Advertisement
ಹಲವು ವೈಶಿಷ್ಟ್ಯಗಳ ಬೀಡುಕೇರಳ ರಾಜ್ಯದ ಪಟ್ಟನಂತಿಟ್ಟಂ ಜಿಲ್ಲೆಯ ಪಶ್ಚಿಮ ಘಟ್ಟದ 18 ಬೆಟ್ಟಗಳ ಮಧ್ಯೆ ಇರುವ ಶಬರಿಮಲೆ ಸಮುದ್ರಮಟ್ಟದಿಂದ 914 ಮೀಟರ್ ಎತ್ತರ ಪ್ರದೇಶದಲ್ಲಿದೆ. ಮೊದಲು ದಕ್ಷಿಣ ಭಾರತದವರು ಮಾತ್ರ ಈ ದೇಗುಲದ ಭಕ್ತರಾಗಿದ್ದರು. ಅನಂತರದಲ್ಲಿ ದೇಶದ ಮೂಲೆ ಮೂಲೆಗಳಿಂದಲೂ ಭಕ್ತರನ್ನು ಆಕರ್ಷಿಸುತ್ತಿರುವ ಶಬರಿಮಲೆ ದೇವಸ್ಥಾನ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಶಬರಿಮಲೆ ಅಯ್ಯಪ್ಪಭಕ್ತರ ಭಜನೆಯ ಭಾವಪ್ರವಾಹದಲ್ಲಿ ಮೂಡಿ ಬರುವ ಮಣಿಕಂಠನ ಬದುಕಿನ ಕುರಿತ ಕಥೆಗಳು ಅಪಾರ. ಮಹಿಷಾಸುರನ ಕೊಲೆಗೈದವರ ವಿರುದ್ಧ ಪ್ರತೀಕಾರಕ್ಕಾಗಿ ಹಾತೊರೆಯುತ್ತಿದ್ದ ಆತನ ಸಂಬಂಧಿ ಮಹಿಷಿ ಮೃತ್ಯುವನ್ನೇ ಗೆಲ್ಲುವ ತಪಸ್ಸು ಕೈಗೊಳ್ಳುತ್ತಾಳೆ. ಬ್ರಹ್ಮ ಆಕೆಯ ತಪಸ್ಸಿಗೆ ಓಗೊಟ್ಟು ಪ್ರತ್ಯಕ್ಷನಾಗುತ್ತಾನೆ. ಗಂಡಸರಿಬ್ಬರ ಮಿಲನದಿಂದ ಹುಟ್ಟುವ ಮಗುವಿನಿಂದಷ್ಟೇ ನನಗೆ ಸಾವುಂಟಾಗುವಂತಹ ವರ ಬೇಕು ಎಂದು ಮಹಿಷಿ ಬ್ರಹ್ಮನನ್ನು ಕೇಳಿಕೊಳ್ಳುತ್ತಾಳೆ. ಬ್ರಹ್ಮ ಮಹಿಷಿಯ ಕೋರಿಕೆಗೆ ಅಸ್ತು ಎನ್ನುತ್ತಾನೆ. ನಂತರ ಅಹಂಕಾರದಿಂದ ಮಹಿಷಿಯ ಉಪಟಳ ಆರಂಭವಾಗುತ್ತದೆ. ಈ ವೇಳೆ, ಸಮುದ್ರ ಮಥನದಲ್ಲಿ ಸಿಕ್ಕಿದ ಅಮೃತವನ್ನು ಅಸುರರು ಪಡೆದಾಗ, ವಿಷ್ಣುವು ಮೋಹಿನಿ ವೇಷ ಧರಿಸಿ ಅಮೃತವನ್ನು ವಾಪಸು ಪಡೆದು ದೇವತೆಗಳಿಗೆ ಒಪ್ಪಿಸುತ್ತಾನೆ. ಆದರೆ ಮೋಹಿನಿಯ ರೂಪರಾಶಿಯನ್ನು ಕಂಡು ಶಿವ ಮೋಹದಲ್ಲಿ ಬಂಧಿಯಾಗುತ್ತಾನೆ. ಆತನಿಗೆ ಆಗ ಆ ಮೋಹಿನಿಯ ಹಿನ್ನೆಲೆ ಗೊತ್ತಿರಲಿಲ್ಲವಾದ್ದರಿಂದ ಅವರ (ಹರಿ-ಹರ) ಸಮ್ಮಿಲನದಿಂದ ಸ್ವಾಮಿ ಅಯ್ಯಪ್ಪನ ಜನನವಾಗುತ್ತದೆ. ಆ ಮಗು ಕೇರಳದ ಪಂದಳ ರಾಜ್ಯದ ಅರಸ ರಾಜಶೇಖರನಿಗೆ ಸಿಗುತ್ತದೆ. ಇದು ಸ್ವಾಮಿ ಅಯ್ಯಪ್ಪನ ಹುಟ್ಟಿನ ಸಂಕ್ಷಿಪ್ತ ಕಥೆಯಾಗಿ, ಮುಂದೆ ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗುವ ನಿಟ್ಟಿನಲ್ಲಿ ಕಥೆಯು ಮುಂದುವರಿಯುತ್ತದೆ.
