾರತಿ ವಿಷ್ಣುವರ್ಧನ್‌ ಹಾಗೂ ಪ್ರಸಿದ್ಧ ಯಕ್ಷಗಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಅವರಂತಹ ಸಾಧಕರೊಂದಿಗೆ ಈ ಪ್ರಶಸ್ತಿಯನ್ನು ಸ್ವೀಕರಿಸಲು ತನಗೆ ಹೆಮ್ಮೆಯಾಗುತ್ತಿದೆ ಎಂದು ನುಡಿದು, ಪ್ರಶಸ್ತಿಗೆ ತನ್ನನ್ನು ಆರಿಸಿದ ಸಂಸ್ಥೆಗೆ ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಕಳೆದ 41 ವರ್ಷಗಳಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಆರ್ಯಭಟ ಪ್ರಶಸ್ತಿಯನ್ನು ಪ್ರದಾನಿಸುತ್ತಾ ಬಂದಿದೆ. 1975ರಲ್ಲಿ ಭಾರತದಲ್ಲಿ ಆರ್ಯಭಟ ಕ್ಷಿಪಣಿಯನ್ನು ಹಾರಿಸಿದ ಸವಿನೆನಪಿಗಾಗಿ ಈ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ವಿವಿಧ ನಗರದಗಳಲ್ಲಿ ವೈವಿಧ್ಯಮಯ ಕ್ಷೇತ್ರಗಳಲ್ಲಿರುವ ಸಾಧಕರನ್ನು ಗುರುತಿಸಿ ಪ್ರದಾನಿಸಲಾಗುತ್ತಿದೆ. ವೃತ್ತಿಯಲ್ಲಿ ಪ್ರಾರಂಭದಲ್ಲಿ ಕ್ಯಾಂಟೀನ್‌ ಉದ್ಯಮದಲ್ಲಿ ಪಳಗಿ, ಆನಂತರ ಕಾಂಟ್ರಾಕ್ಟರ್‌ ಆಗಿ, ಕಾರ್ಯನಿರ್ವಹಿಸಿ ಔದ್ಯೋಗಿಕ ಕ್ಷೇತ್ರದಲ್ಲೂ ಯಶಸ್ಸನ್ನು ಪಡೆದ ವಿ. ಕೆ. ಸುವರ್ಣ ಅವರು ಶ್ರೀ ಶನೀಶ್ವರ ಮಂದಿರ ನೆರೂಲ್‌ ಇದರ ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ನವಿಮುಂಬಯಿ ಸ್ಥಳೀಯ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ರಂಗಭೂಮಿ ಫೈನ್‌ ಆರ್ಟ್ಸ್ ನವಿಮುಂಬಯಿ ಇದರ ಅಧ್ಯಕ್ಷರಾಗಿ, ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೇಬಲ್‌ ಟ್ರಸ್ಟ್‌ ಇದರ ಸ್ಥಾಪಕ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ಸಂಘ ಖಾರ್‌ಘರ್‌ ಇದರ ಗೌರವ ಪ್ರಧಾನ ಕಾರ್ಯದರ್ಶಿಯಾಗಿ, ನವಿಮುಂಬಯಿ ಕನ್ನಡ ಸಂಘ, ನಾರಾಯಣ ಗುರುಮಂದಿರ, ಶ್ರೀ ಘನ್ಸೋಲಿ ಮೂಕಾಂಬಿಕಾ ದೇವಸ್ಥಾನ ಇತ್ಯಾದಿ ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ಧೆಗಳನ್ನು ಅಲಂಕರಿಸಿ ಸಮಾಜ ಸೇವೆಯಲ್ಲಿ ತೊಡಗಿ ಸಂಘಟನೆಯಲ್ಲೂ ಎತ್ತಿದ ಕೈ.

ಬಹುಮುಖ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವ ವಿ. ಕೆ. ಸುವರ್ಣ ಅವರು ಕಲಾಕ್ಷೇತ್ರ, ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ, ಸಾಂಸ್ಕೃತಿಕ ಹೀಗೆ ನಾನಾ ಕ್ಷೇತ್ರಗಳಲ್ಲೂ ಕೈಯಾಡಿಸಿ ಮಿಂಚಿದವರು. ಸುಮಾರು 150 ಕ್ಕೂ ಅಧಿಕ ನಾಟಗಳಲ್ಲಿ ಅಭಿನಯಿಸಿರುವ ವಿ. ಕೆ. ಸುವರ್ಣ ಅವರ  ‘ಸತ್ಯ ಹರಿಶ್ಚಂದ್ರ’ ನಾಟಕದ ‘ಹರಿಶ್ಚಂದ್ರ’ ಪಾತ್ರವನ್ನು ಇಂದಿಗೂ ಕಲಾಭಿಮಾನಿಗಳು ನೆನಪಿಸುತ್ತಿದ್ದಾರೆ.

ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿರುವ ಅವರು ಅತೀ ಬಡತನದಿಂದ ವಿದ್ಯಾ ಭ್ಯಾಸ ಮಾಡುತ್ತಿರುವ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ ಅವರ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸಿ ವಿದ್ಯಾದಾನವನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 

Advertisement

ಅನಾರೋಗ್ಯಪೀಡಿತರಿಗೆ ತನ್ನಿಂದಾಗದಿದ್ದರೂ ತನ್ನನ್ನು ಪ್ರೋತ್ಸಾಹಿಸುತ್ತಿರುವ ದಾನಿಗಳಿಂದ ಆರ್ಥಿಕ ನೆರವನ್ನು ಬೇಡಿ ಸಂಬಂಧ ಪಟ್ಟವರಿಗೆ ನೀಡುವ ವಿಶಾಲ ಗುಣದವರು ಅವರು. ಕಳೆದ ಎರಡು ವರ್ಷಗಳಿಂದ ನೆರೂಲ್‌ ಶ್ರೀ ಶನೀಶ್ವರ ಮಂದಿರದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಆಯೋಜನೆಯಲ್ಲಿ ವಿ. ಕೆ. ಸುವರ್ಣ ಅವರ ಪಾತ್ರ ಮಹತ್ವದ್ದು. ತುಳುನಾಡಿನ ದೇವಸ್ಥಾನಗಳಲ್ಲಿ ನಡೆಯುವ ಲಕ್ಷದೀಪೋತ್ಸವದ ಮಾದರಿಯಲ್ಲಿ ಈ ಉತ್ಸವವು ನಡೆಯತ್ತಿದ್ದು, ಇಲ್ಲಿನ ತುಳು-ಕನ್ನಡಿಗ, ಭಕ್ತಾದಿಗಳಿಗೆ ವಿಶೇಷ ಅನುಭವವನ್ನು ನೀಡಿ ಯುವಪೀಳಿಗೆಯಲ್ಲಿ ಧಾರ್ಮಿಕ ಭಾವನೆಯನ್ನು ಬೆಳೆಸುತ್ತಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next