Advertisement

ಸಾವಿರಾರು ಕಲಾವಿದರ ರೂಪಿಸಿದ ಕುದ್ಕಾಡಿ ಇನ್ನು ನೆನಪಷ್ಟೇ

04:30 AM Dec 18, 2018 | Karthik A |

ಪುತ್ತೂರು: ಕಲೆ ಬೆಳೆಯುವುದು ಕಲಾವಿದರಿಂದ. ಅಂತಹ ಸಾವಿರಾರು ಕಲಾವಿದರನ್ನು ರೂಪಿಸಿ, ಕಲಾ ಮಾತೆಗೆ ಅರ್ಪಿಸಿದ ಕುದ್ಕಾಡಿ ವಿಶ್ವನಾಥ ರೈ ಅವರು ತಮ್ಮ ಕಲಾ ಸೇವೆಯನ್ನು ನಿಲ್ಲಿಸಿದ್ದಾರೆ. ಇನ್ನೇನಿದ್ದರೂ ಅವರ ಸಾಧನೆಗಳು ನೆನಪಷ್ಟೇ. ದೇಶ – ವಿದೇಶಗಳಲ್ಲೂ ಕುದ್ಕಾಡಿ ವಿಶ್ವನಾಥ ರೈ ಅವರು ಹೆಸರುವಾಸಿ. ಅದಕ್ಕೆ ಕಾರಣ ಅವರ ಶಿಷ್ಯರು ದೇಶ -ವಿದೇಶಗಳಲ್ಲೂ ಕಲಾ ಕೈಂಕರ್ಯ ನಡೆಸುತ್ತಿರುವುದು. 100ಕ್ಕೂ ಅಧಿಕ ಶಿಷ್ಯರು ವಿದ್ವಾನ್‌ ಆಗಿ, ಕಲಾವಿದರನ್ನು ತಯಾರಿಸುವ ಕಾಯಕವನ್ನು ಮುಂದುವರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕುದ್ಕಾಡಿ ವಿಶ್ವನಾಥ ರೈ ಅವರ ಹೆಸರು ಅಜರಾಮರ.

Advertisement

ನೃತ್ಯ ಪಟುವಾಗಿ, ಯಕ್ಷಗಾನ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ, ನಾಟಕಕಾರರಾಗಿ, 36 ಕೃತಿಗಳ ಕರ್ತೃವಾಗಿ, ಸಾಹಿತಿಯಾಗಿ, ತುಳು ಭಾಷೆಯ ಅಪ್ಪಟ ಅಭಿಮಾನಿಯಾಗಿ ಮಾತ್ರವಲ್ಲ ಎಳೆಯ ಕಲಾವಿದರ ಬೆನ್ನು ತಟ್ಟುವ ಮೇರು ವ್ಯಕ್ತಿಯಾಗಿ ಕುದ್ಕಾಡಿ ಅವರು ಜನಮಾನಸದಲ್ಲಿ ಚಿರಪರಿಚಿತ. ಪುಟ್ಟ ಮಕ್ಕಳ ನೃತ್ಯವನ್ನು ಕೊನೆವರೆಗೂ ನೋಡಿ, ಪ್ರೋತ್ಸಾಹಿಸುತ್ತಿದ್ದ ಅವರ ಕಲಾ ಜೀವನದ ಅಭಿಮಾನ ಎಂದೆಂದಿಗೂ ಜೀವಂತವಾಗಿಯೇ ಉಳಿಯಲಿದೆ.

ಕುದ್ಕಾಡಿ ಎಂದರೆ…
ಕುದ್ಕಾಡಿ ಎಂದಾಗ ಭರತನಾಟ್ಯ ಪಕ್ಕನೆ ಮನದಾಳದಲ್ಲಿ ಸುಳಿಯುತ್ತದೆ. ತನ್ನ 86ರ ಹರೆಯದಲ್ಲೂ ಯುವಕರನ್ನು ನಾಚಿಸುವಂತೆ ನಾಟ್ಯ ಮಾಡುತ್ತಿದ್ದರು. ಕಲಾ ಜೀವನದ ಉತ್ಸುಕತೆಯನ್ನು ಕೊನೆವರೆಗೂ ಉಳಿಸಿಕೊಂಡಿದ್ದರು. ಭರತನಾಟ್ಯದ ಜತೆಗೆ ಕಥಕ್ಕಳಿ, ಸಿಂಹಳಿ ನೃತ್ಯ, ಓರಿಯಂಟಲ್‌ ನೃತ್ಯ ಪ್ರಕಾರಗಳನ್ನು ಪಳಗಿಸಿಕೊಂಡಿದ್ದರು. ಮೃದಂಗ, ಹಾಡುಗಾರಿಕೆಯಲ್ಲೂ ಪಳಗಿದ್ದರು.

