ಹೊಸದಿಲ್ಲಿ: ವರ್ಷಗಳ ಕಾಲ ಸೆರೆಮನೆಯಲ್ಲಿದ್ದು ಬಿಡುಗಡೆಯಾದ ಸತ್ಯೇಂದ್ರ ಜೈನ್ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರವಿವಾರ ಭೇಟಿಯಾದರು. ಸತ್ಯೇಂದ್ರ ಜೈನ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಜೈನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಶುಕ್ರವಾರ ಸುಪ್ರೀಂ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಜೈನ್ ಅವರನ್ನು ಕಳೆದ ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲ್ಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯೇಂದ್ರ ಜೈನ್ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಜೈಲುಪಾಲಾದ ಬಳಿಕ ಇದೇ ಮೊದಲ ಬಾರಿಗೆ ಕೇಜ್ರಿವಾಲ್ ಅವರು ಭೇಟಿ ಮಾಡಿ ಮಾತನಾಡಿದ್ದಾರೆ.
ಭೇಟಿಯ ಬಳಿಕ ಟ್ವೀಟ್ ಮಾಡಿದ ಅರವಿಂದ ಕೇಜ್ರಿವಾಲ್, ‘ಧೈರ್ಯಶಾಲಿ ವ್ಯಕ್ತಿಯನ್ನು ಭೇಟಿಯಾದೆ.. ದಿ ಹೀರೊ” ಎಂದು ಬರೆದುಕೊಂಡಿದ್ದಾರೆ.
ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ವಾಶ್ ರೂಂನಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಆರಂಭದಲ್ಲಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.