ನಟಿ ಸಂಯುಕ್ತ ಹೊರನಾಡು ಸದಾ ಒಂದಿಲ್ಲೊಂದು ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ “ವಿಶ್ವ ಭೂಮಿ’ ತಿಂಗಳನ್ನು ತಮ್ಮದೇ ಶೈಲಿಯಲ್ಲಿ ಆಚರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿದ್ದರು. ಅಷ್ಟೇ ಅಲ್ಲ, ಹೆಣ್ಣನ್ನು ಭೂಮಿಗೆ ಹೋಲಿಕೆ ಮಾಡಿ ಹೊಸ ಪರಿಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಸುವ ಮೂಲಕ ಸುದ್ದಿಯಾಗಿದ್ದರು. ಈಗ ಪ್ರತಿಭಾವಂತರಿಗೊಂದು ಹೊಸ ವೇದಿಕೆ ಕಲ್ಪಿಸಿಕೊಡುವ ಮೂಲಕ ಸುದ್ದಿಯಾಗಿದ್ದಾರೆ ಸಂಯುಕ್ತಾ.
ಹೌದು, ಸಂಯುಕ್ತಾ ಹೊಸ ಆರ್ಟ್ ಗ್ಯಾಲರಿ ಶುರು ಮಾಡಿದ್ದಾರೆ. ಅದಕ್ಕೆ ಅವರು ಇಟ್ಟುಕೊಂಡ ಹೆಸರು “ದಿ ಆರ್ಟೆರಿ’ ಅಂತ. ಈ ಮೂಲಕ ಪ್ರತಿಭಾವಂತರ ಕಲೆಯನ್ನು ಅನಾವರಣಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೇ.22 ರಂದು ಜಯನಗರದಲ್ಲಿ ಅದಕ್ಕೆ ಚಾಲನೆಯೂ ಸಿಕ್ಕಾಗಿದೆ. ಸಂಯುಕ್ತ, ಈ ಆರ್ಟ್ ಗ್ಯಾಲರಿ ಹುಟ್ಟುಹಾಕಲು ಕಾರಣವೂ ಇದೆ. ಅದೇನೆಂದರೆ, ಸಂಯುಕ್ತಗೆ ಪೇಂಟಿಂಗ್ಸ್ ಅಂದರೆ ತುಂಬಾ ಇಷ್ಟವಂತೆ. ಅವರು ಕೂಡ ಸಾಕಷ್ಟು ಪೇಂಟಿಂಗ್ಸ್ ಮಾಡಿದ್ದಾರೆ.
ಆ ಆಸಕ್ತಿಯಿಂದಾಗಿ, ಯಾಕೆ ಒಳ್ಳೊಳ್ಳೆಯ ಪೇಂಟಿಂಗ್ಸ್ ಪ್ರದರ್ಶನ ಮಾಡಬಾರದು ಎಂಬ ಆಲೋಚನೆ ಬಂದಿದೆ. ಹಾಗೆ ಆಲೋಚಿಸಿದ್ದೇ ತಡ ಸಂಯುಕ್ತ, “ದಿ ಆರ್ಟೆರಿ’ ಅಂತ ಹೆಸರಿಟ್ಟು, ಅಲ್ಲೊಂದು ವರ್ಕ್‌ಶಾಪ್ ಮಾಡಿ, ಹೊಸದೊಂದು ಲೋಕ ಸೃಷ್ಟಿ ಮಾಡುವ ಮನಸ್ಸು ಮಾಡಿಬಿಟ್ಟಿದ್ದಾರೆ. “ದಿ ಆರ್ಟೆರಿ’ ಶುರು ಮಾಡುವ ಮುನ್ನ, ಕೊಲ್ಕತ್ತಾ ಮೂಲದ ಆರ್ಟಿಸ್ಟ್ ಒಬ್ಬರು ಮಾಡಿದ ಪೇಂಟಿಂಗ್ಸ್ ನೋಡಿ ಖುಷಿಗೊಂಡಿದ್ದಾರೆ.
ತಾನಷ್ಟೇ ಖುಷಿಪಟ್ಟರೆ ಸಾಲದು, ಎಲ್ಲರಿಗೂ ಪ್ರತಿಭಾವಂತರ ಕಲೆ ಗೊತ್ತಾಗಬೇಕು ಅಂದುಕೊಂಡು, ತಮ್ಮ ಇನ್ಸ್‌ಟಾಗ್ರಾಂನಲ್ಲಿ ಒಂದು ಆರ್ಟ್ ಫೋಟೋ ಹಾಕಿ, ಪೇಂಟಿಂಗ್ಸ್ ಆಸಕ್ತಿ ಇರುವವರು ತಮ್ಮ ಅದ್ಭುತ ಕಲಾಕೃತಿಗಳನ್ನು ಪೋಸ್ಟ್ ಮಾಡಿ ಅಂತ ಸ್ಟೇಟಸ್ ಹಾಕಿದ್ದಾರೆ. ಹಾಗೆ ಮಾಡಿದ ಕೆಲವೇ ನಿಮಿಷದಲ್ಲಿ ನೂರೈವತ್ತು ಮಂದಿ ಅದ್ಭುತ ಕಲಾಕೃತಿಗಳನ್ನು ಕಳುಹಿಸಿದ್ದಾರೆ. ಆ ಪೈಕಿ ಆಯ್ಕೆ ಮಾಡಿ ಐವರು ಮಾಡಿರುವ ಪೇಂಟಿಂಗ್ಸ್ ಅನ್ನು, ಪ್ರದರ್ಶನಕ್ಕಿಡುವ ಮನಸ್ಸು ಮಾಡಿದ್ದಾರೆ.
ಅವರ ಮೊದಲ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಸಂಯುಕ್ತಾ ಮಾಡಿರುವ “ದಿ ಆರ್ಟೆರಿ’ಯಲ್ಲಿ ಬರೀ ಕಲಾಕೃತಿಗಳ ಪ್ರದರ್ಶನವಷ್ಟೇ ಅಲ್ಲ, ಅಲ್ಲಿ ಹಾಡುಗಾರರು, ಬರಹಗಾರರು ಸೇರಿದಂತೆ ಹಲವು ರಂಗಗಳ ಆಸಕ್ತ ಪ್ರತಿಭೆಗಳಿಗೂ ಅವಕಾಶವಿದೆ. ಸದ್ಯಕ್ಕೆ ಬಾದಲ್ ನಂಜುಂಡಸ್ವಾಮಿ, ವಿಲಾಸ್ ನಾಯಕ್ ಹೀಗೆ ಹಲವು ಪ್ರತಿಭಾವಂತರ ಕಲಾಪ್ರದರ್ಶನ ಅಲ್ಲಿದೆ. ಆ ಮೂಲಕ ಅವರ ಪ್ರತಿಭೆ ಇನ್ನಷ್ಟು ಪಸರಿಸಲಿ ಎಂಬುದು ಸಂಯುಕ್ತಾ ಆಶಯ.
ಅಷ್ಟಕ್ಕೂ ಸಂಯುಕ್ತಾಗೆ ಇಂಥದ್ದೊಂದು ಯೋಚನೆ ಬಂದಿದ್ದು, ಅವರು ಚಿಕ್ಕಂದಿನಲ್ಲಿದ್ದಾಗ, ಸಂಗೀತ, ನಾಟಕ ಹೀಗೆ ಎಲ್ಲವನ್ನೂ ನೋಡಿಕೊಂಡೇ ಬೆಳೆದವರು. ಅಂತಹ ಹಲವು ಪ್ರತಿಭೆಗಳ ಕಲೆ ಎಲ್ಲೋ ಒಂದು ಕಡೆ ಎಲೆಮರೆಕಾಯಿಯಂತೆ ಆಗಬಾರದು ಅಂದುಕೊಂಡು, “ದಿ ಆರ್ಟೆರಿ’ ಶುರುಮಾಡಿದ್ದಾರೆ. ಅವರ ಹೊಸ ಪ್ರಯತ್ನದ ಮೊದಲ ಹೆಜ್ಜೆಗೆ ನಟಿ ಶ್ರುತಿ ಹರಿಹರನ್, ವಸಿಷ್ಟ ಸಿಂಹ, ಧನಂಜಯ್, ರಘು ದೀಕ್ಷಿತ್ ಸೇರಿದಂತೆ ಹಲವರು ಶುಭಕೋರಿದ್ದಾರೆ.
ಮುಂದಿನ ದಿನಗಳಲ್ಲಿ ನಟನೆ ಜೊತೆ ಜೊತೆಗೆ ಇದರ ಕಡೆಯೂ ಹೆಚ್ಚು ಗಮನ ಇರುತ್ತೆ ಎನ್ನುವ ಸಂಯುಕ್ತಾ, “ಅಲ್ಲಿ ಹಲವು ಕಲಾಕೃತಿಗಳಿವೆ, ವಾಟರ್ ಕಲರ್ ಮಾಡಲಾಗಿದೆ, ಬಾದಲ್ ನಂಜುಂಡಸ್ವಾಮಿ ಸೇರಿದಂತೆ ಹಲವು ಪ್ರತಿಭೆಗಳ ಪರಿಚಯ ಇರುತ್ತೆ. ಆಸಕ್ತಿ ಇರೋರು ಪೇಂಟಿಂಗ್ಸ್ ಖರೀದಿಸಲೂಬಹುದು. ಸ್ಥಳದಲ್ಲೇ ಕ್ಯಾರಿಕೇಚರ್ ಆರ್ಟಿಸ್ಟ್ ಕೂಡ ಇದ್ದು, ಬೇಕಾದರೆ, ತಮ್ಮ ಕ್ಯಾರಿಕೇಚರ್ ಮಾಡಿಸಿಕೊಳ್ಳಲೂ ಅವಕಾಶ ಇದೆ’ ಎನ್ನುತ್ತಾರೆ.