ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ “ಆಮ್ ಆದ್ಮಿ ಪಕ್ಷ” ಭರ್ಜರಿ ಜಯಭೇರಿಯತ್ತ ಮುನ್ನುಗ್ಗುವ ಮೂಲಕ ಕಾಂಗ್ರೆಸ್ ಧೂಳೀಪಟವಾಗಿದೆ. ಇದರೊಂದಿಗೆ ಆಮ್ ಆದ್ಮಿ ಪಕ್ಷ ದೆಹಲಿ ಬಳಿಕ ಎರಡನೇ ರಾಜ್ಯವಾದ ಪಂಜಾಬ್ ನಲ್ಲಿ ಅಧಿಕಾರದ ಗದ್ದುಗೆಗೆ ಏರಲು ಸಜ್ಜಾಗಿದೆ.
ಇದನ್ನೂ ಓದಿ:ಎಡಗೈಯಲ್ಲಿ ಊಟ ಮಾಡಿದಕ್ಕೆ ವಧುವನ್ನೇ ಬಿಟ್ಟು ಹೊರಟ!
ಆಮ್ ಆದ್ಮಿ ಪಕ್ಷ ಈಗ ರಾಷ್ಟ್ರೀಯ ಪಕ್ಷವಾಗಿದೆ. ಅಲ್ಲದೇ ದೇಶದಲ್ಲಿ ಶೀಘ್ರವಾಗಿ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಕ್ಷ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಇನ್ಮುಂದೆ ರಾಷ್ಟ್ರೀಯ ಪಕ್ಷವಾಗಿ ಬೆಳೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಗೆ ಪರ್ಯಾಯವಾಗಿ ರಾಷ್ಟ್ರೀಯ ಪಕ್ಷವಾಗುತ್ತಿದೆ ಎಂದು ರಾಘವ್ ಚಡ್ಡಾ ಎನ್ ಡಿಟಿವಿಗೆ ತಿಳಿಸಿದ್ದಾರೆ.
ಒಂದು ಪಕ್ಷವಾಗಿ ಆಮ್ ಆದ್ಮಿ ಪಕ್ಷಕ್ಕೆ ಇದೊಂದು ಅದ್ಭುತ ದಿನವಾಗಿದೆ. ಯಾಕೆಂದರೆ ಇಂದು ನಾವು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದೇವೆ. ನಾವು ಇನ್ನು ಹೆಚ್ಚು ಕಾಲ ಪ್ರಾದೇಶಿಕ ಪಕ್ಷವಾಗಿರಲ್ಲ. ಜನರ ಆಶೀರ್ವಾದ ಹೀಗೆ ಮುಂದುವರಿದಲ್ಲಿ ಮುಂದೊಂದು ದಿನ ಅರವಿಂದ ಕೇಜ್ರಿವಾಲ್ ಅವರು ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಚಡ್ಡಾ ಭವಿಷ್ಯ ನುಡಿದಿದ್ದಾರೆ.
ಎರಡು ರಾಜ್ಯಗಳಲ್ಲಿ ಗೆಲುವು ಸಾಧಿಸಲು ಭಾರತೀಯ ಜನತಾ ಪಕ್ಷ ಅತೀ ಹೆಚ್ಚು ಸಮಯ ತೆಗೆದುಕೊಂಡಿದ್ದು, 2012ರಲ್ಲಿ ಅಸ್ತಿತ್ವಕ್ಕೆ ಬಂದ ಆಮ್ ಆದ್ಮಿ ಪಕ್ಷ ಕಡಿಮೆ ಅವಧಿಯಲ್ಲಿ ಎರಡು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ.