ನವದೆಹಲಿ:ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ(ಡಿಡಿಸಿಎ) ಎಂದು ಆರೋಪಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವಿಚಾರಣೆ ಎದುರಿಸುವಂತೆ ದೆಹಲಿ ಕೋರ್ಟ್ ಶನಿವಾರ ಕೇಜ್ರಿವಾಲ್ ಗೆ ಸೂಚನೆ ನೀಡಿದೆ.
ಕೇಜ್ರಿ ಹಾಗು ಆಪ್ ಮುಖಂಡರ ವಿರುದ್ಧ ಸಚಿವ ಅರುಣ್ ಜೇಟ್ಲಿ ದಾಖಲಿಸಿದ್ದ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯನ್ನು ಮೆಟ್ರೋಪೊಲಿಟಿಯನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಅವರು ಕೈಗೆತ್ತಿಕೊಂಡಾಗ, ವಿಚಾರಣೆಗೆ ಜೇಟ್ಲಿ ಗೈರು ಹಾಜರಾಗಿದ್ದಕ್ಕೆ ಬಿಸಿ, ಬಿಸಿ ವಾದ, ಪ್ರತಿವಾದ ನಡೆಯಿತು.
ಪ್ರಕರಣದ ಆರೋಪಿತ ಅರವಿಂದ್ ಕೇಜ್ರಿವಾಲ್ ಕೋರ್ಟ್ ಹಾಲ್ ನೊಳಗೆ ಹಾಜರಿದ್ದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ಪ್ರಕರಣಕ್ಕೆ ಸಂಬಂಧಪಡದವರು, ಹಾಲ್ ನಿಂದ ಹೊರಹೋಗುವಂತೆ ಸೂಚಿಸಿದರು.
ಮಾನನಷ್ಟ ಮೊಕದ್ದಮೆ ವಿಚಾರಣೆಯಲ್ಲಿ ಕೇಜ್ರಿವಾಲ್ ಸ್ವತಃ ವಾದಿಸಿದ್ದರು. ವಾದ, ಪ್ರತಿವಾದ ಆಲಿಸಿದ ಬಳಿಕ ಚೀಫ್ ಮೆಟ್ರೊಪೊಲಿಟಿಯನ್ ಮ್ಯಾಜಿಸ್ಟ್ರೇಟ್ ಅವರು, ಕೇಜ್ರಿವಾಲ್ ಹಾಗೂ ಇತರ ಆಪ್ ಮುಖಂಡರಿಗೆ ವಿಚಾರಣೆ ಎದುರಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದರು.
ವಿಚಾರಣೆಯಲ್ಲಿ ಕೇಜ್ರಿವಾಲ್ ಹಾಗೂ ಆಪ್ ಮುಖಂಡರಾದ ಅಶುತೋಷ್, ಕುಮಾರ್ ಬಿಸ್ವಾಸ್, ಸಂಜಯ್ ಸಿಂಗ್, ರಾಘವ್ ಚಡ್ಡಾ ಮತ್ತು ದೀಪಕ್ ಬಾಜ್ ಪಾಯ್ ಅವರು ತಾವು ದೋಷಿತರಲ್ಲ, ವಿಚಾರಣೆ ಎದುರಿಸಲು ಸಿದ್ಧ ಎಂದು ಹೇಳಿದ್ದರು. ಮುಂದಿನ ವಿಚಾರಣೆ ಮೇ 20ರಂದು ನಡೆಯಲಿದೆ.
ಅರುಣ್ ಜೇಟ್ಲಿ ಅವರು 13 ವರ್ಷಗಳ ಕಾಲ ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ವೇಳೆ ಭಾರೀ ಅವ್ಯವಹಾರ ನಡೆದಿರುವುದಾಗಿ ಕೇಜ್ರಿವಾಲ್ ಹಾಗೂ ಆಪ್ ಮುಖಂಡರು ಆರೋಪಿಸಿದ್ದರು. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಹೇಳಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2015ರಲ್ಲಿ ಕೇಜ್ರಿವಾಲ್ ಹಾಗೂ ಆಪ್ ಮುಖಂಡರ ವಿರುದ್ಧ 10 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.