Advertisement
ಶಿಲಾಶಿಲ್ಪ ಶಿಬಿರದಲ್ಲಿ ಈಗಾಗಲೇ ಇತಿಹಾಸದ ಪುಟ ಸೇರಿರುವ ಹಲವುಕಲಾಕೃತಿಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ವಿಗ್ರಹಗಳ ಕೈತ್ತನೆಯಲ್ಲಿ ತೊಡಗಿದ್ದಾರೆ. ವಿಜಯನಗರ , ಚಾಲುಕ್ಯ, ಹೊಯ್ಸಳ, ಚೋಳರ, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕೆತ್ತಲ್ಪಟ್ಟ ಸಾಂಪ್ರಾದಾಯಿಕ ಶಿಲಾ ಶಿಲ್ಪಗಳು ಸಿದ್ಧಗೊಳ್ಳುತ್ತಿದ್ದು, ವಿಜಯನಗರ ಕಾಲದ ವೈಭವವನ್ನು ಪುನಃ ಸಾರುವಂತಿವೆ. ಈ ಎಲ್ಲ ಶಿಲ್ಪಗಳು ಮೂರು ದಿನ ನಡೆಯುವ ಹಂಪಿ ಉತ್ಸವದಲ್ಲಿ ಪ್ರವಾಸಿಗರನ್ನು ತಮ್ಮತ್ತ ಸೆಳೆಯಲಿವೆ.ಶಿಲಾಶಿಲ್ಪ ಶಿಬಿರದಲ್ಲಿ 17 ಶಿಲೆಗಳನ್ನು ಕೆತ್ತಿದ್ದು, ಅದರಲ್ಲಿ 5 ಸಮಕಾಲಿನ ಶಿಲೆಗಳು ಹಾಗೂ 12 ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಾಂಪ್ರಾದಾಯಿಕ ಶಿಲಾ ವಿಗ್ರಹಗಳು ಸಿದ್ಧವಾಗುತ್ತಿವೆ. ಬೆಳಗಾವಿ ಮೂಲದ ಕಲಾವಿದ ಕೆ.ಆರ್.ಮಹಾದೇವಪ್ಪ ಶ್ರೀಕೃಷ್ಣ ದೇವರಾಯ, ಚನ್ನಾಂಬಿಕೆ, ತಿರುಮಲಾಂಬಿಕೆ ದೇವಿ ವಿಗ್ರಹಗಳನ್ನು ಚೋಳರ ಶೈಲಿಯಲ್ಲಿ ಕೆತ್ತಲಾಗುತ್ತಿದ್ದು ಇದು ಸಾಂಪ್ರಾದಾಯಿಕ ಶಿಲೆಯಾಗಿದೆ. ಅದೇ ರೀತಿಯಲ್ಲಿ ಡಮರುಗ ಬಾರಿಸುವ ವ್ಯಕ್ತಿಯ ಶಿಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಕಲಾವಿದ ಮೋಹನ್ ಹೊಯ್ಸಳ ಶೈಲಿಯಲ್ಲಿ ಕತ್ತುತ್ತಿದ್ದಾರೆ.
ಬಳ್ಳಾರಿಯ ಚಂದ್ರಶೇಖರ್ ಹೊಯ್ಸಳರ ಕಾಲದ ನಾಟ್ಯ ಸರಸ್ವತಿ ವಿಗ್ರಹ ತಯಾರಿಸುವಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಮಂಡ್ಯದ ಕಲಾವಿದ ಪಿ.ಸಂದೀಪ್ ಚಾಳುಕ್ಯ ಶೈಲಿಯಲ್ಲಿ ಶಂಕು ಭಾಷಿಣಿ ವಿಗ್ರಹ ತಯಾರಿಸುತ್ತಿದ್ದಾರೆ.
