Advertisement
ಸಾಂಸ್ಕೃತಿಕ ರಾಯಭಾರಿಯಾಗಿರುವ ಕಾಸರಗೋಡು ಚಿನ್ನಾ ಅವರು ಕಾಸರಗೋಡಿನ ಕನ್ನಡ ಪರ ಹೋರಾಟದೊಂದಿಗೆ ಕನ್ನಡ, ಕೊಂಕಣಿ, ತುಳು ಇತ್ಯಾದಿ ಭಾಷೆಗಳ ಉಳಿವು ಹಾಗೂ ಬೆಳವಣಿಗೆಗೆ ನೀಡಿದ ಕೊಡುಗೆಯಂತು ವರ್ಣಿಸಲು ಸಾಧ್ಯವಾಗದು. ಈ ಎಲ್ಲಾ ಭಾಷೆಗಳಲ್ಲಿ ಹಾಗೂ ಮಲಯಾಳ, ಇಂಗ್ಲೀಷ್ ಭಾಷೆಯ ನಾಟಕಗಳಲ್ಲಿ ಅಭಿನಯಿಸಿದ್ದು, ನಿರ್ದೇಶಿಸಿದ್ದು, ಸಿನಿಮಾ – ಧಾರವಾಹಿಗಳಲ್ಲಿ ಅಭಿನಯಿಸಿದ್ದು, ನಿರ್ದೇಶಿಸಿದ್ದು, ವಿದೇಶಗಳಲ್ಲೂ ಕನ್ನಡ ನಾಟಕದ – ಮೂಕಾಭಿನಯದ ಕಂಪನ್ನು ಹರಡಿದ್ದು, ಅಲ್ಲೂ ನಾಟಕ ನಿರ್ದೇಶನ ಮಾಡಿದ್ದು… ಹೀಗೆ ಅವರ ಸಾಧನೆಗಳ ಸರಮಾಲೆ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಸಾಧನೆಗಳನ್ನು ಹಿಡಿದಿಡುವ ಅಪೂರ್ವ ಹಾಗೂ ಸಂಗ್ರಹಯೋಗ್ಯ ಕೃತಿಯೇ “ಚಿನ್ನ ಚಿತ್ತಾರ’. ಕಾಸರಗೋಡು ಚಿನ್ನಾ ಅವರ ಸಾಧನೆಯ ಹೂರಣ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಲಿದೆ.
ಕಾಸರಗೋಡು ಚಿನ್ನಾ ಅವರು ಅರುವತ್ತು ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ಕಾಸರಗೋಡು ಚಿನ್ನಾ ಅಭಿನಂದನ ಸಮಿತಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯ ಕ್ರಮದಲ್ಲಿ ‘ಚಿನ್ನಾ ಚಿತ್ತಾರ’ ಬಿಡುಗಡೆಗೊಳಿಸಲಾಗಿತ್ತು. ಡಾ| ನಾ. ದಾಮೋದರ ಶೆಟ್ಟಿ ಪ್ರಧಾನ ಸಂಪಾದಕರಾಗಿರುವ ಸಂಪಾದಕೀಯ ಮಂಡಳಿಯಲ್ಲಿ ಸಾಹಿತಿಗಳಾದ ಶಾ.ಮಂ.ಕೃಷ್ಣರಾಯ, ಗೋಪಾಲಕೃಷ್ಣ ಪೈ, ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ಬಿ.ಎನ್.ಸುಬ್ರಹ್ಮಣ್ಯ, ಉದ್ಘೋಷಕಿ ಶಕುಂತಲಾ ಆರ್.ಕಿಣಿ ಅವರು ಸಹಕರಿಸಿದ್ದಾರೆ. ಸಂಪಾದಕರೇ ಹೇಳಿರುವಂತೆ ಬಹಳ ವಿಸ್ತಾರವಾದ ಕ್ಯಾನ್ವಾಸ್‌ನಲ್ಲಿ ವರ್ಣರಂಜಿತ ಮುದ್ರೆಗಳನ್ನೊತ್ತಿದ ಚಿನ್ನಾರನ್ನು ನಿರ್ದಿಷ್ಟವಾಗಿ ಕಂಡರಿಸುವುದು ಬಹು ಪ್ರಯಾಸದ ಕೆಲಸ. ಅಪರೂಪದ ಕೆಲವರಷ್ಟೇ ಈ ರೀತಿ ಇರುವುದು ಸಾಧ್ಯ. ಚಿನ್ನಾ ಅವರ ವ್ಯಕ್ತಿತ್ವದ ಕುರಿತ, ಅವರು ಕೈಗೊಂಡ ಕಾಯಕಗಳ ಕುರಿತ, ಅವರ ಹವ್ಯಾಸ ವೈವಿಧ್ಯಗಳ ಕುರಿತ ಅಸಂಖ್ಯ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ಪ್ರಕಟಗೊಂಡಿವೆ. ಅವುಗಳಲ್ಲಿ ಒಂದಷ್ಟನ್ನು ಆಯ್ದು ಕೊಲಾಜ್ ರೂಪದಲ್ಲಿ ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಅವರ ಸವ್ಯಸಾಚಿತ್ವವನ್ನು ಬೆಳಕಿಗೆ ತರುವ ಸಾವಿರಾರು ಚಿತ್ರಗಳಲ್ಲಿ ಒಂದಷ್ಟು ಚಿತ್ರಗಳನ್ನು ಆಯ್ದು ಫೋಟೋ ಆಲ್ಬಮ್ ಸಿದ್ಧಪಡಿಸಿ ಕೊಡಲಾಗಿದೆ.
Related Articles
Advertisement