ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಕೆಲವೇ ಗಂಟೆಗಳ ನಂತರ ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಗೊಂಡು ಲೋಕಸಭೆ ಚುನಾವಣೆ ಪ್ರಚಾರಕ್ಕೆ ಧುಮುಕಿದ್ದಾರೆ.
ತಮ್ಮ ಅಧಿಕೃತ ನಿವಾಸವನ್ನು ತಲುಪಿದ ಕೂಡಲೇ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಬೆಂಬಲಿಗರ ದೊಡ್ಡ ಸಭೆಯನ್ನುದ್ದೇಶಿಸಿ “ನಾನು ಹಿಂತಿರುಗಿದ್ದೇನೆ. ನಿಮ್ಮೆಲ್ಲರ ಮುಂದೆ ಇರಲು ಸಂತೋಷವಾಗಿದೆ. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಾನು ನಿಮಗೆ ಹೇಳಿದ್ದೆ ಅದೇ ರೀತಿ ನಾನು ಹಿಂತಿರುಗಿದ್ದೇನೆ” ಎಂದರು.
ಟೀ ಶರ್ಟ್‌ನಲ್ಲಿದ್ದ ಕೇಜ್ರಿವಾಲ್ ಅವರು ನಗು ನಗುತ್ತಾ ಮನೆ ಪ್ರವೇಶಿಸಿ ತಂದೆ ತಾಯಿಯ ಆಶೀರ್ವಾದ ಪಡೆದರು. ತಮ್ಮ ಪಕ್ಷದ ಕಾರ್ಯಕರ್ತರ ಹರ್ಷೋದ್ಗಾರವನ್ನು ಸ್ವೀಕರಿಸಿ ಸಂಭ್ರಮಿಸಿ ನಗು ನಗುತ್ತಾ ಮನೆ ಪ್ರವೇಶಿಸಿದರು. ಆರತಿ ಬೆಳಗಿ ಅವರನ್ನು ನಿವಾಸಕ್ಕೆ ಸ್ವಾಗತಿಸಲಾಯಿತು.
‘ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ನನಗೆ ನಿಮ್ಮ ಆಶೀರ್ವಾದವನ್ನು ಮಾಡಿದ್ದೀರಿ. ನಾನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಅವರಿಂದಲೇ ನಾನು ನಿಮ್ಮ ಮುಂದೆ ಇದ್ದೇನೆ. ನಾವು ಸರ್ವಾಧಿಕಾರದಿಂದ ದೇಶವನ್ನು ಉಳಿಸಬೇಕಾಗಿದೆ, ”ಎಂದರು.
ನಾಳೆ (ಶನಿವಾರ) ದೆಹಲಿಯ ಕನ್ನಾಟ್ ನಲ್ಲಿರುವ ಹನುಮಾನ್ ಮಂದಿರದಲ್ಲಿ ಜಮಾಯಿಸುವಂತೆ ಬೆಂಬಲಿಗರನ್ನು ಕೇಳಿಕೊಂಡಿದ್ದಾರೆ.
ಅಲ್ಲಿ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 1 ಗಂಟೆಗೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
50 ದಿನಗಳ ಬಂಧನದ ನಂತರ ಲೋಕಸಭೆ ಚುನಾವಣ ಪ್ರಚಾರಕ್ಕಾಗಿ 21 ದಿನಗಳ ಬಿಡುಗಡೆಯನ್ನು ನೀಡಿದ ಸುಪ್ರೀಂ ಕೋರ್ಟ್, ಏಳು ಹಂತದ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಒಂದು ದಿನದ ನಂತರ ಜೂನ್ 2 ರಂದು ಸ್ವತಃ ಶರಣಾಗುವಂತೆ ಕೇಜ್ರಿವಾಲ್ ಅವರನ್ನು ಕೇಳಿದೆ.