Advertisement

ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳು

04:39 PM May 30, 2022 | Team Udayavani |

ಬಳ್ಳಾರಿ: ಕರ್ನಾಟಕ ನಾಟಕ ಅಕಾಡೆಮಿಯು ಪ್ರಸಕ್ತ 2021-22ನೇ ಸಾಲಿಗೆ ಹೊಸಪೇಟೆಯ ಕನ್ನಡ ಕಲಾಸಂಘ ಸೇರಿ 31 ಕಲಾವಿದರಿಗೆ ಘೋಷಣೆ ಮಾಡಿದ್ದ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳನ್ನು ಭಾನುವಾರ ಪ್ರದಾನ ಮಾಡಲಾಯಿತು. ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪಿಂಜಾರ್‌ ರಂಜಾನ್‌ ಸಾಬ್‌ ವೇದಿಕೆಯಲ್ಲಿ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.

Advertisement

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ರಂಗ ಭೂಮಿಯ ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ. ನಾಟಕಗಳಿಂದಲೇ ನಮ್ಮ ಸಂಸ್ಕೃತಿ ಉಳಿದಿದೆ. ಕಲಾವಿದರು ತಮ್ಮ ಜೀವನವನ್ನು ರಂಗಕಲೆಗಾಗಿಯೇ ಮೀಸಲಿಟ್ಟಿದ್ದಾರೆ. ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದ ಅವರು, ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡ, ಸಿಡಿಗಿನಮೊಳ ಚಂದ್ರಯ್ಯಸ್ವಾಮಿ, ಮರಿಯಮ್ಮನಹಳ್ಳಿ ದುರ್ಗಾದಾಸ್‌, ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ್‌ ಸೇರಿ ಹಲವಾರು ಕಲಾವಿದರನ್ನು ಸ್ಮರಿಸಿದರು.

ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಲಾವಿದರಿಗೆ ನೆರೆವು ಕಲ್ಪಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ನುಡಿತೋರಣ ಪುಸ್ತಕ ಬಿಡುಗಡೆ ಗೊಳಿಸಿದ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ ಮಾತನಾಡಿ, ಅಭಿನಯ ಮೂಲಕ ಜನರನ್ನು ರಂಜಿಸುವ ಕಲಾವಿದರ ಹಿಂದೆ ಅದೆಷ್ಟು ದುಃಖ, ನೋವುಗಳಿವೆಯೋ ಗೊತ್ತಾಗಲ್ಲ. ಅಂಥ ಅರ್ಹ, ಸಮರ್ಥ ಕಲಾವಿದರನ್ನು ನಾಟಕ ಅಕಾಡೆಮಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಲಾವಿದರಿಗೆ ಮಾಸಾಶನ ವಿತರಣೆಯಲ್ಲಿ ಒಂದಷ್ಟು ಗೊಂದಲಗಳಿದ್ದು, ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಸಚಿವರೇ ಬಗೆಹರಿಸಬೇಕು ಎಂದ ಅವರು, ಮಾಸಾಶನವನ್ನು 3 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಬಳ್ಳಾರಿಯಲ್ಲಿ ವಿಜಯನಗರ ಕಾಲ ದಿಂದಲೂ ಕಲೆಯನ್ನು ಪೋಷಿಸುತ್ತಲೇ ಬಂದಿದ್ದು, ಇದು ನಶಿಸದೆ ಜೀವಂತವಾಗಿರಬೇಕು. ಬಳ್ಳಾರಿ ನಗರದಲ್ಲಿ 3 ರಿಂದ 5 ಸಾವಿರ ಜನರು ಹಿಡಿಸುವಷ್ಟು ದೊಡ್ಡ ಆಡಿಟೋರಿಯಂ ನಿರ್ಮಿಸಬೇಕೆಂಬುದು ಸಚಿವ ಬಿ. ಶ್ರೀರಾಮುಲು ಅವರ ಕನಸಾಗಿದೆ. ಅದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದ ಅವರು ರಂಗಭೂಮಿ ಕಲೆ ನಶಿಸದೆ ಜೀವಂತವಾಗಿರಿಸಬೇಕು ಎಂದು ತಿಳಿಸಿದರು.

ಅಕಾಡೆಮಿ ಅಧ್ಯಕ್ಷ ಆರ್‌. ಭೀಮಸೇನ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ, ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಮಾತನಾಡಿದರು. ಸದಸ್ಯ ಪ್ರಭುದೇವ ಕಪ್ಪಗಲ್ಲು ಸ್ವಾಗತಿಸಿದರು. ಬಳಿಕ ಎಲ್ಲ ಕಲಾವಿದರಿಗೆ ಸಚಿವ ಬಿ. ಶ್ರೀರಾಮುಲು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ವೈ. ಎಂ. ಸತೀಶ್‌, ಬುಡಾ ಅಧ್ಯಕ್ಷ ಪಿ. ಪಾಲನ್ನ, ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಶ್ರೀನಿವಾಸಲು, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್‌ ಗುಪ್ತಾ ಇತರರು ವೇದಿಕೆಯಲ್ಲಿ ಇದ್ದರು.

Advertisement

ಪ್ರಶಸ್ತಿ ಪುರಸ್ಕೃತರು

ಬೆಂಗಳೂರಿನ ಸಹಜ ನಟ, ರಂಗಭೂಮಿಯ ಅಣ್ಣ ಎಂದೇ ಖ್ಯಾತರಾದ ದತ್ತಾತ್ರೇಯ ಕುರಹಟ್ಟಿ ಅವರಿಗೆ ಜೀವಮಾನ ರಂಗಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.

