Advertisement

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

07:07 PM Nov 25, 2024 | Team Udayavani |

ಹೊಸದಿಲ್ಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅದಾನಿ ಗ್ರೂಪ್ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ನಿಯಮ 267 ರ ಅಡಿಯಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡದಿರುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ(ನ25) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಈ ವಿಷಯವು ದೇಶದ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುವುದರಿಂದ ಸರಕಾರವು ಸತ್ಯ ಹೊರಬರುವಂತೆ ಮಾಡಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ಸೋಮವಾರ ನಿಯಮ 267 ರ ಅಡಿಯಲ್ಲಿ ಸಲ್ಲಿಸಲಾದ 13 ನೋಟಿಸ್‌ಗಳನ್ನು ನಿರಾಕರಿಸಿದ್ದಾರೆ, ಇದರಲ್ಲಿ 7 USD 265 ಮಿಲಿಯನ್ ಲಂಚವನ್ನು ಪಾವತಿಸಿದ ಆರೋಪದ ಮೇಲಿನ ಯುಎಸ್ ದೋಷಾರೋಪಣೆಯ ಕುರಿತು ಚರ್ಚೆಯನ್ನು ಕೋರಲಾಗಿತ್ತು. ಲೋಕಸಭೆಯಲ್ಲೂ ಇದೇ ರೀತಿಯ ಸೂಚನೆಗಳನ್ನು ತಿರಸ್ಕರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕೆಲವು ಪ್ರಮುಖ ಉದ್ಯಮಿಗಳಿಗೆ ವಿದೇಶದಲ್ಲಿ ಗುತ್ತಿಗೆ ಪಡೆಯಲು ಸಹಾಯ ಮಾಡುವ ಮೂಲಕ ದೇಶದ ಪ್ರತಿಷ್ಠೆಯನ್ನು ಹಾಳು ಮಾಡಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ, 267 ನೇ ನಿಯಮವನ್ನು ಇಂತಹ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಮಾತ್ರ ಮಾಡಲಾಗಿದೆ. ಇಲ್ಲದಿದ್ದರೆ ಆ ನಿಯಮ ಇರಬಾರದಿತ್ತು. ಈ ನಿಯಮದ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅವಕಾಶ ನೀಡಬೇಕು ಎಂದು ನಾವು ಬಯಸುತ್ತೇವೆ ಎಂದು ಕಿಡಿ ಕಾರಿದ್ದಾರೆ.

Advertisement

ಜೆಪಿಸಿಯಲ್ಲಿ ಬಿಜೆಪಿಯಿಂದ ಹೆಚ್ಚು ಜನರು ಇರುತ್ತಾರೆ ಮತ್ತು ಎಲ್ಲರಿಗೂ ಪ್ರತಿನಿಧಿಸಲು ಅವಕಾಶ ಸಿಗುತ್ತದೆ. ಜೆಪಿಸಿ ರಚನೆ ಮಾಡಿ, ಸತ್ಯ ಹೊರಬರಲಿ ಎಂದು ಖರ್ಗೆ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಈ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡದೆ ಪ್ರತಿಪಕ್ಷಗಳ ಗದ್ದಲದ ನಂತರ ಎರಡೂ ಸದನಗಳನ್ನು ದಿನಕ್ಕೆ ಮುಂದೂಡಲಾಯಿತು. ಸದನ ಮುಂದೂಡಿಕೆಗೆ ಕಾರಣ ಗೊತ್ತಿಲ್ಲ ಎಂದು ಖರ್ಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next