Advertisement

ಕಲೆ ಕಾಳಜಿ: ಯಕ್ಷಗಾನದಲ್ಲಿ ಹಿಮ್ಮೇಳದವರಿಗೊಂದು ಶಿಸ್ತು

11:18 AM Nov 10, 2017 | |

ಯಕ್ಷಗಾನ ಬಯಲಾಟದ ಪ್ರದರ್ಶನವೊಂದರಲ್ಲಿ ಭಾಗವಹಿಸುವ ಕಲಾವಿದರಲ್ಲಿ ಎರಡು ವಿಭಾಗಗಳಿವೆ. ಒಂದು ಹಿಮ್ಮೇಳ, ಮತ್ತೂಂದು ಮುಮ್ಮೇಳ. ಎರಡೂ ವಿಭಾಗಗಳ ಕಲಾವಿದರು ಬಹಳ ಎಚ್ಚರ ಮತ್ತು ತನ್ಮಯತೆಯಿಂದ ಪ್ರದರ್ಶನದಲ್ಲಿ ಭಾಗವಹಿಸಿದರೆ, ಅದು ಪ್ರೇಕ್ಷಕರ ಮೇಲೆ ಉತ್ತಮ ಪರಿಣಾಮವನ್ನು ಬೀರಬಲ್ಲುದು ಮತ್ತು ಪ್ರದರ್ಶನ ಯಶಸ್ವಿಯಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹಿಮ್ಮೇಳದ ಕಲಾವಿದರು ತಮ್ಮ ನಿರ್ವಹಣೆಯಲ್ಲಿ ಅವಶ್ಯವುಳ್ಳ ಶಿಸ್ತನ್ನು ಅಷ್ಟಾಗಿ ಕಾಯ್ದುಕೊಳ್ಳದಿರುವುದರಿಂದ, ಅದು ಯಕ್ಷಗಾನ ಪ್ರದರ್ಶನದ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ.

Advertisement

ರಂಗಸ್ಥಳದ ಮುಂಭಾಗದಲ್ಲಿ ನೆರೆದಿರುವ ಪ್ರೇಕ್ಷಕರು, ರಂಗದ ಮೇಲೆ ನಡೆಯುವ ಕಲಾಪ್ರದರ್ಶನವನ್ನು ನಿರಂತರ ನೋಡುತ್ತಿರುತ್ತಾರೆ. ಪ್ರೇಕ್ಷಕರ ಕಣ್ಣಿಗೆ ರಂಗದ ಮೇಲಿನ ಮುಮ್ಮೇಳ ಕಲಾವಿದರು ಮಾತ್ರವಲ್ಲ, ಹಿಮ್ಮೇಳ ಕಲಾವಿದರು ಕೂಡ ಕಾಣಿಸಿಕೊಳ್ಳುತ್ತಾರೆ. ಮುಮ್ಮೇಳದ ಕಲಾವಿದರು ರಂಗದ ಮೇಲಿರುವಷ್ಟು ಕಾಲ ತಮ್ಮ ಪಾತ್ರಗಳಲ್ಲಿದ್ದು, ಅದನ್ನು  ನಿರ್ವಹಿಸುತ್ತಿರುತ್ತಾರೆ. ಆದರೆ ಹಿಮ್ಮೇಳ ಕಲಾವಿದರು ಹೆಚ್ಚಾಗಿ ಒಂದು ಪದ್ಯ ಮುಗಿದೊಡನೆ ತಮ್ಮ ಪಾತ್ರವನ್ನು ಮರೆತು, ರಂಗವನ್ನು ನಿರ್ಲಕ್ಷಿಸುತ್ತಾರೆ. ಇದನ್ನು ಅಶಿಸ್ತು ಎಂದು ಹೇಳಬಹುದಾಗಿದೆ.

ಹೆಚ್ಚಾಗಿ ಒಂದು ಪದ್ಯದ ಹಾಡುಗಾರಿಕೆ ಮುಗಿದೊಡನೆ ಭಾಗವತರು ಮತ್ತು ಹಿಮ್ಮೇಳ ಕಲಾವಿದರು ಪರಸ್ಪರ ಮಾತುಗಾರಿಕೆಯಲ್ಲಿ ತೊಡಗುವ ದೃಶ್ಯ ಇದೀಗ ಸರ್ವೇಸಾಮಾನ್ಯವಾಗಿದೆ. ಅದು ವಾದನೋಪಕರಣಗಳ ಸಮಸ್ಯೆಯಂತಹ ತುರ್ತಿನ ವಿಷಯವಾಗಿದ್ದರೆ ತಪ್ಪಲ್ಲ. ಅಂತಹ ಸಂದರ್ಭದಲ್ಲಿ ಅದು ಕನಿಷ್ಠ ಅವಧಿಯ ಮಾತುಕತೆಯಾಗಿರಬೇಕು. ಆದರೆ ಹಿಮ್ಮೇಳ ಕಲಾವಿದರು ನಗು, ಚರ್ಚೆ ಇತ್ಯಾದಿಗಳಲ್ಲಿ ತೊಡಗಿರುವ ದೃಶ್ಯಗಳೇ ಹೆಚ್ಚಾಗಿ ಪ್ರೇಕ್ಷಕರಿಗೆ ಕಾಣಿಸುತ್ತಿರುತ್ತವೆ. ಇದನ್ನು ಪ್ರೇಕ್ಷಕರು ನೋಡದೆ ನಿರ್ವಾಹವಿಲ್ಲ. ಹಿಮ್ಮೇಳ ಕಲಾವಿದರ ಈ ಬಗೆಯ ಕಲಾಪಗಳು ಪ್ರೇಕ್ಷಕರ ಗಮನವನ್ನು ಅವರೆಡೆ ಸೆಳೆಯುವಂತಿರುತ್ತವೆ. ರಂಗದಲ್ಲಿ ಕುಳಿತಿರುವ ಹಿಮ್ಮೇಳ ಕಲಾವಿದರಿಗೇ ಮುಮ್ಮೇಳದವರ ಪ್ರದರ್ಶನ ನಿರ್ಲಕ್ಷಿಸು ವಂಥದ್ದಾಗಿದ್ದರೆ ಸ್ವಲ್ಪ ದೂರದಲ್ಲಿ ಕುಳಿತಿರುವ ಪ್ರೇಕ್ಷಕರು ಆ ಸಂದೇಶವನ್ನು ಸ್ವೀಕರಿಸುವುದು ಸಹಜವಲ್ಲವೇ? ಹಿಮ್ಮೇಳ ಕಲಾವಿದರ ಸರಸ ಸಲ್ಲಾಪಗಳು ಮುಮ್ಮೇಳ ಕಲಾವಿದರ ನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುತ್ತವೆ.

ಪ್ರೇಕ್ಷಕರು ರಂಗಸ್ಥಳದ ಮೇಲಿರುವ ಮುಮ್ಮೇಳ ಕಲಾವಿದರನ್ನು ಮಾತ್ರವಲ್ಲ, ತಮ್ಮನ್ನು ಕೂಡ ನೋಡುತ್ತಿರುತ್ತಾರೆ ಎಂಬ ಎಚ್ಚರ ಹಿಮ್ಮೇಳ ಕಲಾವಿದರಲ್ಲಿ ಸದಾ ಇರಬೇಕು. ಮುಮ್ಮೇಳ ಕಲಾವಿದರು ಅರ್ಥ ಹೇಳಲು ತೊಡಗಿದೊಡನೆ ಪ್ರೇಕ್ಷಕರು ತಮ್ಮನ್ನು ಗಮನಿಸುವುದಿಲ್ಲ, ತಾವು ತಮ್ಮ ಖಾಸಗಿ ಮಾತುಕತೆ ನಡೆಸಬಹುದು ಎಂಬ ನಿಲುವನ್ನು ಹಿಮ್ಮೇಳ ಕಲಾವಿದರು ಬಿಡಬೇಕು. ಈ ಸಲಹೆಯನ್ನು ಎಲ್ಲ ಹಿಮ್ಮೇಳ ಕಲಾವಿದರನ್ನು ದೃಷ್ಟಿಯಲ್ಲಿಟ್ಟು ಹೇಳಿದ್ದಲ್ಲ. ಶಿಸ್ತಿನಿಂದ ನಡೆದುಕೊಳ್ಳುವ ಅನೇಕ ಹಿಮ್ಮೇಳ ಕಲಾವಿದರಿದ್ದಾರೆ. ಕೀರ್ತಿಶೇಷ ದಾಮೋದರ ಮಂಡೆಚ್ಚ, ಅಗರಿ ಶ್ರೀನಿವಾಸ ಭಾಗವತ ಮುಂತಾದವರು ತಮ್ಮ ಗಮನವನ್ನು ಮುಮ್ಮೇಳ ದವರ ಕಡೆಯಿಂದ ಬೇರೆಡೆಗೆ ಹರಿಸಿದ್ದು ತೀರಾ ವಿರಳ.

ಇನ್ನೊಂದು ವಿಚಾರ ಯಾವುದೆಂದರೆ, ಹಿಮ್ಮೇಳ ಕಲಾವಿದರು ರಂಗವೇದಿಕೆಯಲ್ಲಿ ಕುಳಿತಿರುವಲ್ಲೇ ಎಲೆ ಅಡಿಕೆ ಹಾಕಿಕೊಳ್ಳುವುದು, ಉಗುಳುವುದು, ಚಹಾ ಸೇವನೆ ಮಾಡು ವುದು ಇತ್ಯಾದಿ. ಇವು ಕೂಡ ಅಶಿಸ್ತಿನ ವರ್ತನೆಗಳು. ಹಿಂದೆ ರಾತ್ರಿಯಿಡೀ ಒಬ್ಬರೇ ಭಾಗವತರಿದ್ದಾಗ ಇದು ಒಂದು ರೀತಿಯಲ್ಲಿ ಅನಿವಾರ್ಯವಾಗಿತ್ತು ಎನ್ನಬಹುದು. ಆದರೆ ಇಂದು ಇಡೀ ರಾತ್ರಿ ಆಟಗಳಲ್ಲಿ ಕೂಡ ಹಿಮ್ಮೇಳ ಕಲಾವಿದರು ರಂಗದ ಮೇಲಿರುವುದು ಕೆಲವೇ ಗಂಟೆಗಳು. ಬಾಟಲಿ ತಂದಿಟ್ಟು ನೀರು ಕುಡಿಯುವುದನ್ನು ಕೂಡ ನಿಯಂತ್ರಿಸಿಕೊಳ್ಳುವುದು ಸಾಧ್ಯವಿಲ್ಲದಿಲ್ಲ. ಸಂಘಟಕರಾಗಿರಲಿ, ಕಲಾವಿದರಾಗಿರಲಿ, ಇತರರಾಗಿರಲಿ, ಪ್ರದರ್ಶನ ನಡೆಯುವ ಹೊತ್ತಿನಲ್ಲಿ ರಂಗಸ್ಥಳಕ್ಕೆ ಬಂದು ಭಾಗವತರೊಡನೆ ಮಾತನಾಡಿ ಹೋಗುವುದು ಕೂಡ ಅಶಿಸ್ತಿನ ವರ್ತನೆಯೇ.

Advertisement

ಹಿಮ್ಮೇಳ ಕಲಾವಿದರ ಶಿಸ್ತಿನ ವಿಚಾರಕ್ಕೆ ಬಂದಾಗ ಹೇಳಲೇಬೇಕಾದ ಮತ್ತೂಂದು ಅಂಶ ಯಾವುದೆಂದರೆ, ಹಿಮ್ಮೇಳ ಕಲಾವಿದರ ವೇಷಭೂಷಣ. ಪರಂಪರೆಯಲ್ಲಿ ಬಂದ ಪದ್ಧತಿ ಯಾವುದೆಂದರೆ ಹಿಮ್ಮೇಳ ಕಲಾವಿದರೆಲ್ಲರೂ ಶುಭ್ರ ಶ್ವೇತವಸನಧಾರಿಗಳಾಗಿರಬೇಕು. ಇದು ರಂಗದ ಶೋಭೆಯನ್ನು ಹೆಚ್ಚಿಸುವ ಒಂದು ಅಂಶ. ಇತ್ತೀಚೆಗಿನ ದಿನಗಳಲ್ಲಿ ಭಾಗವತರ ಸಹಿತ ಹಿಮ್ಮೇಳ ಕಲಾವಿದರು ಕಡುಬಣ್ಣದ ದಿರಿಸುಗಳನ್ನು ಧರಿಸಿ ರಂಗವೇದಿಕೆ ಯನ್ನು ಅಸ್ತವ್ಯಸ್ತಗೊಳಿಸುತ್ತಿರುವುದು ಹೆಚ್ಚಾಗಿದೆ. ತಲೆ ಮೇಲೆ ಧರಿಸುವ ಮುಂಡಾಸಿನ ಬಗ್ಗೆ ಕೂಡ ಶ್ರದ್ಧೆ ವಹಿಸದಿರುವುದು ಕಂಡುಬರುತ್ತದೆ. ಕಾಟಾಚಾರ ಕ್ಕೆಂಬಂತೆ ಕೆಲವೇ ಹೊತ್ತು ಅದನ್ನು ಧರಿಸಿ ಆ ಬಳಿಕ ಕಳಚುವವರೇ ಹೆಚ್ಚು. ಇತ್ತೀಚೆಗೆ ಮುಂಡಾಸಿನ ಬದಲು ಮುಂಡಾಸಿನಂತೆ ಕಾಣುವ ಟೊಪ್ಪಿ ಧರಿಸುವ ರೂಢಿ ಬಂದಿದೆ. ಇದಕ್ಕೊಂದು ಅಂದ ಇಲ್ಲವೇ ಇಲ್ಲ. ಹಾಡುಗಾರಿಕೆ, ಹಿಮ್ಮೇಳವಾದನಗಳನ್ನು ವರ್ಷಗಟ್ಟಲೆ ಅಭ್ಯಾಸ ಮಾಡುವ ಕಲಾವಿದರು ಕೆಲವು ದಿನಗಳ ಪರಿಶ್ರಮದಿಂದ ಮುಂಡಾಸನ್ನು ತಾವೇ ಕಟ್ಟಿಕೊಳ್ಳುವ ಪ್ರಯತ್ನ ಮಾಡಬಾರದೇ?

