Advertisement

ಮೀನಿಗಿಲ್ಲ ಕೃತಕ ಆಹಾರ ತಯಾರಿಕೆ ಘಟಕ

11:49 AM Jan 04, 2022 | Team Udayavani |

ವಿಜಯಪುರ: ರಾಜ್ಯದ ಒಳನಾಡು ಮೀನುಗಾರಿಕೆ ಅಭಿವೃದ್ಧಿ ವಿಷಯದಲ್ಲಿ ಅದರಲ್ಲೂ ಉತ್ತರ ಒಳನಾಡು ಪ್ರದೇಶದಲ್ಲಿ ರೈತರು ಮೀನುರಾರಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಮೀನು ಸಾಕಾಣಿಕೆಗೆ ಪ್ರಮುಖವಾರಿ ಬೇಕಿರುವ ಸಿದ್ಧ ಆಹಾರ ಪೂರೈಕೆಗೆ ಒಂದೇ ಒಂದು ಕೃತಕ ಆಹಾರ ತಯಾರಿಕಾ ಘಟಕಗಳಿಲ್ಲ.

Advertisement

ನೈಸರ್ಗಿಕವಾಗಿ ಮೀನು ಬೆಳೆಯದ ಹಾಗೂ ಕೃಷಿ-ಮೀನುಗಾರಿಕೆಗೆ ಪ್ರತ್ಯೇಕವಾಗಿ ರೂಪಿಸಿದ ಕೆರೆ-ಹೊಂಡಗಳಲ್ಲಿನ ಮೀನಿಗೆ ಪೌಷ್ಟಿಕವಾದ ಕೃತಕ ಹಾಗೂ ಸಿದ್ಧ ಆಹಾರ ಪೂರೈಕೆ ಅತ್ಯಂತ ಅಗತ್ಯ. ಆದರೆ ಮಂಗಳೂರು ಭಾಗದಲ್ಲಿ ಒಂದು ಘಟಕ ಬಿಟ್ಟರೆ ಇಡೀ ಒಳನಾಡು-ಉತ್ತರ ಒಳನಾಡು ಪರಿಸರದಲ್ಲಿ ಕೃತಕ ಆಹಾರ ಉತ್ಪಾದಿಸುವ ಒಂದೂ ಘಟಕವೇ ಇಲ್ಲ.

ಮೂರು ವಿಧದಲ್ಲಿ ಸಾಕಾಣಿಕೆ

ಕೃತಕವಾಗಿ ಕೊಡುವ ಪೌಷ್ಟಿಕ ಆಹಾರದ ಮೇಲೆ ಮೀನು ಸಾಕಾಣಿಕೆಯನ್ನು 3 ವಿಧಗಳಾಗಿ ವಿಂಗಡಿಸಲಾಗಿದೆ. ವ್ಯಾಪಕ ಮೀನು ಸಾಕಾಣೆ ಸಂದರ್ಭದಲ್ಲಿ ನೈಸರ್ಗಿಕ ಆಹಾರ ಸಾಕಾಗುತ್ತದೆ. ಮಧ್ಯಮ ತೀವ್ರತೆಯ ಸಾಕಾಣಿಕೆ ಸಂದರ್ಭದಲ್ಲಿ ನೈಸರ್ಗಿಕ ಹಾಗೂ ಕೃತಕ ಆಹಾರ ನೀಡುವುದು ಅಗತ್ಯ. ತೀವ್ರತರವಾದ ಮೀನು ಸಾಕಣೆ ನೈಸರ್ಗಿಕ ಹಾಗೂ ಕೃತಕ ಆಹಾರ ಮತ್ತು ನೀರಿನ ನಿರ್ವಹಣೆ ಮಾಡುವುದು ಅಗತ್ಯ.