ಕೊನೆಯ ಸಮ್ಮಾನ
ಪುತ್ತೂರಿನ ಟೌನ್‌ ಬ್ಯಾಂಕ್‌ ಹಾಲ್‌ನಲ್ಲಿ ನಡೆಯುತ್ತಿರುವ ಸಾಹಿತ್ಯ ಸೌರಭ – ಪುಸ್ತಕ ಹಬ್ಬ ಕಾರ್ಯಕ್ರಮದಲ್ಲಿ ಕುದಾRಡಿ ವಿಶ್ವನಾಥ ರೈ ಅವರನ್ನು ಸಮ್ಮಾನಿಸಲಾಗಿತ್ತು. ಅದೇ ಕೊನೆಯ ಸಮ್ಮಾನವೂ ಆಯಿತು. ಸಮ್ಮಾನ ಸ್ವೀಕರಿಸಿ ಮನೆಗೆ ಹಿಂದಿರುಗಿದ್ದ ಕುದಾRಡಿ ವಿಶ್ವನಾಥ ರೈ ಅವರು ಗೇಟ್‌ ಬಳಿಯೇ ಕುಸಿದು ಕುಳಿತಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಲಿಲ್ಲ. ಪತ್ನಿ (ನಯನಾ ವಿ. ರೈ), ಮಕ್ಕಳಾದ ವಿದುಷಿ ಸ್ವಸ್ತಿಕಾ ಆರ್‌. ಶೆಟ್ಟಿ, ವಿದುಷಿ ಆಸ್ತಿಕಾ ಎಸ್‌. ಶೆಟ್ಟಿ ಅವರನ್ನು ಅಗಲಿದ್ದಾರೆ.

ಮುಂದುವರಿಯುತ್ತಿದೆ ಕಲಾ ಸೇವೆ
ಕುದ್ಕಾಡಿ ವಿಶ್ವನಾಥ ರೈ ಅವರು ಹುಟ್ಟುಹಾಕಿದ ವಿಶ್ವ ಕಲಾನಿಕೇತನದ ಕಲಾ ಸೇವೆಯನ್ನು ಕುದ್ಕಾಡಿ ಅವರ ಮಗಳು ಮುಂದುವರೆಸುತ್ತಿದ್ದಾರೆ. ಯುವ ಕಲಾವಿದರನ್ನು ತಯಾರಿಸುವ ಕೆಲಸ ನಿರಂತರವಾಗಿರುತ್ತದೆ. ರಾಮಕೃಷ್ಣ ಆಶ್ರಮ, ಪಂಜ, ಬುಶ್ರಾ, ಲಿಟ್ಲ ಫ್ಲವರ್‌ ಹೀಗೆ ಅನೇಕ ಕಡೆಗಳಲ್ಲಿ ಇಂದಿಗೂ ತರಗತಿಗಳು ನಡೆಯುತ್ತಿದೆ.

Advertisement

ಅಂತ್ಯಕ್ರಿಯೆ
ಕುದ್ಕಾಡಿ ವಿಶ್ವನಾಥ ರೈ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಡಿ. 17ರಂದು ರಾತ್ರಿ ಪದಡ್ಕದಲ್ಲಿ ನೆರವೇರಿತು. 
ವಿದೇಶದಲ್ಲಿರುವ ಮಗಳು ಆಸ್ತಿಕಾ ಎಸ್‌. ಶೆಟ್ಟಿ ಬರುವವರೆಗೆ ಕಾದು ಕುದ್ಕಾಡಿಯ ಪದಡ್ಕದಲ್ಲಿರುವ ತುಳುನಾಡು ಮನೆ ಆವರಣದಲ್ಲೇ ಅಂತ್ಯಕ್ರಿಯೆ ಮಾಡಲಾಯಿತು. ನಟ ವಿನೋದ್‌ ಆಳ್ವ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸವಣೂರು ಸೀತಾರಾಮ ರೈ ಭೇಟಿ ನೀಡಿ ಸಂತಾಪ ಸೂಚಿಸಿದರು.

