Advertisement

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಪೈಪೋಟಿ: ಅರುಣ್‌ ಸಿಂಗ್‌

12:58 AM Apr 17, 2022 | Team Udayavani |

ಹೊಸಪೇಟೆ: ಕರ್ನಾಟಕ ಕಾಂಗ್ರೆಸ್‌ನಲ್ಲಿ “ಕೂಸು ಹುಟ್ಟುವ ಮುನ್ನ ಕುಲಾವಿ’ ಎಂಬಂತೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಶುರುವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೆಲಕಚ್ಚಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಪ್ರಾರಂಭವಾಗಿದೆ. ದೇಶದಲ್ಲೆಡೆ ಜನತೆ ಕಾಂಗ್ರೆಸ್‌ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ದೇಶದ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಕರ್ನಾಟಕದ ಕಾರ್ಯಕರ್ತರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ಕೇಂದ್ರದ ನರೇಂದ್ರ ಮೋದಿಯವರ ಸರಕಾರದ ಸಾಧನೆಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಮತ್ತು ಬಡವರ ಪರವಾದ ಕಾರ್ಯಕ್ರಮಗಳ ವಿವರವನ್ನು ಜನರಿಗೆ ತಲುಪಿಸಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು.

ವಿಜಯನಗರದಿಂದ ಪದಾಧಿಕಾರಿಗಳು ವಿಜಯದ ಸಂಕಲ್ಪ ದೊಂದಿಗೆ ಮರಳಲಿದ್ದಾರೆ. ಬಿಜೆಪಿ 2023ರ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಏರುವ ವಿಶ್ವಾಸವಿದೆ ಎಂದು ತಿಳಿಸಿದರು.

ಕಾಮನ್‌ ಮ್ಯಾನ್‌ ಮತ್ತು ಸಿಂಪಲ್‌ಮ್ಯಾನ್ ಎನಿಸಿದ ಬಸವರಾಜ ಬೊಮ್ಮಾಯಿ ಅವರು ಕಾರ್ಯಕರ್ತರ ಹುರುಪನ್ನು ಹೆಚ್ಚಿಸಿದ್ದಾರೆ. ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಸಂಘಟನ ಚತುರರಾಗಿದ್ದಾರೆ ಎಂದು ಶ್ಲಾ ಸಿದರು.

ಸಂತೋಷ್‌ ಪಾಟೀಲ್‌ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್‌.ಈಶ್ವರಪ್ಪ ಪರವಾಗಿ ಬಿಜೆಪಿ ಪಕ್ಷ ನಿಲ್ಲಲಿದೆ ಎಂದರು.

Advertisement

ಮಾಜಿ ಸಚಿವ ಈಶ್ವರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು. ರಾಜ್ಯದಲ್ಲಿ ಬಿಜೆಪಿ ಪಕ್ಷ ಈ ಹಂತಕ್ಕೆ ಬರಲು ಈಶ್ವರಪ್ಪ ಅವರ ಕೊಡುಗೆಯೂ ದೊಡ್ಡದಿದೆ. ಶೀಘ್ರದಲ್ಲೇ ಅವರು ಆರೋಪ ಮುಕ್ತರಾಗುವ ವಿಶ್ವಾಸವಿದೆ. ಆ ಬಳಿಕ ಅವರು ಪುನಃ ಸಚಿವರಾಗುತ್ತಾರೆ ಎಂದು ಹೇಳಿದರು.

ಸಂತೋಷ್‌ ಪಾಟೀಲ್‌ ಪ್ರಕರಣದಲ್ಲಿ ಈಶ್ವರಪ್ಪರನ್ನು ಸಿಲುಕಿಸಲು ಷಡ್ಯಂತ್ರ ನಡೆದಿದೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಆ ಬಳಿಕ ಸತ್ಯ ಹೊರಬರಲಿದೆ. ಈಶ್ವರಪ್ಪ ತಳಮಟ್ಟದಿಂದ ಬಿಜೆಪಿಯನ್ನು ಕಟ್ಟಿದ್ದಾರೆ. ನಮ್ಮ ಪಕ್ಷ ಅವರೊಂದಿಗಿದೆ. ಪ್ರಕರಣದಲ್ಲಿ ಕಾಂಗ್ರೆಸ್‌ ಷಡ್ಯಂತ್ರವಿದ್ದು ಅದು ತನಿಖೆಯಿಂದ ಬಹಿರಂಗವಾಗಲಿದೆ ಎಂದರು.

ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ಪ್ರಕರಣದಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಬಿಜೆಪಿಗೆ ಯಾವುದೇ ಮುಜುಗರ ಉಂಟಾಗಿಲ್ಲ. ಅವರು ಆರೋಪ ಬಂದ ಕೂಡಲೇ ಪ್ರಾಮಾಣಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
– ನಾರಾಯಣ ಸ್ವಾಮಿ, ಕೇಂದ್ರ ಸಚಿವ

ಕಾಂಗ್ರೆಸ್‌ಗೆ ಮರ್ಮಾಘಾತ ನೀಡುವ ಅನೇಕ ಸಂಗತಿಗಳು ಬಿಜೆಪಿಗೆ ಲಭಿಸಿವೆ. ಅದನ್ನು ಚುನಾವಣ ರಾಜಕೀಯ ತಂತ್ರಗಾರಿಕೆ ರೂಪದಲ್ಲಿ ಅವರಿಗೆ ಪ್ರತಿರೋಧ ಒಡ್ಡಲು ಕಾರ್ಯಕರ್ತರು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
 - ಸಿ.ಟಿ.ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next