ಕೃತಕ ಆಹಾರ

Advertisement

ಕೇವಲ ನೈಸರ್ಗಿಕ ಆಹಾರದಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇಳುವರಿ ಹಾಗೂ ಬಂಡವಾಳ ಹೂಡಿದ ರೈತರ ಆದಾಹ ಹೆಚ್ಚಳದ ದೃಷ್ಟಿಯಿಂದ ಕೃತಕ ಆಹಾರ ನೀಡುವುದು ಅಗತ್ಯ.

ತೇಲುವ-ಮುಳುಗವ ಆಹಾರ

ಮೀನು ಸಾಕಾಣಿಕೆ ಮಾಡಿದ ರೈತರು ತಮ್ಮ ಹೊಂಡಗಳಲ್ಲಿನ ಮೀನುಗಳ ತ್ವರಿತ ಬೆಳವಣಿಗೆಗೆ ಹಾಗೂ ಉತ್ತಮ ಇಳುವರಿಗೆ ನೈಸರ್ಗಿಕಾಹಾರ ಜೊತೆಗೆ ಕೃತಕ ಆಹಾರದ ಬಳಕೆ ಬಹಳ ಮುಖ್ಯ. ನೀರಿನ ಮೇಲ್ಭಾಗದಲ್ಲಿ ಹಾಗೂ ನೀರಿನ ಆಳದಲ್ಲಿ ಜೀವಿಸುವ ಮೀನಿಗೆ ತಕ್ಕಂತೆ ತೇಲುವ ಹಾಗೂ ಮುಳುಗುವ ಎರಡು ರೀತಿಯಲ್ಲಿ ಕೃತಕ ಆಹಾರ ನೀಡಬೇಕು. ರೂಹು, ಕ್ಯಾಟ್ಲಾ, ಚಿಲಾಪಿಯಾ, ಸುರಗಿ ಹೀಗೆ ನೀರಿನ ಮೇಲ್ಭಾಗದಲ್ಲಿ ಜೀವಿಸುವ ಮೀನುಗಳಿಗೆ ತೇಲುವ ಆಹಾರ ನೀಡಬೇಕು. ನೀರನ ಆಳದಲ್ಲಿ ಜೀಓವಿಸುವ ಸಾಮಾನ್ಯ ಗೆಂಡೆ, ಮೃಗಾಲ, ಹಾವುಮೀನುಗಳಂಥ ಮೀನುಗಳಿಗೆ ಮುಳುಗುವ ಹಸಿಯಾದ ಕೃತಕ ಆಹಾರ ನೀಡಬೇಕು. ಬೇಗ ಕರಗದ ಕೃತಕ ಆಹಾರ ಮೀನು ಸಾಕಾಣಿಕೆದಾರರು ಕೃತಕವಾಗಿ ಕೊಡುವ ಆಹಾರ ತಿಳಿ ಬಣ್ಣ, ಸಮತೋಲನ ಪೋಷ ಕಾಂಶ ಹೊಂದಿರಬೇಕು. ನೀರಿನಲ್ಲಿ 2-4 ಗಂಟೆ ಕರಗದಂತೆ- ಮುಳುಗು ವಂತಿರಬೇಕು. ಮೀನು ಮಾಂಸವಾಗಿ ಪರಿವರ್ತಿಸುವ ಪ್ರಮಾಣ ಉತ್ತಮವಾಗಿರಬೇಕು.

