Advertisement

‘ಬಡ ಕಕ್ಷಿದಾರ’ನ ಪರ ಉಚಿತ ವಾದ ಮಾಡುವೆ

10:12 AM Apr 05, 2017 | Karthik A |

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ಶುಲ್ಕ 3.4 ಕೋಟಿ ರೂ. ನೀಡಲು ತೆರಿಗೆ ಹಣ ಬಳಕೆ ಮಾಡಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ದೇಶದ ಖ್ಯಾತ ನ್ಯಾಯವಾದಿ ರಾಮ್‌ ಜೇಠ್ಮಲಾನಿ ಕೇಜ್ರಿವಾಲ್‌ ಪರ ವಾದ ಮಂಡಿಸುತ್ತಿದ್ದಾರೆ. ಮಂಗಳವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೇಠ್ಮಲಾನಿ,  ಕೇಜ್ರಿವಾಲ್‌ ಬಳಿ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲದಿದ್ದರೆ ಉಚಿತವಾಗಿ ವಾದಿಸುವೆ. ಅವರನ್ನು ತಮ್ಮ ಬಡ ಕಕ್ಷಿದಾರ ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ. ಅಗತ್ಯಬಿದ್ದರೆ ಕೇಜ್ರಿವಾಲ್‌ರ ನಿತ್ಯ ಜೀವನಕ್ಕೆ ಬೇಕಾದ ಖರ್ಚನ್ನೂ ಕೊಡುತ್ತೇನೆ. ಏಕೆಂದರೆ ಅರುಣ್‌ ಜೇಟ್ಲಿಗೆ ಹೋಲಿಕೆ ಮಾಡಿದರೆ, ದಿಲ್ಲಿ ಮುಖಮಂತ್ರಿಗೆ ಕ್ಲೀನ್‌ ಇಮೇಜ್‌ ಇದೆ ಎಂದು ಹೇಳಿದ್ದಾರೆ. 

Advertisement

ಇದೇ ವೇಳೆ ತಮಗೆ ಪಾವತಿ ಮಾಡಬೇಕಾಗಿರುವ ಬಿಲ್‌ ಅನ್ನು ತಡೆ ಹಿಡಿದಿರುವ ದಿಲ್ಲಿ ಸರಕಾರದ ಕ್ರಮಕ್ಕೆ ಹಿರಿಯ ನ್ಯಾಯವಾದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಸೂಚನೆಯಂತೆಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ. ಅದಕ್ಕೆ ಪೂರಕವಾಗಿ ಆಮ್‌ ಆದ್ಮಿ ಪಕ್ಷ ಕೂಡ ಕೇಂದ್ರ ಸಚಿವ ಜೇಟ್ಲಿ ಅವರ ವಕೀಲರ ಶುಲ್ಕವನ್ನು 2ಜಿ ಹಗರಣದಲ್ಲಿ ಭಾಗಿಯಾಗಿದ್ದ ಕಂಪೆನಿಯೊಂದು ಭರಿಸುತ್ತಿದೆ ಎಂದು ದೂರಿದೆ. ಆದರೆ ಈ ಆರೋಪವನ್ನು ಬಿಜೆಪಿ, ತಿರಸ್ಕರಿಸಿದ್ದು, ಸ್ವತಃ ಸಚಿವರೇ ಅದನ್ನು ಪಾವತಿ ಮಾಡುತ್ತಿದ್ದಾರೆಂದು ಹೇಳಿದೆ. ಜೇಟ್ಲಿಗೆ ವೈಯಕ್ತಿಕವಾಗಿ ಶುಲ್ಕ ಪಾವತಿ ಮಾಡಲು ಸಾಧ್ಯವಿದ್ದರೆ ದಿಲ್ಲಿ ಸಿಎಂಗೆ ಏಕೆ ಇಲ್ಲ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರಶ್ನಿಸಿದ್ದಾರೆ. ಸಿಎಂ ವೈಯಕ್ತಿಕ ಕೇಸಿಗೆ ತೆರಿಗೆ ಹಣ ಬಳಸುವುದು ಕಾನೂನಿಗೆ ವಿರುದ್ಧ ಎಂದಿದ್ದಾರೆ. ಈ ಎಲ್ಲ ವಿವಾದಗಳ ನಡುವೆ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಆಡಳಿತ ವಿಭಾಗಕ್ಕೆ ಜೇಠ್ಮಲಾನಿ ಅವರ ಬಿಲ್‌ಗ‌ಳನ್ನು ಪಾವತಿ ಮಾಡುವಂತೆ ಸೂಚಿಸಿದ್ದಾರೆ. 

ಇದು ದಿಲ್ಲಿ ಸಿಎಂರ ವೈಯಕ್ತಿಕ ಪ್ರಕರಣ ಅಲ್ಲ. ಕ್ರಿಕೆಟ್‌ ಮಂಡಳಿ ವಿರುದ್ಧ ಇರುವ ಆರೋಪಗಳ ಬಗ್ಗೆ ಸರಕಾರವೇ ತನಿಖೆಗೆ ಆದೇಶ ಮಾಡಿದ್ದು, ಹೋರಾಟ ಮುಂದುವರಿಯಲಿದೆ.
– ಮನೀಷ್‌ ಸಿಸೋಡಿಯಾ, 

ದಿಲ್ಲಿ ಡಿಸಿಎಂ ಈ ಹಿಂದೆ ಯಾವುದೇ ಸಿಎಂ ಇಂಥ ಕೆಲಸ ಮಾಡಿದ್ದು ಗೊತ್ತೇ ಇಲ್ಲ. ವೈಯಕ್ತಿಕ ಕೇಸುಗಳಿಗೆ ಬೊಕ್ಕಸದ ಹಣ ಬಳಕೆ ಸರಿಯಲ್ಲ.
– ಕಿರಣ್‌ ರಿಜಿಜು,ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next