Related Articles
Advertisement
ಜಂಬುನಾಥ ಬಡಿಗೇರ್ ಎಂಬ ಕಲಾವಿದ ಪುಸ್ತಕ ಮತ್ತು ಮಸ್ತಕ ಎಂಬ ನವ್ಯ ಶಿಲಾಶಿಲ್ಪವನ್ನು ರಚಿಸುತ್ತಿದ್ದಾರೆ. ಗದಗಜಿಲ್ಲೆಯ ಬಸಪ್ಪ ಶಿವಪ್ಪ ಬಂಡಿವಡ್ಡರ್ ಜಲ ಸಂರಕ್ಷಣೆ ಸಾರುವ ಶಿಲ್ಪ ಕೆತ್ತುತ್ತಿದ್ದಾರೆ. ಕೊಪ್ಪಳದ ಕುಕನೂರಿನ ಹುಚ್ಚೀರಪ್ಪ ಜಾಗತಿಕ ತಾಪಮಾನದ ಬಗ್ಗೆ ಸಾರುವ ಕಲಾಕೃತಿ ಅನಾವರಣಗೊಳಿಸುತ್ತಿದ್ದಾರೆ. ಕಲಬುರ್ಗಿಯ ಕಲಾವಿದ ಬಾಬುರಾವ್ ಮೊಳಕೆ ನವ್ಯ ಶಿಲಾಶಿಲ್ಪ ರಚಿಸಿದ್ದು, ಇದು ಬರಗಾಲದ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಇನ್ನು ಶಿಬಿರದಲ್ಲಿ ವಿಶೇಷವಾಗಿ ಹಂಪಿಯ ಪರಂಪರೆ ಸಾರುವ ಹಲವು ಸ್ಮಾರಕಗಳನ್ನು ಒಟ್ಟೂಗುಡಿಸುವ ಪ್ರಯತ್ನವನ್ನು ಉತ್ತರ ಕನ್ನಡ ಜಿಲ್ಲೆಯ ಚಂದ್ರಶೇಖರ್ ನಾಯಕ್ ಮಾಡುತ್ತಿದ್ದು, ಕಲ್ಲಿನ ರಥ, ಜೈನ ದೇವಾಲಯ, ಬಿಷ್ಟಪ್ಪಯ್ಯ ಗೋಪುರ, ಲೋಟಸ್ ಮಹಲ್, ಅಕ್ಕ-ತಂಗಿ ಗುಡ್ಡ, ಹೇಮಕೂಟದ ಸ್ಮಾರಕಗಳು ಶಿಲಾ ಮಂಟಪಗಳು ಒಂದೇ ಕಡೆ ಕಾಣಸಿಗುಂತೆ ತಮ್ಮದೇ ಶೈಲಿಯಲ್ಲಿ ಹೊಸ ಕಲಾಕೃತಿ ರೂಪಿಸುತ್ತಿದ್ದಾರೆ. ಶಿಲ್ಪಗಳು ಶೇ.75ರಷ್ಟು ಪೂರ್ಣಗೊಂಡಿದ್ದು, ಪ್ರಭಾವಳಿ, ಆಭರಣಗಳ ಕೆತ್ತನೆ ಜೋರಾಗಿ ನಡೆದಿದೆ. ವಿಗ್ರಹ ರಚನೆಯಲ್ಲಿ ತೀರ ಸೂಕ್ಷ್ಮವಾದ ಕಾರ್ಯ ಎಂದರೆ ಆಭರಣ ಮತ್ತು ಪ್ರಭಾವಳಿಗಳು. ಕಲ್ಲಲ್ಲಿ ಕಲೆಯನ್ನು ಅರಳಿಸುವ ಶಕ್ತಿ ಜಕ್ಕಣಾಚಾರ್ಯರಂತೆ ಶ್ರದ್ಧೆ, ನಿಷ್ಠೆ ಹೊಂದಿದವರಿಗೆ ಮಾತ್ರ ಸಾಧ್ಯ. ಭಾರತ ಸಾಂಪ್ರಾದಾಯಿಕ, ಸಾಂಸ್ಕೃತಿಕ, ಕಲೆ, ವಾಸ್ತುಶಿಲ್ಪಕ್ಕೆ ಹೆಸರಾಗಿದ್ದು, ಈಗಲೂ ಅಂಥ ಕಲೆ ಉಳಿಸುವ ಕಲಾವಿದರು ಕಾಣುತ್ತಿರುವುದು ಈ ನಾಡಿನ ಹೆಮ್ಮೆಯಾಗಿದೆ.
ಪ್ರೊ| ಎಚ್.ಎನ್.ಕೃಷ್ಣೇಗೌಡ, ದೃಶ್ಯಕಲಾ ವಿಭಾಗ ಕವಿವಿ (ವೀಕ್ಷಕ).