Advertisement

ಕೇಜ್ರಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡಿದ ಅರುಣ್ ಜೇಟ್ಲಿ!

05:46 PM May 22, 2017 | Sharanya Alva |

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರ ವಾದಿಸಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಜ್ರಿವಾಲ್ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

Advertisement

ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಹಾಗೂ ಇತರ ಐದು ಮಂದಿ ಮುಖಂಡರ ವಿರುದ್ಧ ಈ ಮೊದಲು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ವೇಳೆ ಕೇಜ್ರಿವಾಲ್ ಪರ ವಾದಿಸಿದ್ದ ವಕೀಲ ರಾಮ್ ಜೇಠ್ಮಲಾನಿ ಅವರು, ಜೇಟ್ಲಿ ಅವರನ್ನು ವಂಚಕ ಎಂದು ಆರೋಪಿಸಿದ್ದರು. ಈ ಆಕ್ಷೇಪಾರ್ಹ ಪದ ಬಳಸಿದ್ದರಿಂದ ಕೇಜ್ರಿವಾಲ್ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಿಸಿ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.

ಮೇ 15 ಮತ್ತು ಮೇ 17ರಂದು ದೆಹಲಿ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಜೇಠ್ಮಲಾನಿ ಅವರು ಕ್ರಾಸ್ ಎಕ್ಸಾಮಿನೇಷನ್ ಮಾಡುವ ವೇಳೆ ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಕೇಂದ್ರ ಸಚಿವ ಜೇಟ್ಲಿ ಅವರ ಪರವಾಗಿ ವಕೀಲ ಮಾಣಿಕ್ ಡೋಗ್ರಾ ಕೋರ್ಟ್ ಗೆ ಹಾಜರಾಗಿದ್ದರು. ಕೇಜ್ರಿವಾಲ್ ವಿರುದ್ಧ ತಾನು ಮತ್ತೊಂದು ಹೊಸ ಮಾನನಷ್ಟ ಮೊಕದ್ದಮೆ ಹೂಡುತ್ತಿರುವುದಾಗಿ ಕೋರ್ಟ್ ಗೆ ತಿಳಿಸಿದರು.

ದೆಹಲಿ ನ್ಯಾಯಾಲಯದಲ್ಲಿ ಕಳೆದ ಗುರುವಾರ, ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಕೇಜ್ರಿವಾಲ್ ನೀಡಿದ್ದ ಹೇಳಿಕೆ ಕುರಿತು ನಡೆದ ವಿಚಾರಣೆ ವೇಳೆ ಪರಸ್ಪರರ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆದಿತ್ತು. ವಂಚಕ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿರ್ದೇಶನದ ಪ್ರಕಾರ ವಕೀಲರು ಹೇಳಿದ್ದ ಪಕ್ಷದಲ್ಲಿ ಅವರೇ ನ್ಯಾಯಾಲಯಕ್ಕೆ ಬಂದು ವಾದಿಸಲಿ ಎಂದು ನ್ಯಾ ಮನಮೋಹನ್ ಅಭಿಪ್ರಾಯಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next