Related Articles
ಶಬರಿಮಲೆಯಿಂದ ಈಶಾನ್ಯ ಕಡೆ ಪೊನ್ನಂಬಲಮೇಡು ಎಂಬ ಬೆಟ್ಟವೊಂದಿದೆ. ಅಲ್ಲಿಯೇ ಪ್ರತಿವರ್ಷ ಜನವರಿ 14ರಂದು ಸಂಜೆ ಆರೂವರೆ ಗಂಟೆ ಸುಮಾರಿಗೆ ಬೆಳಕೊಂದು ಕಾಣಿಸುತ್ತದೆ. ಭಕ್ತರಿಗೆ ಆ ಬೆಳಕನ್ನು ನೋಡುವುದೇ ಒಂದು ಹೊಸತನದ ಪುಣ್ಯಾನುಭೂತಿ. ಮಕರ ಸಂಕ್ರಾಂತಿಯಂದೇ ಈ ಜ್ಯೋತಿ ಕಾಣಿಸುವುದರಿಂದ ಇದು ಮಕರಜ್ಯೋತಿ ಎಂದೇ ಜನಜನಿತ. ಆ ದಿನ ದೇವತೆಗಳು ಅಯ್ಯಪ್ಪಸ್ವಾಮಿಗೆ ಆ ಬೆಟ್ಟದಲ್ಲಿಯೇ ಪೂಜೆ ಮಾಡುವುದರಿಂದ ಆ ಬೆಳಕು ಕಾಣಿಸುತ್ತದೆ ಎಂಬ ಒಂದು ವಾದವಿದ್ದರೆ, ಸ್ವತಃ ಅಯ್ಯಪ್ಪ ಸ್ವಾಮಿಯೇ ಅಲ್ಲಿಗೆ ಬಂದು ಬೆಳಕಿನ ಸ್ವರೂಪದಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾನೆಂಬ ಇನ್ನೊಂದು ವಾದವೂ ಇದೆ.
