Advertisement
ಫೇಸ್‌ಬುಕ್ ಅಂದರೆ ಮೊದಲಿನಿಂದಲೂ ನನಗೆ ಅಷ್ಟಕ್ಕಷ್ಟೆ. ಮನುಷ್ಯನನ್ನು ಸೋಮಾರಿಯಾಗಿಸಿದ್ದು, ಪ್ರತಿಯೊಬ್ಬರನ್ನೂ ವಿದೂಷಕರಂತೆ ಬದಲಿಸಿದ್ದು, ಬಾಂಧವ್ಯಗಳನ್ನು ಒಡೆದುಹಾಕಿದ್ದು, ಸಂಬಂಧಗಳು ಹಳಸಿಕೊಂಡಿದ್ದು, ಗೆಳೆತನಗಳು ಮುರಿದುಬಿದ್ದದ್ದು, ಸಂಘರ್ಷ ಹೆಚ್ಚಾಗಿದ್ದು, ವಂಚಕರಿಗೂ ವೇದಿಕೆ ಸಿಕ್ಕಿದ್ದು- ಇದೆಲ್ಲವೂ ಫೇಸ್‌ಬುಕ್‌ನ ಕೊಡುಗೆ ಎಂಬುದಕ್ಕೆ, ದಿನಕ್ಕೆ ಹತ್ತು ಉದಾಹರಣೆಗಳನ್ನು ತೋರಿಸಬಲ್ಲೆ. ಫೇಸ್‌ಬುಕ್‌ನಿಂದ ನಮಗೆ ಊಟ ಸಿಗಲ್ಲ, ಬಟ್ಟೆ ಸಿಗಲ್ಲ, ಕೆಲಸ ಸಿಗಲ್ಲ, ನೆಮ್ಮದಿಯೂ ಸಿಗಲ್ಲ. ಹೀಗಿರುವಾಗ, ಅದರ ಜಪ ಮಾಡುವ ಅಗತ್ಯವಾದ್ರೂ ಏನು ಅನ್ನುವುದು ನನ್ನ ವಾದ, ಪ್ರಶ್ನೆ.
ಫೇಸ್‌ಬುಕ್ಕೆ ಗುಡ್‌ಬೈ ಹೇಳಿಬಿಡಬೇಕು ಎಂಬ ನಿರ್ಧಾರದಿಂದ ಕಡೆಯದಾಗಿ ಎಂಬಂತೆ ಫೇಸ್‌ಬುಕ್ ನೋಡುತ್ತಿದ್ದಾಗಲೇ- “ಊರಿಗೆ ಹೊರಟಿದ್ದೇನೆ’ ಎಂಬ ಪೋಸ್ಟ್‌ಗೆ ಹಾಕಿದ್ದ ಕಮೆಂಟ್ ಒಂದು ಗಮನ ಸೆಳೆಯಿತು. ಅಲ್ಲಿ, ಮಹೇಶ್ ಎಂಬಾತ ಬರೆದಿದ್ದರು: DOM ಇವನ್ಯಾರೋ ಬೇಜವಾಬ್ದಾರಿ ಮನುಷ್ಯ. ಹೇಳುವುದನ್ನು ಬಿಡಿಸಿ ಹೇಳಬಾರದೆ? ಈ DOM ಅಂದರೆ ಏನರ್ಥ? ಅದನ್ನು ಡೋಮ್ ಅಂತ ಓದಬೇಕೋ ಅಥವಾ ಡಾಮ್ ಅನ್ನಬೇಕೋ? ಅರ್ಥವಿಲ್ಲದಂಥ ಕಮೆಂಟ್‌ಗಳನ್ನ ಹಾಕುವುದಾದರೂ ಏಕೆ?- ಹೀಗೆಲ್ಲ ಯೋಚಿಸುತ್ತಲೇ ಕುತೂಹಲದಿಂದ ಮಹೇಶ್ ಅವರ ವಾಲ್‌ಗೆ ಹೋಗಿ ನೋಡಿ ಬೆಚ್ಚಿಬಿದ್ದೆ. ಕಾರಣ -“ಮನೆ ಕಟ್ಟಿಸುತ್ತಿದ್ದೇವೆ’, “ಕಾರ್ ತಗೊಂಡೆವು’, “ಕೆಲಸ ಸಿಕ್ಕಿದೆ’, “ಬ್ಯುಸಿನೆಸ್ ಆರಂಭಿಸಿದ್ವಿ’, “ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಯ್ತು’, “ಮಗನ ಬರ್ತ್‌ಡೇ’, “ಮಗಳಿಗೆ ಮೆಡಿಕಲ್ ಸೀಟು ಸಿಕ್ಕಿದೆ..’ ಇಂಥ
ಪೋಸ್ಟ್‌ಗಳಿಗೆಲ್ಲ ಈ ಮಹರಾಯ,DOM ಎಂದೇ ಕಮೆಂಟ್ ಹಾಕಿದ್ದ!
