Advertisement
ಮಂಗಳೂರಿನಲ್ಲಿ ಶಿಕ್ಷಣ ಹಾಗೂ ಕ್ರಿಕೆಟ್ ತರಬೇತಿ ಪಡೆದಿರುವ ಕೆ.ಎಲ್.ರಾಹುಲ್ ಇತ್ತೀಚಿನ ಟೀಮ್ ಇಂಡಿಯಾ ಸರಣಿಗಳಲ್ಲಿ ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದರೂ ಐಪಿಎಲ್‌ನಲ್ಲಿ ಪಂಜಾಬ್ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವುದು ವಿಶ್ವಕಪ್ ಆಯ್ಕೆಗೆ ಹೆಚ್ಚು ಶಕ್ತಿ ನೀಡಿತು.
ಅಂಡರ್-11 ವಲಯ ಮಟ್ಟದ ಕ್ರಿಕೆಟ್‌ನಲ್ಲಿ ಆಟವಾಡುವ ಮೂಲಕ ರಾಹುಲ್ ಕ್ರಿಕೆಟ್ ಜಗತ್ತಿಗೆ ಹೆಜ್ಜೆ ಇಟ್ಟರು. ಬಳಿಕ 2004ರಲ್ಲಿ ನಡೆದ 13 ವರ್ಷ ವಯೋಮಿತಿಯ ಮಂಗಳೂರು ವಿಭಾಗದ 3 ಕ್ರಿಕೆಟ್ ಪಂದ್ಯಗಳ 4 ಇನಿಂಗ್ಸ್‌ನಲ್ಲಿ ರಾಹುಲ್ 650 ರನ್ ಪಡೆದು ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದಿದ್ದರು. ಅಂಡರ್-13 ವಿಭಾಗದ ಕರ್ನಾಟಕ ತಂಡಕ್ಕೆ ಆಯ್ಕೆಯಾದ ರಾಹುಲ್ 5 ಪಂದ್ಯದಲ್ಲಿ 450 ರನ್ ಬಾರಿಸಿದ್ದರು. ಇದರಲ್ಲಿ 3 ಶತಕ ಹಾಗೂ ಒಂದು ಅರ್ಧ ಶತಕ ಸೇರಿತ್ತು.
Related Articles
Advertisement
ಈವರೆಗೆ 34 ಟೆಸ್ಟ್ ಆಡಿರುವ ರಾಹುಲ್, 14 ಏಕದಿನ ಪಂದ್ಯಗಳಲ್ಲಷ್ಟೇ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿ ಎಂಬುದು ಕರಾವಳಿ ಕ್ರಿಕೆಟ್ ಅಭಿಮಾನಿಗಳ ಹಾರೈಕೆ.
ಅಮ್ಮನಿಂದ ಆಲ್ ದಿ ಬೆಸ್ಟ್
ಈ ಸಂದರ್ಭದಲ್ಲಿ ‘ಉದಯವಾಣಿ’ ಜತೆ ಮಾತಾಡಿದ ರಾಹುಲ್ ತಾಯಿ ರಾಜೇಶ್ವರಿ ಲೋಕೇಶ್, ಎನ್’.ಐ.ಟಿ.ಕೆ. ಆಂಗ್ಲಮಾಧ್ಯಮ ಶಾಲೆಯ 5 ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ರಾಹುಲ್ ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್ ತರಬೇತಿ ಆರಂಭಿಸಿದ್ದ. ಆ ಸಮಯದಲ್ಲಿ ಪಿ. ದೇವದಾಸ್ ನಾಯಕ್ ಹಾಗೂ ಜಯರಾಜ್ ಮುತ್ತು ಅವರಿಂದ ತರಬೇತಿ ಪಡೆದ. ಬಳಿಕ ಕಾಲೇಜು ಹಂತದಲ್ಲೂ ಕೂಡ ಕ್ರಿಕೆಟ್ ತರಬೇತಿ ನಿರಂತರವಾಗಿ ನಡೆಯಿತು. ಬಳಿಕ ಬೇರೆ ಬೇರೆ ವಯೋಮಿತಿಯ ಪಂದ್ಯದಲ್ಲಿ ಆಡಿದ ರಾಹುಲ್ ಇಂದು ವಿಶ್ವಕಪ್ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ ಎಂಬುದು ಸಂತಸ ತಂದಿದೆ. ಆತನಿಗೆ ಆಲ್ ದಿ ಬೆಸ್ಟ್’ ಎಂದರು. ಮಂಗಳೂರಿನಲ್ಲಿ ರಾಹುಲ್ ತಂದೆ-ತಾಯಿ
ರಾಹುಲ್ ತಾತನ ಮನೆ ತುಮಕೂರು ಜಿಲ್ಲೆಯ ಕುದೂರು ತಾಲೂಕಿನ ಕಣನೂರು. ಇದು ಕಣ್ಣೂರು ಎಂದೂ ಪ್ರಚಲಿತ. ರಾಹುಲ್‌ನ ತಂದೆ ಹಾಗೂ ತಾಯಿ ಇಬ್ಬರೂ ಮೂಲತಃ ಅಲ್ಲಿಯವರು. ಆದರೆ, ರಾಹುಲ್ ತಂದೆ ಡಾ| ಕಣ್ಣೂರು ಎನ್.ಲೋಕೇಶ್ 1987ರಲ್ಲಿ ಸುರತ್ಕಲ್‌ನ ಎನ್.ಐ.ಟಿ.ಕೆ. ಜಿಯಾಲಜಿ ವಿಭಾಗದ ಪ್ರೊಫೆಸರ್ ಆಗಿ ನೇಮಕಗೊಂಡ ಅನಂತರ ಪತ್ನಿ ಜತೆ ಮಂಗಳೂರಿನಲ್ಲೇ ನೆಲೆಸಿದರು. ರಾಜೇಶ್ವರಿ ಲೋಕೇಶ್ ಮಂಗಳೂರು ವಿವಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ವೇಳೆ ರಾಹುಲ್ ಇಲ್ಲಿಗೆ ಬಂದು ಹೋಗುತ್ತಾರೆ. — ದಿನೇಶ್ ಇರಾ