Advertisement
ಅಯ್ಯಪ್ಪ ಸ್ವಾಮಿಯ ಹರಕೆ ಹೊತ್ತವರು 41 ದಿನಗಳ ಕಾಲ ಕಠಿನ ವ್ರತವನ್ನು ಪಾಲಿಸಬೇಕಾಗುತ್ತದೆ. ಅವರು ಕಪ್ಪು ಅಥವಾ ಕೇಸರಿ ಬಣ್ಣದ ಪಂಚೆ ಶಲ್ಯ ಅಂಗಿ ಧರಿಸಬೇಕು. ಕಾಲಿಗೆ ಚಪ್ಪಲಿ ಬಳಸುವಂತಿಲ್ಲ, ಬೆಳಿಗ್ಗೆ ತಣ್ಣೀರಿನಲ್ಲೇ ಸ್ನಾನ ಮಾಡಬೇಕು, ಸಸ್ಯಾಹಾರವನ್ನು ಮಾತ್ರ ಸೇವಿಸಬೇಕು, ಹಾಸಿಗೆಯ ಮೇಲೆ ಮಲಗುವಂತಿಲ್ಲ, ಚಾಪೆಯ ಮೇಲೆ ಏಕಾಂಗಿಯಾಗಿ ಪವಡಿಸಬೇಕು, ಒಂದು ರೀತಿಯ ಸನ್ಯಾಸ ಸ್ವೀಕಾರದ ಬದುಕಿನಂತಿರಬೇಕು ಮತ್ತು ವಂಚನೆ ಮೋಸದಂತಹ ಯಾವುದೇ ಕ್ರಿಯೆಯಲ್ಲಿ ತೊಡಗಬಾರದು. ಅಯ್ಯಪ್ಪದೇಗುಲದಲ್ಲಿರುವ 18 ಮೆಟ್ಟಿಲುಗಳಂತೆ 18 ಸಲ ಯಾರು ಶಬರಿಮಲೆಗೆ ಯಾತ್ರೆಯನ್ನು ಕೈಗೊಂಡಿರುವರೋ ಅವರನ್ನು ಗುರುಸ್ವಾಮಿ ಎಂದು ಕರೆಯುತ್ತಾರೆ.
ಐದು ಸಾವಿರ ವರ್ಷಗಳ ಹಿನ್ನೆಲೆ ನಿರ್ದಿಷ್ಟ ಋತುವಿನಲ್ಲಿ ಭೇಟಿ ಕೊಡುವ ಅತಿ ಹೆಚ್ಚಿನ ಸಂಖ್ಯೆಯ ಯಾತ್ರಿಗಳ ಪೈಕಿ ವಿಶ್ವದಲ್ಲಿಯೇ ಶಬರಿಮಲೆ 2ನೆಯ ಸ್ಥಾನ ಪಡೆದಿದೆ. ಮಕ್ಕಾದ ಹಜ್ ಯಾತ್ರೆ ಈ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. ಪುರಾತನ ದೇಗುಲಗಳಲ್ಲಿ ಒಂದಾಗಿರುವ ಅಯ್ಯಪ್ಪದೇಗುಲದ ಬಗ್ಗೆ ಇತಿಹಾಸಕಾರರು ಪ್ರಾಚ್ಯ ಸಂಶೋಧನಾಕಾರರು ಕೂಲಂಕಷವಾಗಿ ಅಧ್ಯಯನ ಮಾಡಿದ್ದು, ಇದು ಸುಮಾರು ಐದು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರಬೇಕು ಎಂಬ ಅಭಿಪ್ರಾಯಪಟ್ಟಿದ್ದಾರೆ. ಈ ದೇಗುಲದ ಬಗ್ಗೆ ಇನ್ನೂ ಹಲವಾರು ಕಥೆಗಳಿವೆ. ಬಹು ಹಿಂದಿನಿಂದಲೂ ಈ ದೇಗುಲದ ಭಕ್ತರಲ್ಲಿ ಸಾಮಾಜಿಕ ಸಮಾನತೆಯ ಸಾಮುದಾಯಿಕ ನಡುವಳಿಕೆಗಳು ಎದ್ದು ಕಾಣುತ್ತವೆ. ಇದೊಂದು ಸಾಮರಸ್ಯ ಸಂಕೇತದ ಸಕಾರಾತ್ಮಕ ಬೆಳವಣಿಗೆಯೂ ಹೌದು. ಜಗತ್ತಿನ ಧರ್ಮಗಳು