ಸಾಂಧ್ರತೆಗೆ ತಕ್ಕಂತೆ ಆಹಾರ

ಹೊಂಡಗಳಲ್ಲಿ ಮೀನುಮರಿ ಬಿತ್ತನೆ ಮಾಡಿದ ತಕ್ಷಣ ಬಿತ್ತನೆಯ ಸಾಂದ್ರತೆಗೆ ತಕ್ಕಂತೆ ಆಹಾರ ನೀಡಬೇಕುಇ. ಅಗತ್ಯಕ್ಕೆ ತಕ್ಕಂತೆ ನೀಡುವ ಆಹಾರದಲ್ಲಿ ಉತ್ತಮ ಗುಣಮಟ್ಟದ ಮತ್ತು ಸರಿಯಾದ ಪ್ರಮಾಣದ ಆಹಾರ ನೀಡುವುದರಿಂದ ಏಕರೂಪದ ಬೆಳವಣಿಗೆ ಕಾಣಲು ಸಾಧ್ಯವಿದೆ. ಅಲ್ಲದೇ ತ್ವರಿತವಾಗಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಗಾತ್ರದಲ್ಲೂ ಬೆಳವಣಿಗೆ ಸಾಧ್ಯವಾಗಲಿದೆ. ಕೊಳದಲ್ಲಿನ ಪ್ಲಾಂಕ್ಟಾನ್‌ ಗಳ ಸಾಂದ್ರತೆಯು ಬಿತ್ತನೆ ಮಾಡಿದ ಮರಿಗಳ ಸಾಂದ್ರತೆ ಹೊಂದಿಕೊಳ್ಳಬೇಕು. ಇದರಿಂದ ಮೀನುಮರಿಗಳು ವೈವಿದ್ಯ ಆಹಾರವನ್ನು ಇಷ್ಟಪಡುತ್ತವೆ, ನಂತರ ಮೀನು ಮರಿಗಳ ಆಹಾರದ ಬಳಕೆ ಮತ್ತು ತಿನ್ನುವಿಕೆ ಮೇಲೆ ನಿಗಾ ಇರಿಸಿ ಬೇಡಿಕೆಗೆ ತಕ್ಕಂತೆ ಕೃತಕ ಆಹಾರ ಹೆಚ್ಚಿಸಬೇಕಾಗುತ್ತದೆ.

ಉತ್ತರದಲ್ಲಿ ಹೆಚ್ಚು ಬೇಡಿಕೆ

ಉತ್ತರ ಒಳನಾಡು ಮೀನುಗಾರಿಕೆಯಲ್ಲಿ ಮೀನುಗಾರಿಕೆಯಲ್ಲಿ ರೈತರು ಆಸಕ್ತಿ ತೋರುತ್ತಿರುವುದರಿಂದ ಮೀನುಗಳಿಗೆ ಕೃತಕ ಆಹಾರದ ಬೇಡಿಕೆ ಹೆಚ್ಚುತ್ತಿದೆ. ಯಾದಗಿರಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಭಾಗದಲ್ಲಿ ಈಚೆಗೆ ಕೃತಕ ಆಹಾರ ನೀಡುವ ಮೀನುಗಾರಿಕೆ ಹೆಚ್ಚುತ್ತಿದೆ. ವಿಜಯಪುರ ಜಿಲ್ಲೆಯಲ್ಲೂ ಕೃತಕ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಕೃತಕ ಆಹಾರ ಉತ್ಪಾದಿಸುವ ಹಾಗೂ ಪೂರೈಸುವ ಒಂದೂ ಘಟಕ ಈ ಭಾಗದಲ್ಲಿಲ್ಲ.

ನೆರೆ ರಾಜ್ಯಗಳೇ ಗತಿ

ರಾಜ್ಯದಲ್ಲಿ ಮಂಗಳೂರು ಬಳಿ ಹೊರತು ಪಡಿಸಿದರೆ ಒಳನಾಡು ಮೀನುಗಾರಿಕೆಗೆ ಅಗತ್ಯವಾಗಿರುವ ಕೃತಕ ಆಹಾರ ಉತ್ಪಾದಿಸುವ ಒಂದೂ ಘಟಕ ಇಲ್ಲಿಲ್ಲ. ಪರಿಣಾಮ ಮಹಾರಾಷ್ಟ್ರದ ನಾಗಪುರ, ಮಿರಜ್‌, ಪುಣೆ ಬಳಿ ಇಂದುಪುರ, ಆಂಧ್ರಪ್ರದೇಶದ ವಿಜಯವಾಡ ಹೀಗೆ ವಿವಿಧ ಕಡೆಗಳಲ್ಲಿರುವ ಅನ್ಯ ರಾಜ್ಯಗಳಿಂದ ರಾಜ್ಯಗಳ ಕಂಪನಿಗಳು ಕೃತಕ ಆಹಾರ ಪೂರೈಕೆ ಮಾಡುತ್ತವೆ.

