Advertisement
ವೈಯಕ್ತಿಕ ವಿಚಾರಗಳನ್ನು ಮೀರಿದ ಸಂಬಂಧವೇರ್ಪಡಿಸಿ ನಮ್ಮನ್ನು ಒಂದುಗೂಡಿಸುವ ಶಕ್ತಿ ಕಲೆ ಮತ್ತು ಸಾಹಿತ್ಯಕ್ಕಿದೆ. ತಾಯಿಯಂತಹ ಕರುಣೆ ಮತ್ತು ಮಗುವಿನಂತಹ ನಿಷ್ಕಪಟ ದೃಷ್ಟಿಯಿಂದ ನೋಡಿದರೆ ಜಗತ್ತು ನಮಗೆ ಸುಂದರ ಮತ್ತು ಸಹನೀಯವಾಗುತ್ತದೆ. ಇಂತಹ ದೃಷ್ಟಿ ಬೆಳೆಸಿಕೊಳ್ಳುವುದನ್ನು ಕಲೆ ಕಲಿಸಿಕೊಡುತ್ತದೆ. ಜಾತಿ, ಮತ, ಅಂತಸ್ತುಗಳ ನರಕದಿಂದ ಮೇಲೆತ್ತುವ ಶಕ್ತಿ ಕೂಡ ಕಲೆಗಿದೆ ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು.
ಇಂದಿನ ದಿನಗಳಲ್ಲಿ ನಾವು ಯೋಚನಾ ಶಕ್ತಿಯನ್ನೇ ಕಳೆದುಕೊಂಡು ಮತ್ತೆ ಶಿಲಾಯುಗದ ಮಾನವರಾಗುವ ಪ್ರಯತ್ನದಲ್ಲಿದ್ದೇವೆ. ಉತ್ತಮ ಮನಸ್ಸುಗಳನ್ನು ಸೃಷ್ಟಿಸುವ, ಬೌದ್ಧಿಕ ಜ್ಞಾನವನ್ನು ಹೆಚ್ಚಿಸುವ ವಿಜ್ಞಾನ, ಕಲೆ ಪದವಿಗಳನ್ನು ಕೀಳಾಗಿ ಕಾಣಲಾಗುತ್ತಿದೆ. ಗುಲಾಮಗಿರಿಯತ್ತ ಕೊಂಡೊಯ್ಯುವ ಐಟಿ -ಬಿಟಿಗೆ ಆದ್ಯತೆ ನೀಡಲಾಗುತ್ತಿದೆ. ಶಿವರಾಮ ಕಾರಂತ, ಕುವೆಂಪು, ದ.ರಾ. ಬೇಂದ್ರೆ ಮೊದಲಾದ ಸಾಹಿತಿಗಳು ಕೂಡ ತಮ್ಮ ಸಾಹಿತ್ಯದಲ್ಲಿ ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ನಮಗೆ ಜ್ಞಾನಕೋಶವನ್ನೇ ಒದಗಿಸಿದ್ದಾರೆ. ಆದರೆ ನಾವು ಇದನ್ನು ಮರೆತಿದ್ದೇವೆ; ಓದುವುದು, ಯೋಚನೆ ಮಾಡುವುದನ್ನು ಬಿಟ್ಟಿದ್ದೇವೆ ಎಂದು ಅಭಿಪ್ರಾಯಪಟ್ಟ ಕಾಯ್ಕಿಣಿ, ಹಾಗಾಗಿಯೇ ಇಂದಿನ ರಾಜಕಾರಣಿಗಳಿಗೆ ಕೋಕಾಕೋಲಾ ಕಂಪೆನಿ ಮತ್ತು ಥರ್ಮಲ್ ಪವರ್ ಪ್ಲಾಂಟ್‌ಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ, ಎಲ್ಲದಕ್ಕೂ ಒಪ್ಪಿಗೆ ಕೊಡುತ್ತಾರೆ ಎಂದು ವಿಷಾದಿಸಿದರು. ಕಾಲೇಜು ಪ್ರಾಂಶುಪಾಲೆ ಡಾ| ಸಂಧ್ಯಾ ಆರ್. ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ಪುತ್ತಿ ವಸಂತ ಕುಮಾರ್, ವರದೇಶ್ ಹಿರೇಗಂಗೆ ಉಪಸ್ಥಿತರಿದ್ದರು. ಉಪನ್ಯಾಸಕಿ ಶರಿತಾ ಹೆಗ್ಡೆ ವಂದಿಸಿದರು. ಉಪನ್ಯಾಸಕ ಶಮಂತ ಕುಮಾರ್ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.
Related Articles
Advertisement