ಮೂಲದಲ್ಲಿ ಸಮಾನತೆ ಬಗ್ಗೆ ಸದಾಶಯ ಹೊಂದಿದ್ದರೂ, ಆಚರಣೆಯಲ್ಲಿ ಅಸಮಾನತೆಗಳೇ ಹೆಚ್ಚಿರುವ ಈ ಕಾಲದಲ್ಲಿ ಅಯ್ಯಪ್ಪನ ಭಕ್ತರ ಆಚರಣೆಯಲ್ಲಿ ಸಾಮಾಜಿಕ ಸಮಾನತೆ ಅಹಿಂಸೆ ಇತ್ಯಾದಿಗಳನ್ನು ಗಮನಿಸಬಹುದು. ಈ ಪ್ರಕ್ರಿಯೆಯ ಹಿಂದೆ ಭಾರತೀಯ, ಭೌದ್ಧ ಧರ್ಮದ ಪ್ರಭಾವ ಇದೆಯೆಂದೂ ಇತಿಹಾಸಜ್ಞರು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಪುರಾವೆ ಎಂಬಂತೆ, ಸಹಸ್ರಮಾನದ ಹಿಂದೆ ತಮಿಳುನಾಡಿನಲ್ಲಿ ಪಾಂಡ್ಯರಾಜರು ಬೌದ್ಧಧರ್ಮಕ್ಕೆ ಅಪಾರ ಪೋತ್ಸಾಹ ನೀಡಿದ್ದರು. ಈ ಬಗ್ಗೆ ಚೀನ ಪ್ರವಾಸಿ ಹ್ಯೂಯೆನ್‌ತ್ಸಾಂಗ್ ಬರೆದಿಟ್ಟಿದ್ದಾನೆ. ದಿಲ್ಲಿಯ ಅಲ್ಲಾವುದ್ದಿನ್ ಖೀಲ್ಜಿಯ ಸೇನಾಪತಿ ಮಲ್ಲಿಕಾಫರನು ದಕ್ಷಿಣದಲ್ಲಿ ದಂಡಯಾತ್ರೆ ನಡೆಸಿ ಮದುರೈಗೂ ಹೋಗಿ ಪಾಂಡ್ಯ ಸಾಮ್ರಾಜ್ಯಕ್ಕೆ ಆಘಾತ ಉಂಟು ಮಾಡುತ್ತಾನೆ. ಆಗ ಪಾಂಡ್ಯ ರಾಜವಂಶಸ್ಥರಲ್ಲಿ ಕೆಲವರು ಈಗಿನ ಪಟ್ಟಿನತಿಟ್ಟಂ ಜಿಲ್ಲೆ ಪ್ರದೇಶಕ್ಕೆ ಬಂದು ನೆಲಸಿ ಪಂದಲ ರಾಜ ವಂಶವಾಗಿ ಬಂದ ಬಗ್ಗೆ ಇತಿಹಾಸಕಾರರಲ್ಲಿ ಸಾಕಷ್ಟು ಚರ್ಚೆಗಳು ಇಂದಿಗೂ ನಡೆದಿವೆ.ನನ್ನನ್ನು ಮುಟ್ಟದಿರು ಎಂಬ ಸಂಗತಿಗಳೇ ಕೆಲವು ಧರ್ಮಗಳ ಆಚರಣೆಯಲ್ಲಿ ಎದ್ದು ಕಾಣುತ್ತಿರುವಾಗ ಎಲ್ಲ ಭಕ್ತರೂ ಸಮಾನರು ಎಂಬ ದೃಷ್ಟಿಕೋನ ಮತ್ತು ನಡವಳಿಕೆ ಅಯ್ಯಪ್ಪ ಮಾಲೆ ಧರಿಸಿರುವವರಲ್ಲಿ ಕಂಡುಬರುವುದೊಂದು ಸಾಮಾಜಿಕ ಕ್ರಾಂತಿ. ಬುದ್ಧಂ ಶರಣಂ ಗಚ್ಛಾಮಿ ಎಂಬ ಮಾದರಿಯಲ್ಲಿಯೇ ಸ್ವಾಮಿ ಶರಣಂ ಅಯ್ಯಪ್ಪ ಎನ್ನುವ ಆರಾಧನಾ ಧ್ವನಿ ಈ ನಿಟ್ಟಿನಲ್ಲಿ ಅರ್ಥಪೂರ್ಣ ಎನಿಸುತ್ತದೆ. ಸುರಕ್ಷತೆಗೆ ಬೇಕು ಆದ್ಯತೆ