ಇದರರ್ಥ, ಹಿಮ್ಮೇಳದ ಯಾವ ಕಲಾವಿದರಲ್ಲೂ ರಂಗದ ಮೇಲಿನ ಶಿಸ್ತು ಇಲ್ಲ ಎಂದರ್ಥವಲ್ಲ. ಅಂತೆಯೇ ಎಲ್ಲ ಮುಮ್ಮೇಳ ಕಲಾವಿದರಲ್ಲೂ ರಂಗದ ಶಿಸ್ತು ಇದೆ ಎಂದೂ ಅಲ್ಲ. ಕೆಲವು ಮುಮ್ಮೇಳ ಕಲಾವಿದರ ರಂಗ ನಿರ್ವಹಣೆ ಯಲ್ಲೂ ಸಾಕಷ್ಟು ಅಶಿಸ್ತಿನ ವರ್ತನೆಗಳಿವೆ. ಯಕ್ಷಗಾನ ರಂಗ ದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ನಡೆದುಕೊಂಡು ಬರುತ್ತಿರುವ ಅಶಿಸ್ತಿನ ವರ್ತನೆಗಳನ್ನು ನಿಯಂತ್ರಿಸುವವರು ಇಲ್ಲವಾಗಿದ್ದಾರೆ ಅಥವಾ ಕಡಿಮೆಯಾಗಿದ್ದಾರೆ. ವಿದ್ವಾಂಸರ, ಅನುಭವಿಗಳ, ಹಿರಿಯ ಕಲಾವಿದರ ಸೂಚನೆಗಳನ್ನು ಅನುಸರಿಸುವವರೂ ಇಲ್ಲ. ಗೌರವಿಸುವವರೂ ಇಲ್ಲ. ಹಾಗಾಗಿ ಯಕ್ಷಗಾನ ಪ್ರದರ್ಶನಗಳ ಗುಣಮಟ್ಟ ದಿನೇದಿನೇ ಕುಸಿಯುತ್ತಿದೆ.

ಮೇಲೆ ಹೇಳಲಾದ ಅಂಶಗಳು ತಾಳಮದ್ದಳೆ ಕೂಟ ಗಳಿಗೂ ಅನ್ವಯವಾಗುತ್ತವೆ. ತಾಳಮದ್ದಳೆಯಲ್ಲಿ ಅರ್ಥಧಾರಿ ಗಳ ದಿರಿಸುಗಳು ಕೂಡ ಹಿಮ್ಮೇಳ ಕಲಾವಿದರಂತೆಯೇ ಇರಬೇಕು ವಿನಾ ಬಣ್ಣ ಬಣ್ಣದ ಉಡುಗೆ ತೊಡುಗೆಗಳು ಅಪೇಕ್ಷಣೀಯವಲ್ಲ.

ಯಕ್ಷಪ್ರಿಯ

Advertisement

Udayavani is now on Telegram. Click here to join our channel and stay updated with the latest news.

Next