ಕುದ್ಕಾಡಿ ವಿಶ್ವನಾಥ ರೈ ಅವರು ಕುರಿತು…
1932ರಲ್ಲಿ ಜನನ. ದಿ| ದೇವಸ್ಯ ಕುಂಞಣ್ಣ ರೈ, ಕುದ್ಕಾಡಿ ಜಾಕಮ್ಮ ದಂಪತಿ ಸುಪುತ್ರ. ಬಡಗನ್ನೂರು, ಈಶ್ವರಮಂಗಲದಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಫಿಲೋಮಿನಾದಲ್ಲಿ ಪ್ರೌಢ ಶಿಕ್ಷಣ, ಕಾಸರಗೋಡಿನ ಮೈಪಾಡಿಯಲ್ಲಿ ಶಿಕ್ಷಕ ತರಬೇತಿ ಪಡೆದರು. ಖಾಸಗಿಯಾಗಿ ಬಿಎ, ಎಂಎ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿಎಡ್‌ ಪದವಿ. ಬಳಿಕ ದರ್ಬೆ ಸಂತ ಫಿಲೋಮಿನಾದಲ್ಲಿ ಶಿಕ್ಷಕ ವೃತ್ತಿ. ವಿಶ್ವಕಲಾ ನಿಕೇತನದ ಸ್ಥಾಪನೆ, ಕಲಾ ಸೇವೆ, ಪಠ್ಯ ಪುಸ್ತಕ ನೃತ್ಯ ಪರೀಕ್ಷಕರಾಗಿ ದುಡಿಮೆ. ವಿದ್ವಾನ್‌ ಎ.ಎನ್‌. ನಾಗರಾಜನ್‌, ರಾಜನ್‌ ಅಯ್ಯರ್‌, ಕೆ.ಎಸ್‌. ರಾಜಗೋಪಾಲ್‌, ಕಾಂಚೀಪುರಂ ಜಿ. ಎಳ್ಳಪ್ಪನ್‌ ಹಾಗೂ ಡಾ| ಕೆ. ವೆಂಕಟಲಕ್ಷ್ಮಮ್ಮ ಗುರುಗಳು.

ಪ್ರಶಸ್ತಿ, ಗೌರವಗಳು ಹಲವು
ಕುದ್ಕಾಡಿ ಅವರು ಬರೆದಿರುವ ‘ನರ್ತನ ಜಗತ್‌’ ಕೃತಿ ನೃತ್ಯ ಕಲಾವಿದರಿಗೆ ಉಪಯುಕ್ತವಾಗಿದೆ. ಭರತನಾಟ್ಯ ಶಾಸ್ತ್ರರಂಗಕ್ಕೆ ರಾಜ್ಯ ಪ್ರಶಸ್ತಿ, ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ರಾಷ್ಟ್ರೀಯ ರತ್ನ ಪುರಸ್ಕಾರ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಕನ್ನಡ ರಂಗಭೂಮಿ ವಿಮರ್ಶ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಬಂಗಾರದ ಪದಕ, ತುಳು ಕೂಟ ನವಭಾರತ ನಾಟಕ ಸ್ಪರ್ಧಾ ಬಹುಮಾನ, ಸಂಕ್ರಾಂತಿ ಪ್ರಾತಿನಿಧಿಕ ನಾಟಕ ರಚನೆಗೆ ರಾಜ್ಯ ಮಟ್ಟದ ಪ್ರಥಮ ಬಹುಮಾನ, ಲಲಿತಕಲಾ ಪ್ರವೀಣ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ನಾಟ್ಯ ಕಲಾಪಯೋನಿಧಿ ರಾಜ್ಯ ಶಾಸ್ತ್ರೀಯ ನೃತ್ಯ ಕಲಾವಿದರ ಸಮಾವೇಶ ಪ್ರಶಸ್ತಿ, ಗಡಿನಾಡ ಕನ್ನಡಿಗ ಪ್ರಶಸ್ತಿ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿ, ಬಹರೈನ್‌ ಕುವೈಟ್‌ ಬಂಟ ಸಮಾಜದ ಗೌರವ, ಬಹರೈನ್‌ ತುಳು ಸಮ್ಮೇಳನದ ಅಧ್ಯಕ್ಷತೆ, ಪುತ್ತೂರು ತಾಲೂಕು 9ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸುಮಸೌರಭ ಪ್ರಶಸ್ತಿ, ರುಕ್ಮಿಣಿ ಬಾಯಿ ಸ್ಮಾರಕ ಪ್ರಶಸ್ತಿ, ಒಡಿಯೂರು ತುಳು ಮಾನದಿಗೆ ಗೌರವ ಸೇರಿದಂತೆ ಹಲವು ಗೌರವಗಳು ಇವರನ್ನು ಅರಸಿಕೊಂಡು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next