ಆಧುನಿಕ ಚಿಂತನಶೀಲರಿಗೆ ಮಾನವಜೀವನದ ಪಾರತಂತ್ರದ ಅಲ್ಪಜ್ಞತ್ವದ ಪೂರ್ಣ ಎಚ್ಚರವಿರುವುದರಿಂದ ಪುನಃ ಪುನಃ ಅವರು ತಮಗಿಂತ ಉತ್ಕೃಷ್ಟವಾದ ಉಚ್ಚ ಶಕ್ತಿಗಳಿಗೆ ತನ್ನ ಹಾಗೂ ಜನತೆಯ ರಕ್ಷಣೆಗಾಗಿ ಪ್ರಾರ್ಥಿಸುತ್ತಾರೆ. ಮನುಷ್ಯನ ದೈಹಿಕ ಶುಚಿತ್ವದ ವಿಕಾಸಕ್ಕೆ ಅತ್ಯಂತ ಅವಶ್ಯವಾದ ಸಂಸ್ಕಾರಗಳನ್ನು ವ್ರತ ಆಚರಣೆಯ ಕಾಲದಲ್ಲಿ ಬಳಸಲಾಗುತ್ತದೆ. ದರ್ಶನದ ಉದ್ದೇಶವೂ ಮೂಲತಃ ಮನುಷ್ಯನ ಅಂತರಂಗದ ಭಾವ ಜಗತ್ತಿಗೂ ಹೊರಗಣ ನಿಸರ್ಗದ ಭೌತಪ್ರಪಂಚಕ್ಕೂ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದಾಗಿದೆ. ಮಾನವ ಜೀವನವನ್ನು ದೇವಜೀವನವನ್ನಾಗಿ ಮಾರ್ಪಡಿಸಲು ಮತ್ತು ಮಾನವ ಭೂಮಿಯನ್ನು ದೇವಭೂಮಿಯನ್ನಾಗಿ ಮಾಡಲು ನಮ್ಮ ನಮ್ಮ ಭಕ್ತಿ ಮತ್ತು ಪ್ರಾರ್ಥನೆಗಳ ಮೂಲಕ ನಾವು ಈಗ ಹೆಚ್ಚು ಕಾತರರಾಗುತ್ತಿದ್ದೇವೆ. ಈ ಕಾತರವು ಬದುಕಿನ ಎಡೆಬಿಡದ ಸಂಘರ್ಷಕ್ಕೊಂದು ಧ್ಯೇಯ ನೀಡಿದೆ. ಮಾನವನಿಗೆ ಸಾರ್ಥಕತೆಯ ಸಾಫಲ್ಯದ, ಭಕ್ತಿಮಾರ್ಗದ ಶಾಂತಿಯ ಹಾದಿ ತೋರಿಸಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಭಕ್ತರ ನೂಕು ನುಗ್ಗಲಿನಿಂದಾಗಿ ಕಾಲ್ತುಳಿತಕ್ಕೆ ಹಲವು ಅಮಾಯಕ ಭಕ್ತರು ಶಬರಿಮಲೆಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಭಕ್ತರನ್ನು ಕಾಪಾಡಬೇಕಾದ ಭಗವಂತನ ಸನ್ನಿಧಿಯಲ್ಲೇ ಕೆಲವು ಕಹಿ ಘಟನೆಗಳು ನಡೆಯುವುದು ಮನ ಕಲಕುತ್ತದೆ. ಈ ವಿಚಾರದಲ್ಲಿ ಸರಿಯಾದ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಕೇರಳ ಸರಕಾರಕ್ಕೆ ಎಚ್ಚರಿಕೆ ನೀಡಿದೆ. ಇನ್ನು, ಸಂಕ್ರಾತಿಯಂದು ಕಾಣುವ ಮಕರ ಜ್ಯೋತಿ ಸಹಜವಲ್ಲ. ಕೃತಕ ಬೆಳಕು ಎಂಬುದನ್ನು ದೇವಾಲಯದ ಸಿಬಂದಿ ಒಪ್ಪಿಕೊಂಡಿದ್ದರೂ ಭಕ್ತರ ನಂಬಿಕೆಗೆ ಯಾವುದೆ ಚ್ಯುತಿಯಾಗಿಲ್ಲ ಎಂಬುದು ವಿಶೇಷವೆ ಸರಿ. – ಮಂಜುನಾಥ ಉಲುವತ್ತಿ ಶೆಟ್ಟರ್