Related Articles
Advertisement
ಆ ಗೆಳೆಯರು ತಕ್ಷಣವೇ ಹೇಳಿದರು: ಸರ್, ನಿಮ್ಮ ಲೆಕ್ಕಾಚಾರದಲ್ಲಿ ತಪ್ಪಿದೆ. ಮಹೇಶ್ ತುಂಬಾ ಒಳ್ಳೆ ಹುಡುಗ. ಈಗವನು ಕಂಪ್ಯೂಟರ್ ಬಿಜಿನೆಸ್ ಮಾಡ್ತಿದಾನೆ. ಬಹಳ ಕಷ್ಟದಿಂದ ಮೇಲೆ ಬಂದಿದಾನೆ. ಒಂದೊಂದು ತುತ್ತಿಗೂ ಪರದಾಡಿದಾನೆ. ಹಳೆಯ ದಿನಗಳನ್ನು ಅವನು ಈಗಲೂ ಮರೆತಿಲ್ಲ. ಬಡವರು, ಭಿಕ್ಷುಕರು, ನಿರ್ಗತಿಕರು ಅಂದ್ರೆ ಕಣ್ಣೀರಾಗ್ತಾನೆ. ಯಾರಿಗಾದ್ರೂ ಹೆಲ್ಪ್ ಮಾಡಬೇಕು ಅಂತ ಹಾತೊರೆಯುತ್ತಾ ಇರ್ತಾನೆ. ತನ್ನ ಸಂಪಾದನೇಲಿ ಸ್ವಲ್ಪ ತೆಗೆದಿಟ್ಟು, ಅದನ್ನು ಅನಾಥಾಶ್ರಮಕ್ಕೆ ತಲುಪಿಸಿ ಬರ್ತಾನೆ. ಅಂದಹಾಗೆ ಈOM ಎಂಬ ಕಮೆಂಟಿನ ಅರ್ಥವೇನು ಗೊತ್ತಾ? “(D)ದೇವರು (O)ಒಳ್ಳೆಯದು (M)ಮಾಡಲಿ!’
ಒಬ್ಬ ಹುಡುಗ, ಎಲ್ಲರಿಗೂ ಒಳಿತನ್ನು ಬಯಸುವುದು ಮಾತ್ರವಲ್ಲದೆ, ಪರೋಪಕಾರಕ್ಕೆ ತುದಿಗಾಲಲ್ಲಿ ನಿಂತಿರುತ್ತಾನೆ ಎಂಬುದನ್ನು ಕೇಳಿಯೇ, ಅದುವರೆಗೂ ನೋಡಿರದ ಆ ವ್ಯಕ್ತಿಯ ಬಗ್ಗೆ ಪ್ರೀತಿ ಮತ್ತು ಗೌರವ ಹುಟ್ಟಿಕೊಳು¤. ನಂತರದ ಕೆಲವೇ ದಿನಗಳಲ್ಲಿ ಮುಖಾಮುಖೀ ಆಗಿಯೇಬಿಟ್ಟರು ಮಹೇಶ್. ಐದಾರು ಭೇಟಿಗಳ ನಂತರ, ಅದೊಂದು ದಿನ, ಸಂಕೋಚದಿಂದಲೇ ತಮ್ಮ ಬದುಕಿನ ಕಥೆ ಹೇಳಿಕೊಂಡರು.***
“ಮಂಡ್ಯದ ಹತ್ರ ಒಂದು ಹಳ್ಳಿಯವರು ನಾವು. ನಾವಿದ್ದುದು ಬರದ ನಾಡು. ಕುಡಿಯುವ ನೀರಿಗೇ ಕಷ್ಟವಿತ್ತು. ಅಲ್ಲಿ ಬದುಕುವುದು ಕಷ್ಟ ಅನಿಸಿದಾಗ ನನ್ನ ಹೆತ್ತವರು ಬೆಂಗಳೂರಿಗೆ ವಲಸೆ ಬಂದ್ರು. ಹೊಟ್ಟೆಪಾಡಿಗೆ ಒಂದು ಕೆಲಸ ಅಂತ ಬೇಕಲ್ವ? ನಮ್ಮಪ್ಪ, ರಸ್ತೆಗೆ ಟಾರ್ ಹಾಕುವ ಕೆಲಸಕ್ಕೆ ಸೇರಿಕೊಂಡರು. ಈ ದುಡಿಮೆಯಿಂದ ಬೆಂಗಳೂರಲ್ಲಿ ಬದುಕೋದು ಕಷ್ಟ ಅನ್ನಿಸಿದಾಗ ನಮ್ಮಮ್ಮ ಹೌಸ್‌ಕೀಪಿಂಗ್ ಕೆಲಸಕ್ಕೆ ಸೇರಿದ್ರು. ಹೀಗಿದ್ದಾಗಲೇ ಅದೊಂದು ದಿನ, ಟಾರ್ ಹಾಕುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ ನನ್ನ ತಂದೆಯನ್ನು ಹಿರಿಯರೊಬ್ಬರು ನೋಡಿದ್ದಾರೆ. ಕರೆದು ಮಾತಾಡಿಸಿದ್ದಾರೆ. ಯಾವೂರು? ಎಲ್ಲಿದೀರ? ಏನ್ಕತೆ ಎಂದೆಲ್ಲಾ ವಿಚಾರಿಸಿದ್ದಾರೆ. ನಂತರ- ನಾನು ರಾಮಸ್ವಾಮಿ. ಸೈಂಟಿಸ್ಟ್ ಆಗಿದೀನಿ. ನಮ್ಗೆ ಒಬ್ರು ವಾಚ್‌ಮನ್ ಬೇಕು. ನಿಮ್ಗೆ ಒಪ್ಪಿಗೆ ಅನಿಸಿದ್ರೆ ಬಂದುಬಿಡಿ. ಔಟ್‌ಹೌಸ್‌ನಲ್ಲಿ ಉಳಿಯಲು ಜಾಗ ಕೊಡ್ತೀನಿ ಅಂದಿದ್ದಾರೆ. ಮರುದಿನದಿಂದಲೇ ಅಪ್ಪ, ವಾಚ್‌ಮನ್ ಕಂ ಮಾಲಿಯಾಗಿ ಕೆಲಸಕ್ಕೆ ಸೇರಿಕೊಂಡ್ರು. ಅಪ್ಪನಿಗೆ, ಅತೀ ಅನ್ನುವಷ್ಟು ಮುಗ್ಧತೆಯಿತ್ತು. ಜೊತೆಗಿದ್ದವರನ್ನು ಬಹುಬೇಗನೆ ನಂಬಿಬಿಡುವ ಕೆಟ್ಟ ಗುಣವಿತ್ತು. ಈ ಕಾರಣದಿಂದಲೇ, ವಾಚ್‌ಮನ್ ಆಗಿದ್ದಾಗಲೇ ಯಾವುದೋ ಬಿಜಿನೆಸ್ ಮಾಡಲು ಹೋಗಿ ಕೈ ಸುಟ್ಟುಕೊಂಡರು. ಸಾಲಗಾರರಾದರು. ತಿಂಗಳು ತಿಂಗಳು ಸಾವಿರಗಟ್ಟಲೆ ಬಡ್ಡಿ ಕಟ್ಟಲೇಬೇಕಾದ ಅನಿವಾರ್ಯತೆಗೆ ಸಿಕ್ಕಿಹಾಕಿಕೊಂಡರು. ನಮ್ಮ ಮಂಡ್ಯದ ಕಡೇಲಿ ಒಂದು ನಂಬಿಕೆಯಿದೆ. ಏನೆಂದರೆ- ಅಪ್ಪನ ಸಾಲಕ್ಕೆ ಮೊದಲ ಮಗ ಹಕ್ಕುದಾರ! ಅವತ್ತಿನ ಸಂದರ್ಭದಲ್ಲಿ ಮರುಮಾತಿಲ್ಲದೆ ನಾವು ಸಾಲ ತೀರಿಸಬೇಕಿತ್ತು. ಬೇರೆ ದಾರಿ ಇಲ್ಲದೇ, ಒಬ್ಬರು ಶ್ರೀಮಂತರ ಮನೇಲಿ, ಮೂರು ವರ್ಷದ ಮಟ್ಟಿಗೆ ಕೆಲಸಗಾರನಾಗಿ ಸೇರಿಕೊಂಡೆ. ಮೂರು ವರ್ಷ ದುಡಿದ್ರೆ ಮೂರು ಲಕ್ಷ ಸಂಬಳ ಅಂತ ಮಾತಾಗಿತ್ತು. ಅಂತೂ ಅಪ್ಪನಿಗೆ, ಸಾಲಗಾರರ ಕಾಟ ತಪ್ಪಿತು. ನನ್ನನ್ನು ಕೆಲಸಕ್ಕೆ ತಗೊಂಡ್ರಲ್ಲ; ಅವರು ತುಂಬಾ ಒಳ್ಳೆ ಜನ. “ಮನೆ ಕೆಲ್ಸಾನೂ ಮಾಡಿಕೊಂಡು ಸ್ಕೂಲ್‌ಗೂ ಹೋಗು’ ಅಂದರು. ಪರಿಣಾಮ, ಕಲಿಕೆ ಮತ್ತು ಗಳಿಕೆ ಒಟ್ಟಿಗೇ ಆಯ್ತು. ಈ ಮಧ್ಯೆ ಇನ್ನಿಬ್ಬರು ತಮ್ಮಂದಿರು ಹುಟ್ಟಿದ್ರು. ಖರ್ಚು ಜಾಸ್ತಿಯಾಗಿತ್ತು. ಬೇಗ ಓದು ಮುಗಿಸಿ, ಬೇಗ ಕೆಲಸಕ್ಕೆ ಸೇರಬೇಕು ಎಂಬ ಲೆಕ್ಕಾಚಾರದಲ್ಲಿ ಡಿಪ್ಲೊಮಾಗೆ ಸೇರಿಕೊಂಡೆ. ಹೇಳಿಕೇಳಿ ಹಳ್ಳಿಯಿಂದ ಬಂದಿದ್ದವನಲ್ವೇ? ಆ ಇಂಗ್ಲಿಷು, ಸೈನ್ಸು, ಮ್ಯಾತ್ಸು ಅಷ್ಟು ಸುಲಭಕ್ಕೆ ಅರ್ಥವಾಗಲಿಲ್ಲ. ಜಸ್ಟ್ ಪಾಸ್ ಆಗುವ ಮಟ್ಟಕ್ಕಷ್ಟೇ ನನ್ನ ತಿಳಿವಳಿಕೆ ಇತ್ತು. ನಮಗೆ ಆಶ್ರಯ ನೀಡಿದ್ರಲ್ಲ ಸೈಂಟಿಸ್ಟ್: ಅವರು ಇದನ್ನೆಲ್ಲ ಗಮನಿಸಿದ್ರು. ಹೀಗೇ ಬಿಟ್ರೆ ನೀವು ಬಡವರಾಗಿಯೇ ಉಳಿದುಹೋಗ್ತಿರಿ. ಹಾಗಾಗಬಾರ್ಧು ಅಂದವರೇ, ಪ್ರತಿದಿನ ರಾತ್ರಿ 10ರಿಂದ 12 ಗಂಟೆಯವರೆಗೆ ನನಗೆ ಪಾಠ ಹೇಳಿಕೊಟ್ರಾ. ಪರಿಣಾಮ, ಡಿಪ್ಲೊಮಾದಲ್ಲಿ ಒಳ್ಳೆಯ ಮಾರ್ಕ್ಸ್ ಬಂತು. ಆದ್ರೆ, ಓದು ಮುಗಿದ ತಕ್ಷಣ ಕೆಲ್ಸ ಸಿಗಲಿಲ್ಲ. ನೀವು ಏನೇ ಹೇಳಿ ಸಾರ್, ಹಸಿವು ಎದುರಿಗಿದ್ದಾಗ, ಮನುಷ್ಯ ಶರಣಾಗಿ ಬಿಡ್ತಾನೆ. ಹಸಿವಿನಿಂದ ಪಾರಾಗ್ತಿàನಿ ಅನ್ನೋದು ಗ್ಯಾರಂಟಿಯಾದ್ರೆ ಯಾವ ಕೆಲಸ ಬೇಕಾದ್ರೂ ಮಾಡಿಬಿಡ್ತಾನೆ. ನನ್ನ ಕಥೆಯೂ ಹಾಗೇ ಆಗೋಯ್ತು. ಬದುಕಲಿಕ್ಕಾಗಿ, ಮನೆಯ ಖರ್ಚು