Advertisement

ಕಲಾ ಕ್ಷೇತ್ರಕ್ಕೆ ಭವಿಷ್ಯವಿಲ್ಲ ಎನ್ನುವುದು ತಪ್ಪು ಕಲ್ಪನೆ: ಶ್ರೀಧರ

03:30 AM Jul 05, 2017 | Team Udayavani |

ತೆಂಕಿಲ: ಅನೇಕ ಮಂದಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಕಲಾ ವಿಭಾಗದ ಬಗೆಗೆ ಸಾಕಷ್ಟು ಅಸಡ್ಡೆ ಇದೆ. ಆ ಕ್ಷೇತ್ರದಲ್ಲಿ ಭವಿಷ್ಯವಿಲ್ಲ ಅನ್ನುವ ತಪ್ಪು ಕಲ್ಪನೆಯನ್ನು ತೊರೆಯಬೇಕು ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಧರ ಎಚ್‌. ಜಿ. ಹೇಳಿದರು. ಅವರು ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶನ ಘಟಕದ ವತಿಯಿಂದ ತೆಂಕಿಲದ ವಿವೇಕಾನಂದ ಆಂ. ಮಾ. ಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಲಾ ವಿಭಾಗದ ಸಾಧ್ಯತೆಗಳು ಎಂಬ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಆಧುನಿಕ ಸಮಾಜದಲ್ಲಿ ಕಲಾ ವಿಭಾಗದಲ್ಲಿನ ವಿದ್ಯಾರ್ಥಿಗಳಿಗಿರುವ ಅವಕಾಶವನ್ನು ಗಮನಿಸಿದರೆ ಇನ್ನೂ ಎಂಜಿನಿಯರಿಂಗ್‌, ಮೆಡಿಕಲ್‌ಗ‌ಳಲ್ಲಿ ಮಾತ್ರ ಬದುಕಿದೆ ಎಂದು ನಂಬುವವರನ್ನು ಕಂಡರೆ ತಮಾಷೆ ಎನಿಸುತ್ತದೆ ಎಂದು ಹೇಳಿದರು. ಪ್ರಕೃತ ನಾಗರಿಕ ಸೇವಾ ಪರೀಕ್ಷೆಗಳೆಡೆಗೆ ಗಮನ ಹರಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅಂತಹ ಪರೀಕ್ಷೆಗಳಿಗೆ ಸಿದ್ಧಗೊಳ್ಳುವುದಕ್ಕೆ ಕಲಾ ವಿಭಾಗ ಸೂಕ್ತವಾದ ಆಯ್ಕೆ ಎನ್ನುವುದನ್ನು ಗಮನಿಸಬೇಕು. ಸರಕಾರ ವಿವಿಧ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಗೆಯಲ್ಲಿ  ಕಲಾ ವಿಭಾಗದ ವಿದ್ಯಾರ್ಥಿಗಳೇ ಇಂದು ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ ಎಂದರು.

ವಿಪುಲ ಅವಕಾಶ
ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್‌ ಕುಮಾರ್‌ ಕಮ್ಮಜೆ ಮಾತನಾಡಿ, ಇಂದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಅಷ್ಟೊಂದು ಉದ್ಯೋಗಗಳಿಗೆ ವಿದ್ಯಾರ್ಥಿಗಳು ತಯಾರಾಗುತ್ತಿಲ್ಲ. ಬಿ.ಎ ಪದವಿಯಲ್ಲಿ ಪತ್ರಿಕೋದ್ಯಮ ಇಂದು ಮಿಂಚುತ್ತಿರುವ ವಿಷಯ. ಪತ್ರಿಕೆ, ಟಿ.ವಿ ಗಳಲ್ಲಿ, ಜಾಹೀರಾತು ಕ್ಷೇತ್ರಗಳಲ್ಲಿ, ಸಿನೆಮಾ ಧಾರವಾಹಿಯಂತಹ ಸೃಜನಶೀಲ ಕ್ಷೇತ್ರಗಳಲ್ಲಿ ಉದ್ಯೋಗಗಳು ಕೈಬೀಸಿ ಕರೆಯುತ್ತಿವೆ ಎಂದು ಹೇಳಿದರು.

ಅತ್ಯುತ್ತಮ ಆಯ್ಕೆ
ವಿವೇಕಾನಂದ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ಗಣೇಶ್‌ ಪ್ರಸಾದ್‌ ಮಾತನಾಡಿ, ಇಂಗ್ಲಿಷ್‌ ಬಲ್ಲವನಿಗೆ ಪ್ರಪಂಚದ ಯಾವ ಭಾಗದಲ್ಲೂ ಉದ್ಯೋಗವಿದೆ. ಹೀಗಿರುವಾಗ ಬಿ.ಎ ಪದವಿಯಲ್ಲಿ ಇಂಗ್ಲಿಷ್‌ ವಿಷಯವನ್ನು ಐಚ್ಛಿಕ ವಿಷಯವಾಗಿ ಸ್ವೀಕರಿಸಿ ಅಧ್ಯಯನ ನಡೆಸಿದವರು ಉದ್ಯೋಗಕ್ಕಾಗಿ ಯಾವುದೇ ಭಯ ಪಡಬೇಕಿಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಕಲಾಕ್ಷೇತ್ರ ವಿದ್ಯಾರ್ಥಿಗಳ ಅತ್ಯುತ್ತಮ ಆಯ್ಕೆ ಆಗಬಲ್ಲುದು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ  ಶಾಲಾ ಮುಖ್ಯಶಿಕ್ಷಕ ಸತೀಶ್‌ ರೈ ಹಾಗೂ ಅಧ್ಯಾಪಕರು ವೃಂದದವರು ಉಪಸ್ಥಿತರಿದ್ದರು.

ವಿವೇಕಾನಂದದಲ್ಲಿ ಮಾಹಿತಿ ಘಟಕ
ವಿವೇಕಾನಂದ ಕಾಲೇಜಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಮಾಡುವ ಘಟಕವಿದ್ದು, ತಾಲೂಕಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮಾಡಲು ಸಿದ್ಧವಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ, ವಾಣಿಜ್ಯ,ಕಲಾ ವಿಭಾಗಗಳಲ್ಲಿಯಾವ ಅವಕಾಶಗಳಿವೆ? ಪಿಯುಸಿ ಬಳಿಕ ಮುಂದೇನು ಮಾಡಬಹುದು ಎಂಬ ಸಮಗ್ರ ಮಾಹಿತಿಯನ್ನು ಈ ಘಟಕ ನೀಡುತ್ತದೆ. ಖಾಸಗಿ, ಅನುದಾನಿತ ಅಥವಾ ಸರಕಾರಿ ಶಾಲಾ ಮುಖ್ಯಸ್ಥರು ಶಾಲೆಯಲ್ಲಿ ಶೈಕ್ಷಣಿಕ ಮಾರ್ಗದರ್ಶನ ಏರ್ಪಡಿಸಬೇಕಿದ್ದಲ್ಲಿ ಘಟಕವನ್ನು ಸಂಪರ್ಕಿಸಬಹುದು. ಮಾಹಿತಿ ಕಾರ್ಯಕ್ರಮ ಪೂರ್ತಿ ಉಚಿತವಾಗಿದ್ದು, ವಿದ್ಯಾರ್ಥಿಗಳಿಗೆ ಸಹಾಯಕವಾಗುವುದನ್ನೇ ಉದ್ದೇಶವಾಗಿರಿಸಿಕೊಂಡು ರೂಪಿಸಲಾಗಿದೆ ಎಂದು ಡಾ| ಎಚ್‌.ಜಿ. ಶ್ರೀಧರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next