ಚೆನ್ನೈ: ರಾಜಕೀಯ ಪ್ರವೇಶಿಸಲು ಸಿದ್ಧತೆ ನಡೆಸಿಕೊಂಡಿರುವ ಹಿರಿಯ ನಟ ಕಮಲಹಾಸನ್ ಅವರನ್ನು ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿ ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಗುರುವಾರ ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ಕಮಲ ಹಾಸನ್ ನಿವಾಸದಲ್ಲಿ ಇಬ್ಬರ ಭೇಟಿ ನಡೆದಿದ್ದು ಸಹಭೋಜನ ಸ್ವೀಕರಿಸಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ಕಮಲ್ ಹಾಸನ್ ಓರ್ವ ಸಮಗ್ರತೆ ಮತ್ತು ಧೈರ್ಯವಿರವ ವ್ಯಕ್ತಿ. ದೇಶ ಭ್ರಷ್ಟಾಚಾರ ಮತ್ತು ಕೋಮುವಾದವನ್ನು ಎದುರಿಸುತ್ತಿದ್ದು, ಎಲ್ಲಾ ರೀತಿಯ ಮನಸ್ಸಿನ ಜನರು ಒಂದಾಗಿ ಮಾತನಾಡಬೇಕಾಗಿದೆ. ಇಬ್ಬರು ಫಲಪ್ರದ ಮಾತುಕತೆ ನಡೆಸಿದ್ದೇವೆ’ ಎಂದರು.
ಕಮಲಹಾಸನ್ ಮಾತನಾಡಿ ‘ಕೇಜ್ರಿವಾಲ್ ಅವರು ನನ್ನನ್ನು ಭೇಟಿಯಾಗಲು ಬಯಸಿದ್ದರು . ಉದ್ದೇಶ ಒಂದೇ , ಭ್ರಷ್ಟಾಚಾರ ವಿರೋಧಿಸಿ. ರಾಜಕೀಯಸ್ಥಿತಿಗತಿಯನ್ನು ಅರಿಯಲು ನಾವು ಮಾತುಕತೆ ನಡೆಸಿದ್ದೇವೆ. ಇದು ನನಗೆ ರಾಜಕೀಯ ಕಲಿಕೆಯ ತಿರುವು’ ಎಂದಿದ್ದಾರೆ.
ಕಮಲಹಾಸನ್ ಅವರು ಆಪ್ ಸೇರ್ಪಡೆಯಾಗುತ್ತಾರೋ, ಇಲ್ಲ ಹೊಸ ಪಕ್ಷ ಹುಟ್ಟು ಹಾಕಿ ಆಪ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೋ ಎನ್ನುವ ಕೂತುಹಲ ಮೂಡಿದೆ.