ಹೆಚ್ಚು ಹೊರೆ

ಅನ್ಯ ರಾಜ್ಯಗಳ ದೂರ ಪ್ರದೇಶಗಳಿಂದ ಕೃತಕ ಆಹಾರ ತರಿಸಿವುದು ಇಂಧನ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆಯಂಥ ಈಗಿನ ಸಂದರ್ಭದಲ್ಲಿ ಹೆಚ್ಚು ಹೊರೆಯಾಗುತ್ತದೆ. ಸಣ್ಣ-ಪುಟ್ಟ ಸ್ಥಳೀಯ ಪೂರೈಕೆದಾರರು ಪೂರೈಸಿದರೂ ತಮ್ಮ ಲಾಭಾಂಶವನ್ನು ಗಣಗೆ ತೆಗೆದುಕೊಂಡೇ ಮೂಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಇದು ರೈತರಿಗೆ ಹೊರಯಾಗುತ್ತದೆ. ಇದು ಪ್ರಸ್ತುತ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುತ್ತಿರುವ ಕೃತಕ ಆಹಾರ 10 ಸಾವಿರ ಮೀನುಗಳಿಗೆ ಕನಿಷ್ಟ 1.50 ಲಕ್ಷ ರೂ. ವೆಚ್ಚವಾಗಲಿದೆ.

ತಪ್ಪು ಸಂದೇಶ

ಇದರಿಂದಾಗಿ ಆರ್ಥಿಕವಾಗಿ ಲಾಭದಾಯಕ ಎನಿಸಿದ, ಮೀನುಗಾರಿಕೆ ಮಾಡಿಯೂ ಕೃತಕ ಆಹಾರ ಪೂರೈಕೆ ಮಾಡುವಲ್ಲಿ ಸೂಕ್ತ ಸೌಲಭ್ಯಗಳಿಲ್ಲದೇ ಹಲವು ರೈತರು ಮೀನುಗಾರಿಕೆಯಿಂದ ವಿಮುಖವಾಗಿದ್ದಾರೆ. ಇಂಥ ಪ್ರಕರಣಗಳು ಸಾರ್ವತ್ರಿಕವಾಗಿ ಮೀನುಗಾರಿಕೆ ಲಾಭದಾಯಕವಲ್ಲ ಎಂಬ ತಪ್ಪು ಸಂದೇಶ ರವಾನಿಸುವ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ಪ್ರಮಾಣಕ್ಕಿಲ್ಲ ಪ್ರೋತ್ಸಾಹ: ಕಳೆದ ವರ್ಷ ಜಾರಿಗೆ ಬಂದಿರುವ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಲ್ಲಿ ಕೃತಕ ಆಹಾರ ಘಟಕ ಸ್ಥಾಪನೆಗೆ ಅವಕಾಶವಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಘಟಕ ಸ್ಥಾಪಿಸುವ ಉದ್ಯಮಿಗಳಿಗೆ ಮಾತ್ರ ಇದು ಪೂರಕವಾಗಿದೆ. ಇದರಿಂದ ಸಣ್ಣ ಪ್ರಮಾಣದಲ್ಲಿ ಸ್ಥಳೀಯವಾಗಿ ಗುಡಿ ಕೈಗಾರಿಕೆ ಮಾದರಿಯಲ್ಲಿ ಕೃತಕ ಆಹಾರ ಘಟಕ ಸ್ಥಾಪಿಸುವ ಉದ್ಯಮಿಗಳಿಗೆ ಇದರಿಂದ ಅವಕಾಶ ಇಲ್ಲವಾಗಿದೆ.