ವಾರ್ಷಿಕ ರಂಗಪ್ರಶಸ್ತಿ ಪುರಸ್ಕೃತರು

ಕೊಪ್ಪಳದ ಗ್ರಾಮೀಣ ರಂಗಕಲಾ ಚತುರ ಹಾಲಯ್ಯ ವೀರಭದ್ರಯ್ಯ ಹುಡೇಜಾಲಿ, ಬಳ್ಳಾರಿಯ ಹವ್ಯಾಸಿ ನೃತ್ಯನಟಿ ಲತಾಶ್ರೀ, ಬಳ್ಳಾರಿಯ ನಟ, ನೇಪಥ್ಯ ಕಲಾವಿದ ಬಿ.ಗಂಗಣ್ಣ, ವಿಜಯಪುರದ ಲಲಿತಾಬಾಯಿ ಲಾಲಪ್ಪ ದಶವಂತ, ಧಾರವಾಡದ ಹಾಸ್ಯ ಕಲಾವಿದ ಹನಮಂತ ನಿಂಗಪ್ಪ ಸುಣಗದ, ಬಾಗಲಕೋಟೆಯ ಸುಮಿತ್ರಾ ಯಲ್ಲವ್ವ ಮಾದರ, ಬೆಳಗಾವಿಯ ಅಡವಯ್ಯ ಸ್ವಾಮಿ ವಿ. ಕುಲಕರ್ಣಿ, ಹಾವೇರಿಯ ಶಾಂತಪ್ಪ ರುದ್ರಗೌಡ ಜಾಲಿಕೋನಿ, ಬೆಂಗಳೂರಿನ ವಿಜಯಕುಮಾರ ಜಿತೂರಿ, ದಾವಣಗೆರೆಯ ಕೆ.ವೀರಯ್ಯಸ್ವಾಮಿ, ಬಿ.ಪಿ.ಯಮನೂರಸಾಬ್‌, ತುಮಕೂರಿನ ಡಿ.ಅಡವೀಶಯ್ಯ, ಚಿತ್ರದುರ್ಗದ ಟಿ.ವಿಮಲಾಕ್ಷಿ, ಶಿವಮೊಗ್ಗದ ಎಸ್‌.ಸಿ.ಗೌರಿಶಂಕರ, ಚಿಕ್ಕಮಗಳೂರಿನ ಕೆ.ಎಂ.ನಂಜುಂಡಪ್ಪ, ಬೆಂಗಳೂರಿನ ಎಂ.ಎನ್‌.ಸುರೇಶ್‌, ಮೈಸೂರಿನ ಸರೋಜಾ ಹೆಗಡೆ, ಮಂಗಳೂರಿನ ಸರೋಜಿನಿ ಶೆಟ್ಟಿ, ಉಡುಪಿಯ ಚಂದ್ರಹಾಸ ಸುವರ್ಣ, ಬೆಂಗಳೂರಿನ ಡಿ.ಕೆಂಪಣ್ಣ, ತುಮಕೂರಿನ ಡಾ| ಜೆ. ಶ್ರೀನಿವಾಸ ಮೂರ್ತಿ, ಬೆಂಗಳೂರಿನ ಸುಧಾ ಹೆಗಡೆ, ಎಂ.ಸಿ.ಸುಂದರೇಶ ಅವರಿಗೆ ವಾರ್ಷಿಕ ರಂಗ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ದತ್ತಿನಿಧಿ ಪುರಸ್ಕಾರ

ಬೆಳಗಾವಿಯ ಮಹಾಂತೇಶ್‌ ರಾಮದುರ್ಗ ಅವರಿಗೆ ಯುವ ರಂಗಪ್ರಶಸ್ತಿ, ಆಂಧ್ರದ ಆದವಾನಿಯ ಬದಿನೇಹಾಳು ಭೀಮಣ್ಣ ಅವರಿಗೆ ಗಡಿನಾಡು ರಂಗ ಪ್ರಶಸ್ತಿ ನೀಡಲಾಗಿದ್ದು, ಬೆಂಗಳೂರಿನ ಎಚ್.ವೆಂಕಟೇಶ್‌ಗೆ ಕಲ್ಚರ್‌ ಕೆಮೆಡಿಯನ್‌ ಕೆ. ಹಿರಣ್ಣಯ್ಯ ದತ್ತಿನಿಧಿ ಪುರಸ್ಕಾರ, ಜಲಮಂಡಳಿ ಆರ್‌. ರಾಮಚಂದ್ರಗೆ ನಟರತ್ನ ಚಿಂದೋಡಿ ವೀರಪ್ಪ ದತ್ತಿನಿಧಿ ಪುರಸ್ಕಾರ, ಕಲಬುರಗಿಯ ಸೀತಾ ಚಂದ್ರಕಾಂತ ಮಲ್ಲಾಬಾದಿ ಅವರಿಗೆ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿನಿಧಿ ಪುರಸ್ಕಾರ, ಮಡಿಕೇರಿಯ ಪಿ.ಎ.ಸರಸ್ವತಿ ಚಂಗಪ್ಪ ಅವರಿಗೆ ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರ ಮತ್ತು ಹೊಸಪೇಟೆಯ ಟಿ.ಬಿ.ಡ್ಯಾಮ್‌ ಕನ್ನಡ ಕಲಾಸಂಘಕ್ಕೆ ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ, ಲೇಖಕ ಎಂ.ಎಂ.ಶಿವಪ್ರಕಾಶ್‌ ಅವರಿಗೆ 2020 ವಾರ್ಷಿಕ ಪುಸ್ತಕ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next