ಬೆಂಗಳೂರು: ರಾಜ್ಯದ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಸರ್ವ ಸಿದ್ಧತೆ ಮಾಡಿಕೊಂಡಿದೆ. ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿಯೂ ಆದ ಅರುಣ್ ಸಿಂಗ್ ಹೇಳಿದರು.
ನಗರದ ಕೆ.ಕೆ.ಗೆಸ್ಟ್ ಹೌಸ್‍ನಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ನಡೆಯುವ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು. ಆ ಪಟ್ಟಿಯನ್ನು ರಾಜ್ಯದಿಂದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿ ಅಭ್ಯರ್ಥಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ:ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಎರಡು ಹೊಳಾಗುತ್ತದೆ: ಭವಿಷ್ಯ ನುಡಿದ ಈಶ್ವರಪ್ಪ
ರಾಜ್ಯ ಚುನಾವಣಾ ಸಮಿತಿ ಸಂಭಾವ್ಯರ ಪಟ್ಟಿಯನ್ನು ಸಿದ್ಧಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುತ್ತದೆ. ಆ ಬಳಿಕ ಕೇಂದ್ರ ಚುನಾವಣಾ ಸಮಿತಿಯು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಕ್ರಮವನ್ನು ಅನುಸರಿಸುತ್ತಿದ್ದೇವೆ ಎಂದು ಅವರು ಹಾನಗಲ್‍ನಲ್ಲಿ ವಿಜಯೇಂದ್ರ ಅವರ ಸ್ಪರ್ಧೆ ಕುರಿತ ಇನ್ನೊಂದು ಪ್ರಶ್ನೆಗೆ ಅರುಣ್ ಸಿಂಗ್ ಅವರು ಉತ್ತರ ನೀಡಿದರು.
ಸರ್ವ ಜನಾಂಗದ ಅಭ್ಯುದಯಕ್ಕಾಗಿ ರಾಜ್ಯ ಸರಕಾರವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಅವರ ಸರಕಾರ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಅದರ ಬಗ್ಗೆ ಜನರಿಗೆ ತಿಳಿಸಬೇಕಿದೆ. ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷವು ಅತ್ಯುತ್ತಮವಾಗಿ ಸಂಘಟನಾ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.