ಚಂದ್ರಶೇಖರ ಕಂಬಾರರ “ಜೋಕುಮಾರ ಸ್ವಾಮಿ’ ನಾಟಕ ರಾಷ್ಟ್ರದಲ್ಲಿ ಹಲವು ಪ್ರದರ್ಶನ ಕಂಡಿತು. ಜತೆಗೆ ಕಂಬಾರರಿಗೆ ರಾಷ್ಟ್ರೀಯ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಇಂತಹ ಹಲವು ರಂಗಪ್ರಯೋಗಗಳ ಅವಿರ್ಭವ ಕನ್ನಡ ರಂಗಭೂಮಿಯದ್ದಾಗಿದೆ.
Advertisement
ಕನ್ನಡ ರಂಗಭೂಮಿ ಕೇವಲ ರಂಗಪ್ರಯೋಗ ಗಳಿಷ್ಟೇ ಗೆರೆ ಎಳೆದುಕೊಂಡಿಲ್ಲ. ಬದಲಾಗಿ ತನ್ನದೇ ಆದ ಪ್ರತಿರೋಧ ನೀಡಿದೆ. ಪರಿಣಾಮ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ರಂಗಾಸಕ್ತರನ್ನು ಎಚ್ಚರಿಸಿ ಹೋರಾಟಕ್ಕೂ ದಾರಿಯಾಗಿದೆ. ಈ ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಾಗ ತನ್ನದೇ ಆದ ರೀತಿಯಲ್ಲಿ ಕನ್ನಡ ರಂಗಭೂಮಿ ಪ್ರಬಲವಾದ ಪ್ರತಿರೋಧ ಒಡ್ಡಿತ್ತು. ಅಂತಹ ಇತಿಹಾಸ ಕನ್ನಡ ರಂಗಭೂಮಿಗಿದೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನಾಡಿನ ರಂಗಭೂಮಿ ಬೆಳವಣಿಗೆಗೆ ನೀರೆರೆದಿದ್ದಾರೆ. ಬಿ.ವಿ.ಕಾರಂತರು ರಂಗಾಯಣಕ್ಕೆ ರೂಪ ನೀಡಿದರು. ಶ್ರೀರಂಗರು ಕನ್ನಡದ ರಂಗಭೂಮಿಗೆ ಹೊಸದಿಕ್ಕು ಕೊಟ್ಟರು. ಶ್ರೀರಂಗರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ರಾಜ್ಯದ ವಿವಿಧ ಶಾಲೆಗಳ ಶಾಲಾ ಶಿಕ್ಷಕರಿಗೆ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದ್ದರು. ಇದು ಇಡೀ ಕರ್ನಾಟಕದಲ್ಲೇ ಒಂದು ರಂಗಚೇತನ ಕೊಟ್ಟ ಶಿಬಿರವಾಗಿತ್ತು. ಇದರ ಫಲವಾಗಿ ಹಿರಿಯ ನಟ ಲೋಕೇಶ್, ಬಿ.ಜಯಶ್ರೀ ಸೇರಿದಂತೆ ಹೆಸರಾಂತ ಕಲಾವಿದರು ಬೆಳಕಿಗೆ ಬಂದರು. 70ರ ದಶಕದಲ್ಲಿ ಒಂದಾದ ಮೇಲೆ ಒಂದು ಹವ್ಯಾಸಿ ತಂಡಗಳು ರೂಪುಗೊಂಡವು. ಗಿರೀಶ್ ಕಾರ್ನಾಡರ “ತುಘಲಕ್’ ರಂಗ ಪ್ರಯೋಗ ಕಾರ್ನಾಡ್ ಅವರನ್ನು ನಾಟಕಕಾರರನ್ನಾಗಿ ರೂಪಿಸಿತು. ಹಿರಿಯ ನಟ ಸಿ.ಆರ್. ಸಿಂಹ ಅವರಿಗೂ ಹೆಸರು ತಂದುಕೊಟ್ಟಿತು. ಹಿರಿಯ ನಟರಾದ ಶಂಕರ್‌ನಾಗ್, ಅರುಂಧತಿ, ರಮೇಶ್ ಭಟ್, ಲೋಕನಾಥ್, ಲೋಹಿತಾಶ್ವ, ವೈಶಾಲಿ ಕಾಸರವಳ್ಳಿ, ಗಿರೀಶ್ ಕಾಸರವಳ್ಳಿ ಸೇರಿದಂತೆ ಈ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಕಲಾಕ್ಷೇತ್ರ ದಲ್ಲಿ ಕಾಲಕಳೆಯುತ್ತಿದ್ದ ಪ್ರಕಾಶ್ ರೈ ಇವತ್ತು ಬಹು ಭಾಷಾ ಕಲಾವಿದನಾಗಿ ಬೆಳೆಸಿದ್ದೇ ಕನ್ನಡ ರಂಗಭೂಮಿ ಎಂಬುದನ್ನು ನಾವು ಮರೆಯುವಂತಿಲ್ಲ. ಅಂದು ಸರಕಾರದ ಆಸರೆಯಿಲ್ಲದೆ ಕೇವಲ ಟಿಕೆಟ್‌ಗಳಿಂದಲೇ ರಂಗಪ್ರಯೋಗಗಳು ನಡೆ ಯುತ್ತಿದ್ದವು. ಸರಕಾರದ ಹಂಗಿಲ್ಲದೆ ರಂಗಭೂಮಿ ಸಾಗುತ್ತಿತ್ತು. ಆದರೆ ಕಲರ್ ಟಿವಿ ಬಂದಾಗ ರಂಗಭೂಮಿಯಲ್ಲಿ ಒಳ ತುಮಲ ಶುರು ವಾಯಿತು. ಆಗಲೇ ರಂಗಾಸಕ್ತರು ಕೂಡ ಮಾಯವಾದರು. ಎಲ್ಲರೂ ಮನೆಯಲ್ಲೇ ಇರಲು ಶುರು ಮಾಡಿದರು. ನಾಟಕ, ನೃತ್ಯ ಸೇರಿದಂತೆ ಯಾವ ಪ್ರದರ್ಶನಕ್ಕೂ ಜನ ಬರುತ್ತಿಲ್ಲ. ಹೀಗಾಗಿ ಕಲಾವಿದರು ಪೆಚ್ಚು ಮುಖ ಹಾಕಿಕೊಂಡು ಕುಳಿತು ಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಅನಂತರ ಧಾರಾವಾಹಿಗಳಿಂದ ಬೇಸತ್ತು ಜನರು ಮತ್ತೆ ರಂಗಭೂಮಿಗೆ ಮರಳಿದ್ದು ಖುಷಿ ನೀಡಿತು.
Related Articles
Advertisement
ಶ್ರೀನಿವಾಸ ಜಿ.ಕಪ್ಪಣ್ಣ,ಹಿರಿಯ ರಂಗ ಕರ್ಮಿ,ಖ್ಯಾತ ಸಾಂಸ್ಕೃತಿಕ ಸಂಘಟಕ