ಸರಿದೂಗಿಸಲಿಕ್ಕಾಗಿ-ನೈಟ್‌ವಾಚ್ ಮನ್ ಕೆಲಸ, ಗಾರ್ಡನಿಂಗ್ ಕೆಲಸ, ಶ್ರೀಮಂತರ ಮನೆಯ ನಾಯೀನ ವಾಕಿಂಗ್ ಕರ್ಕೊಂಡು ಹೋಗುವ ಕೆಲಸ, ಯಾರಾದ್ರೂ ಟೂರ್ ಹೋದಾಗ ಅವರ ಮನೆ ನೋಡಿಕೊಳ್ಳುವ ಕೆಲಸ, ತೆಂಗಿನಕಾಯಿ ಸುಲಿಯುವ ಕೆಲಸ (ಒಂದು ಕಾಯಿ ಸುಲಿದ್ರೆ 25 ಪೈಸೆ ಸಿಕ್ತಿತ್ತು!), ಕಾರ್ ಡ್ರೈವಿಂಗ್, ಎಲೆಕ್ಟ್ರಿಷಿಯನ್-ಹೀಗೆ ಎಲ್ಲ ಥರದ ಕೆಲಸಗಳನ್ನು ಮಾಡಿಬಿಟ್ಟೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ನಾನು ಮಾಡದೇ ಬಿಟ್ಟ ಕೆಲಸವೇ ಇಲ್ಲ ಅಂದೊಳ್ಳಿ. ಪ್ರತಿಯೊಂದು ಕೆಲಸವೂ ನನಗೆ ಹಣ, ನೆಮ್ಮದಿ, ತಿಳಿವಳಿಕೆಯನ್ನು ಕೊಟ್ಟಿದೆ. ಇವತ್ತು ಕಂಪ್ಯೂಟರ್ ಸೇಲ್ಸ್ ಅಂಡ್ ಸರ್ವಿಸ್ ಕೆಲಸದಲ್ಲಿ ಯಶಸ್ಸು ಕಂಡಿದ್ದೀನಿ ಅಂದರೆ- ಅದರ ಹಿಂದೆ ಪೂರ್ತಿ 20 ವರ್ಷ ಕಲಿತ ಪಾಠಗಳಿವೆ. ಈಗಲೂ ಅಷ್ಟೆ; ನಿರ್ಗತಿಕರನ್ನು, ಕೂಲಿಯವರನ್ನು, ಭಿಕ್ಷುಕರನ್ನು, ಬಡವರನ್ನು ಕಂಡಾಗ, ನನಗೆ ಹಳೆಯ ದಿನಗಳು ನೆನಪಾಗಿಬಿಡ್ತವೆ. ಅವರಿಗೆಲ್ಲಾ ಒಳಿತಾಗಬೇಕು ಎಂಬ ಭಾವವೊಂದು ಬಿಟ್ಟೂ ಬಿಡದೆ ಕಾಡುತ್ತೆ ಸಾರ್. ಆಗೆಲ್ಲಾ ನನ್ನಷ್ಟಕ್ಕೆ ನಾನು ಉದ್ಗರಿಸ್ತೀನಿ: DOM
ಯಾವ ಸಂದರ್ಭದಲ್ಲೂ ಉದ್ವೇಗಕ್ಕೆ ಒಳಗಾಗದೆ, ಅವತ್ತು ಹೀಗಿತ್ತು, ಇವತ್ತು ಹೀಗಾಗಿದೆ-ಎಂಬ ನಿರ್ಲಿಪ್ತ ಭಾವದಲ್ಲಿ ಕಥೆ ಹೇಳಿ ಮುಗಿಸಿದ್ದರು ಮಹೇಶ್. ಆ ನಂತರದಲ್ಲಿ ಪೂರ್ತಿ ಆರು ತಿಂಗಳು ಅವರು ಸಿಗಲೇ ಇಲ್ಲ. ಏಳನೇ ತಿಂಗಳು, ಗೃಹಪ್ರವೇಶ ಆಹ್ವಾನ ಪತ್ರಿಕೆಯನ್ನು ಹಿಡಿದುಕೊಂಡೇ ಬಂದಿದ್ದರು.
