Advertisement

ಮೀನಿನ ಸಂತತಿ ವೃದ್ಧಿಗೆ “ಕೃತಕ ಬಂಡೆ’ ಸಾಲು ಯೋಜನೆ; ರಾಜ್ಯದ ಕರಾವಳಿಯಲ್ಲಿ ಪ್ರಥಮ ಪ್ರಯತ್ನ

09:24 AM Mar 16, 2024 | Team Udayavani |

ಕುಂದಾಪುರ: ಮೀನಿನ ಸಂತಾನೋತ್ಪತ್ತಿ ಹಾಗೂ ಸಂತತಿ ವೃದ್ಧಿಗೆ ಪೂರಕವಾಗಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಸಮುದ್ರದಲ್ಲಿ ಕೃತಕ ಬಂಡೆಗಳ ನಿರ್ಮಾಣದ ಯೋಜನೆಯನ್ನು ರಾಜ್ಯ ಸರಕಾರ ಹಾಕಿಕೊಂಡಿದೆ.

Advertisement

ಕರಾವಳಿಯಲ್ಲಿ ಪ್ರಥಮ ಬಾರಿಗೆ ಭಟ್ಕಳದ ಬೆಳಕೆಯಲ್ಲಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಮೇ ಒಳಗೆ ಕರಾವಳಿ ಜಿಲ್ಲೆಗಳ 56 ಕಡೆ ನಿರ್ಮಾಣವಾಗಲಿದೆ.

ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ಸುಧಾರಿ ಸಲು ಕರಾವಳಿ ಜಿಲ್ಲೆ ಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಯಶಸ್ವಿ ಯಾಗಿದ್ದು, ರಾಜ್ಯದ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿ, ಅಧ್ಯಯನ ನಡೆಸಿದೆ.

ಏನಿದು ಕೃತಕ ಬಂಡೆ?

ಸಿಮೆಂಟ್‌ನಿಂದ ತ್ರಿಕೋನಾಕೃತಿ, ಆಯತಾಕಾರ ಹಾಗೂ ಉರುಟು ಆಕಾರಗಳಲ್ಲಿ ಕೃತಕವಾದ ಬಂಡೆ ಗಳನ್ನು ತಯಾರಿಸಿ ಸಮುದ್ರದ ದಡದಿಂದ ಸುಮಾರು ಐದು ನಾಟಿಕಲ್‌ ಮೈಲು ದೂರ (ಸಮುದ್ರದ 10-15 ಮೀ. ಆಳ)ದಲ್ಲಿ ಬೋಟ್‌ ಹಾಗೂ ದೋಣಿಗಳಿಗೆ ಹಾನಿಯಾಗದಂತೆ ಆಳದಲ್ಲಿ ಸ್ಥಾಪಿಸಲಾಗುತ್ತದೆ. ಒಂದೊಂದು ಬಂಡೆಯೂ 4-5 ಟನ್‌ ಭಾರವಿರುತ್ತದೆ.

Advertisement

ದ.ಕ.- ಉಡುಪಿ: ಎಲ್ಲೆಲ್ಲಿ ನಿರ್ಮಾಣ?

ಮತ್ಸ್ಯಸಂಪದ ಯೋಜನೆಯಡಿ ಕರಾವಳಿಯ 3 ಜಿಲ್ಲೆಗಳ ಸಮುದ್ರದಲ್ಲಿ ಒಟ್ಟು 56 ಕಡೆಗಳಲ್ಲಿ 17.45 ಕೋ.ರೂ. ವೆಚ್ಚದಲ್ಲಿ ಕೃತಕ ಬಂಡೆಗಳು ಸ್ಥಾಪನೆಯಾಗಲಿವೆ. ಪ್ರತಿಯೊಂದು ಕಡೆಗೂ ತಲಾ 31 ಲಕ್ಷ ರೂ. ವೆಚ್ಚವಾಗಲಿದೆ.

ಉತ್ತರ ಕನ್ನಡ ಜಿಲ್ಲೆಯ 25 ಕಡೆ, ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ಸಸಿಹಿತ್ಲು, ಸೋಮೇಶ್ವರ, ಸುರತ್ಕಲ್‌ (ಗುಡ್ಡೆಕೊಪ್ಪಲು), ಉಳ್ಳಾಲ, ಬೈಕಂಪಾಡಿ, ಚಿತ್ರಾಪುರ, ಹಳೆಯಂಗಡಿ, ಹೊಸಬೆಟ್ಟು, ಇಡ್ಯಾ, ಕುಳಾç- ಚಿತ್ರಾಪುರ, ಮಿತ್ರಪಟ್ನ-ಮುಕ್ಕ ಸೇರಿ 12 ಕಡೆಗಳಲ್ಲಿ, ಉಡುಪಿಯ ತ್ರಾಸಿ, ಉಪ್ಪುಂದ, ಯಡ್ತರೆ, ತೆಕ್ಕಟ್ಟೆ, ಬೀಜಾಡಿ, ಕಿರಿಮಂಜೇಶ್ವರ, ಕುಂಭಾಶಿ, ಕೋಡಿ, ಮರವಂತೆ, ನಾವುಂದ, ಪಡುವರಿ, ಮೂಳೂರು, ಪಡುಬಿದ್ರಿ, ಉಳಿಯಾರುಗೋಳಿ, ಎರ್ಮಾಳು ಬಡಾ, ಎರ್ಮಾಳ್‌ ತೆಂಕ, ಕಾಪು, ಕೋಟ, ಕೋಟತಟ್ಟು ಸೇರಿ ಒಟ್ಟು 19 ಕಡೆಗಳಲ್ಲಿ ಅಳವಡಿಕೆಯಾಗಲಿದೆ.

ಮೀನು ಸಂತತಿ ವೃದ್ಧಿಗೆ ಹೇಗೆ ಪೂರಕ?

ಮತ್ಸ್ಯ ಕ್ಷಾಮ, ಬೆಳಕಿನ ಮೀನುಗಾರಿಕೆ, ಬುಲ್‌ಟ್ರಾಲ್‌ ಸಹಿತ ಅವೈಜ್ಞಾನಿಕ ಮೀನುಗಾರಿಕೆಯಿಂದ ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಸಿಗುತ್ತಿಲ್ಲ. ಆಳ ಸಮುದ್ರದ ಮೀನುಗಳು ತೀರದ ಸಮೀಪದ ಪ್ರದೇಶಕ್ಕೆ ಬಂದು ಸಂತಾನೋತ್ಪತ್ತಿ ನಡೆಸುತ್ತವೆ. ಈ ಕೃತಕ ಬಂಡೆಗಳನ್ನು ಅಲ್ಲಲ್ಲಿ ಸ್ಥಾಪಿಸುವುದರಿಂದ ಮೀನುಗಳು ಅವುಗಳ ಬಳಿ ಮೊಟ್ಟೆ ಇಡಲು ಸಹಕಾರಿ ಯಾಗಲಿದೆ. ಮರಿಗಳು ಬಂಡೆಗಳ ಬಳಿಯೇ ಇರು ವುದರಿಂದ ಬೋಟುಗಳ ಹೊಡೆತಕ್ಕೆ ಸಿಲುಕುವ, ಬಲೆಗಳಿಗೆ ಸಿಕ್ಕಿ ಹಾಕಿ ಕೊಳ್ಳುವ ಅಪಾಯವಿರದು. ಅಪರೂಪದ ಮೀನಿನ ಸಂತತಿ ಉಳಿಸುವ ಜತೆಗೆ ಎಲ್ಲ ರೀತಿಯ ಮೀನುಗಳ ಸಂತತಿಯೂ ಹೆಚ್ಚಾಗಲಿದೆ. ಇದರಿಂದ ಮೀನುಗಾರಿಕೆಗೆ ಭವಿಷ್ಯದಲ್ಲಿ ಅನುಕೂಲ ಆಗಲಿದೆ ಎಂದು ಅಂದಾಜಿಸಲಾಗಿದೆ.

ಈ ಕೃತಕ ಬಂಡೆಗಳು ಮೀನಿನ ಸಂತಾನೋತ್ಪತ್ತಿಗೆ ನೆರವಾಗಲಿದೆ. ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಇದು ವರದಾನವಾಗಲಿದೆ. ಬೆಳಕೆಯಲ್ಲಿ ಕೃತಕ ಬಂಡೆಸಾಲು ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಮೇ ಒಳಗೆ ಎಲ್ಲ 56 ಕಡೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಮೀನುಗಾರಿಕಾ ಬೋಟ್‌ಗಳಿಗೆ ತೊಂದರೆಯಾಗದು. – ಮಂಕಾಳ ಎಸ್‌. ವೈದ್ಯ, ಮೀನುಗಾರಿಕೆ, ಬಂದರು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next