ಕೋಟಿ ಕೋಟಿ ಬಂಡವಾಳ

ಕೇಂದ್ರ-ರಾಜ್ಯ ಸರ್ಕಾರಗಳ ಸಹಾಯ ಧನದಲ್ಲಿ ಫಲಾನುಭವಿಗಳ ಪಾಲು ಸೇರಿದಂತೆ ನಿತ್ಯ 2 ಟನ್‌ ಕೃತಕ ಆಹಾರ ಉತ್ಪಾದಿಸುವ ಘಟಕಕ್ಕೆ 30 ಲಕ್ಷ ರೂ. ಬಂಡವಾಳ ಬೇಕು. 8 ಟನ್‌ ಸಾಮರ್ಥ್ಯದ ಘಟಕಕ್ಕೆ 1 ಕೋಟಿ ರೂ, 20 ಟನ್‌ ಸಾಮರ್ಥ್ಯದ ಘಟಕಕ್ಕೆ 2 ಕೋಟಿ ರೂ., 100 ಟನ್‌ ಉತ್ಪಾದಿಸುವ ಸಾಮರ್ಥ್ಯದ ಘಟಕ ಸ್ಥಾಪನೆಗೆ 6 ಕೋಟಿ ರೂ. ಬಂಡವಾಳ ಹೂಡಬೇಕು. ಪರಿಶಿಷ್ಟ ಸಮುದಾಯ ಹಾಗೂ ಮಹಿಳೆಯರಿಗೆ ಶೇ.60 ಹಾಗೂ ಸಾಮಾನ್ಯ ವರ್ಗಕ್ಕೆ ಶೇ. 40ರಷ್ಟು ರಿಯಾಯ್ತಿ ಇದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಲು ಇಲ್ಲಿನ ಉದ್ಯಮಿಗಳು ಆಸಕ್ತಿ ತೋರಿಲ್ಲ.

ಲಕ್ಷಾಂತರ ನಷ್ಟಕ್ಕೀಡಾದ ರೈತ

ಮೀನುಗಾರಿಕೆ ಮಾಡುವ ಹುಮ್ಮಸ್ಸಿನಲ್ಲಿ ಮೀನು ಸಾಕಾಣಿಕೆ ಕೃಷಿಗೆ ಇಳಿದಿದ್ದ ಜಿಲ್ಲೆಯ ಯುವ ರೈತರೊಬ್ಬರು ಸೂಕ್ತ ಮಾಹಿತಿ ಹಾಗೂ ಕೃತಕ ಆಹಾರ ಸಿಗದೆ ಕೈಸುಟ್ಟುಕೊಳ್ಳುವಂತಾಯಿತು. ಪರಿಣಾಮ ಅನ್ಯದ ಲೀಸ್‌ ಜಮೀನಿನಲ್ಲಿ ಮಾಡಿದ್ದ ಅಭಿಲಾಷ ಹಳಕಟ್ಟಿ ಎಂಬ ಯುವ ರೈತ ಮೀನು ಯೋಜನೆ 1.70 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ.

ಒಂದು ಚೀಲಕ್ಕಾಗಿ ಮುಂಬೈಗೆ ಹೋಗಿದ್ದರು

ಮೀನುಮರಿ ಸಾಕಿದ ಮೇಲೆ ರಾಜ್ಯದಲ್ಲಿ ಕೃತಕ ಆಹಾರ ಸಿಗದೆ, ಸೂಕ್ತ ಮಾಹಿತಿ ಇಲ್ಲದೇ ಅಭಿಲಾಷ ಪರದಾಡಿದರು. ಅಂತಿಮವಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಡಿ ಮೀನಿಕ ಒಂದು ಚೀಲ ಕೃತಕ ಆಹಾರ ತರುವುದಕ್ಕಾಗಿ ಮುಂಬೈಗೆ ಹೋಗಿದ್ದರು. ಇದೀಗ ತಾವು ಹೊಂದಿರುವ ಅನುಭವದಲ್ಲಿ ಅವರೇ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಕೃತಕ ಆಹಾರ ಪೂರೈಕೆ ಮಾಡುತ್ತಿದ್ದಾರೆ.

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next