***
ಅದು ಮೂರಂತಸ್ತಿನ ಮನೆ. ಮನೆಯ ಎದುರು ನಿಂತು, ಅದೇ ನಿರ್ಲಿಪ್ತ ಭಾವದಲ್ಲಿ ಮಹೇಶ್ ಹೇಳಿದರು: ನಮ್ಮ ಅಮ್ಮನಿಗೆ ಮೂವರು ಮಕ್ಕಳೂ ಒಂದೇ ಮನೇಲಿ ಇರಬೇಕು ಅಂತ ಆಸೆಯಿತ್ತು. ಅಪ್ಪನಿಗೆ, ಮೂರು ಜನರೂ ಸಪರೇಟ್ ಆಗಿ ಬಾಳ್ವೆ ಮಾಡಲಿ ಎಂಬ ಹಂಬಲವಿತ್ತು. ಇಬ್ಬರ ಆಸೆಯನ್ನೂ ಈಡೇರಿಸಬೇಕು ಅಂದೊRಂಡೇ ಈ ಮನೆ ಕಟ್ಟಿಸಿದ್ವಿ. ಮೂರು ಜನ ಮಕ್ಕಳು, ಮೂರಂತಸ್ತಿನ ಮನೆ! ಈ ಕಡೆ ಒಟ್ಟಿಗೇ ಇದ್ದಂತೆಯೂ ಆಯ್ತು, ಆ ಕಡೆ, ಪ್ರತ್ಯೇಕವಾಗಿ ಬಾಳಿದಂತೆಯೂ ಆಯ್ತು, ಇನ್ನೊಂದು ವಿಶೇಷ ಗೊತ್ತಾ ಸಾರ್? ಪ್ರತಿಯೊಂದು ಮನೇಲೂ ಅಪ್ಪ ಅಮ್ಮನಿಗೆ ಅಂತಾನೇ ಒಂದು ಸಪರೇಟ್ ರೂಂ ಇದೆ. ಅದು ನಮ್ಮ ತಾಯ್ತಂದೆಗೆ ಮಾತ್ರ ಮೀಸಲು. ಅವರು, ಅವರಿಗಿಷ್ಟ ಬಂದ ಮಕ್ಕಳ ಜೊತೆ ಇರಬಹುದು. ಕಣ್ಣೀರಲ್ಲಿ ಕೈತೊಳೆಯುವಂಥ ಕಷ್ಟಗಳು ಜೊತೆಗಿದ್ದಾಗಲೇ ನಾವು ಒಟ್ಟಗಿದ್ವಿ. ಈಗ, ಒಂದರ್ಥದಲ್ಲಿ ನೆಮ್ಮದಿಯ ದಿನಗಳು. ಈಗಲೂ ಜೊತೆಗೇ ಇದ್ದು ಬಿಡೋಣ ಅಂತ ತಮ್ಮಂದಿರಿಗೆ ಹೇಳಿದೀನಿ. ಅವೂ ಖುಷಿಯಿಂದಲೇ ಒಪ್ಪಿದ್ದಾರೆ. ಅಂದಹಾಗೆ ಸಾರ್, ಹೊಸ ಮನೆ ಕಟ್ಟಿಸಿದಾಗ ಎಷ್ಟೋ ಜನ – ರೂಂ ಚಿಕ್ಕದಾಯ್ತು, ಬೆಡ್ ರೂಮಲ್ಲಿ ಜಾಗ ಕಡಿಮೆ ಆಯ್ತು ಅಂತಿರ್ತಾರೆ! ಅಂಥಾ ಮಾತು ಕೇಳಿದಾಗೆಲ್ಲಾ ನನಗೆ ಹಳೆಯ ದಿನಗಳು ನೆನಪಾಗ್ತವೆ. ನಮ್ಮಪ್ಪ ವಾಚ್‌ಮನ್ ಕೆಲ್ಸ ಮಾಡ್ತಿದ್ದಾಗ, ಮನೇಲಿ ಜಾಗ ಸಾಲದೆ ನಾವೆಲ್ಲಾ ಕಾರ್‌ಶೆಡ್‌ನಲ್ಲಿ ಮಲಗ್ತಾ ಇದ್ವಿ! ಕಾರ್ ನಿಲ್ಲಿಸಿದ ಮೇಲೆ ಉಳಿಯುತ್ತಲ್ಲ; ಆ ಜಾಗದಲ್ಲಿ ನಾವು ಮಲಗ್ತಾ ಇದ್ವಿ. ಎಷ್ಟೋ ಬಾರಿ, ಆ ಸಣ್ಣ ಜಾಗಕ್ಕಾಗಿ, ನಾವು ಅಣ್ಣತಮ್ಮಂದಿರ ಮಧ್ಯೆ ಸಣ್ಣ ಮಟ್ಟದ ಜಗಳವೂ ಆಗ್ತಿತ್ತು. ಈಗ, ಮನೆ ಕಟ್ಟಿಸಿದ ಜನ, ಹಾಲ್ ಚಿಕ್ಕದಾಯ್ತು, ಬೆಡ್‌ರೂಂ ಇನ್ನೂ ದೊಡ್ಡದಿರಬೇಕಿತ್ತು ಅಂದಾಗೆಲ್ಲಾ ನನ್ನ ಬಾಲ್ಯ ನೆನಪಾಗುತ್ತೆ. ಯಾವುದು ಚಿಕ್ಕದು, ಯಾವುದು ದೊಡ್ಡದು ಸಾರ್? ಮಲಗಲು ಬೇಕಿರುವುದು ಮೂರಡಿ-ಆರಡಿ ಜಾಗ ಅಲ್ಲವಾ?’ ಇಷ್ಟು ಹೇಳಿ ಅರೆಕ್ಷಣ ಮೌನವಾದರು ಮಹೇಶ್. ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ. ಆಗಲೇ ಆತ ಹೀಗೆಂದರು: ಸಾರ್, ನಮ್ಮಲ್ಲಿ ಮಕ್ಕಳಿಲ್ಲದವರು ಅನಾಥ ಮಕ್ಕಳನ್ನು ದತ್ತು ತಗೊಂಡು ಸಾಕ್ತಾರೆ. ಆ ಮೂಲಕ ಅವರಿಗೆ ಬಾಳು ಕೊಡ್ತಾರೆ. ಅದೇ ಥರ ಅಪ್ಪ ಅಮ್ಮನನ್ನು ಕಳೆದುಕೊಂಡವರು, ಅನಾಥ ವೃದ್ಧರನ್ನು ಯಾಕೆ ಮನೆಗೆ ತಂದು ಸಾಕುವುದಿಲ್ಲ? “ಅನಾಥ ವೃದ್ಧರನ್ನು ದತ್ತು ತಗೊಂಡು ಸಾಕಬಹುದಲ್ವ?’- ಎಂಬ ಯೋಚನೆಯೇ ಶ್ರೇಷ್ಠಮಟ್ಟದ್ದು ಅನ್ನಿಸಿಬಿಟ್ಟಿತು. ಬಡತನ, ಸಂಕಟ, ಅಸಹಾಯಕತೆ, ಒಂಟಿತನ…ಇದನ್ನೆಲ್ಲ ನಿರಂತರವಾಗಿ ಅನುಭವಿಸಿದ ವ್ಯಕ್ತಿಗಷ್ಟೇ ಇಂಥದೊಂದು “ಫೀಲ್’ ಬರಲು ಸಾಧ್ಯ ಅನ್ನಿಸಿತು. “ಬೆಂದವರು ಬಾಳುತ್ತಾರೆ’ ಎಂಬ ಮಾತಿಗೆ, ಈ ಮನುಷ್ಯನೇ ಉದಾಹರಣೆ ಅನ್ನಿಸಿತು. ಅವರ ಬಳಿ ಹೋಗಿ, ಸಂಭ್ರಮದಿಂದಲೇ ಹೇಳಿದೆ: DOM ಎ.ಆರ್. ಮಣಿಕಾಂತ್