Advertisement

ಬಿಸು ಸಡಗರದಲ್ಲಿ ಕಲೆ, ಸಂಸ್ಕೃತಿ ಅನಾವರಣ

12:50 AM Apr 15, 2019 | Team Udayavani |

ಬೆಂಗಳೂರು: ದಕ್ಷಿಣ ಕನ್ನಡದ ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ವೇಷ-ಭೂಷಣ, ಭೂತಾರಾಧನೆ, ನಾಗಾರಾಧನೆಗಳ ಮಹತ್ವ ತಿಳಿಸುವ ಪ್ರದರ್ಶನಗಳು, ಬಿಸು ಪರ್ಬ ಇತಿಹಾಸದ ಜತೆಗೆ, ಸರ್ಜಿಕಲ್‌ ಸ್ಟ್ರೈಕ್‌, ಗಡಿಯಲ್ಲಿ ಸೈನಿಕರ ಹೋರಾಟ, ಕುಟುಂಬದವರ ಮನಸ್ಥಿತಿ ತಿಳಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ಅನಾವರಣಗೊಂಡವು.

Advertisement

ಬಂಟರ ಸಂಘ ಬೆಂಗಳೂರು ವತಿಯಿಂದ ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದ “ಬಿಸು ಸಡಗರ’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಬಂದ ಬಂಟ ಸಮುದಾಯದ ಯುವಕರ ಕಲಾ ತಂಡಗಳು ವಿವಿಧ ಕಲಾ ಪ್ರದರ್ಶನಗಳನ್ನು ನೀಡಿದವು.

ಬೆಳಗ್ಗೆ 10 ಗಂಟೆಗೆ ಶಶಿರೇಖಾ ಆನಂದ ಶೆಟ್ಟಿ ಹಾಗೂ ಆನಂದ್‌ ಎಂ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಉದಯ್‌ ಜಾದೂಗಾರ್‌ ಅವರ “ಜಾದೂ ಕಾರ್ಯಕ್ರಮ’, ಗಿರೀಶ ಜೈಪ್ರಕಾಶ್‌ ಆರಾಧ್ಯ ಅವರ “ನಗೆ ಕಡಲು’ ಕಾರ್ಯಕ್ರಮಗಳು ನೆರೆದಿದ್ದವರನ್ನು ರಂಜಿಸಿದವು. ಸಂಜೆ ವೇದಿಕೆ ಕಾರ್ಯಕ್ರಮದ ನಂತರ ಅಂತಾರಾಷ್ಟ್ರೀಯ ಖ್ಯಾತಿಯ ಜ್ಞಾನ ಹೈತಾಳ್‌ ನೇತೃತ್ವದ ಹೆಜ್ಜೆನಾದ ತಂಡವು “ಸಾಂಸ್ಕೃತಿಕ ವಿಸ್ಮಯ’ ಕಾರ್ಯಕ್ರಮ ನೀಡಿದರು.

ಕಾರ್ಯಕ್ರಮದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ಸಿಇಒ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ರಾಜ್‌ಕಿರಣ್‌ ರೈ ಅವರಿಗೆ ಸಂಘದಿಂದ ದಿವಂಗತ ಮುಲ್ಕಿ ಸುಂದರ ರಾಂ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಮಾತನಾಡಿದ ರಾಜ್‌ಕಿರಣ್‌ ರೈ ಅವರು, ಬಂಟ ಸಮುದಾಯದವರು ಎಲ್ಲ ಕ್ಷೇತ್ರಗಳಿಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಐಎಎಸ್‌ ಮಾಡಿ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿರುವವರ ಸಂಖ್ಯೆ ತುಂಬಾ ಕಡಿಮೆಯಿದೆ. ಹೀಗಾಗಿ ಹೆಚ್ಚಿನ ಯುವಕರು ಐಎಎಸ್‌ ಮಾಡಲು ಸಂಘ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

Advertisement

ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ ಎಸ್‌.ಶೆಟ್ಟಿ ಮಾತನಾಡಿ, ಬಂಟರು ಇಲ್ಲದಿರುವ ಜಾಗ ಹಾಗೂ ಕ್ಷೇತ್ರ ಈ ಪ್ರಪಂಚದಲ್ಲಿ ಯಾವುದು ಇಲ್ಲ. ನಮಗೆ ಯಾವುದೇ ರಾಜಕೀಯ ಅಥವಾ ಜನಪ್ರತಿನಿಧಿಗಳ ಬೆಂಬಲವಿಲ್ಲ. ಬದಲಿಗೆ ನಮ್ಮ ಸ್ವ-ಸಾಮರ್ಥ್ಯದ ಮೇಲೇ ಎಲ್ಲವನ್ನೂ ಸಾಧಿಸುತ್ತೇವೆ. ಹೀಗಾಗಿ ನಮ್ಮ ಕಲೆ, ಸಂಸ್ಕೃತಿ ಹಾಗೂ ಭಾಷೆಗಳನ್ನು ಎಂದಿಗೂ ಬಿಡಬಾರದು ಎಂದು ಯುವಕರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಂ.ಎಸ್‌.ರಾಮಯ್ಯ ನಾರಾಯಣ ಹೃದಯಾಲಯದ ವೈದ್ಯರಾದ ಡಾ.ರವಿಶಂಕರ್‌ ಶೆಟ್ಟಿ ಕೆ. ಅವರನ್ನು ಸನ್ಮಾನಿಸಲಾಯಿತು. ಜತೆಗೆ ಬಂಟ ಕೋ-ಅಪರೇಟಿವ್‌ ಸೊಸೈಟಿಯ ಲೋಗೋ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರಿಗೆ ಬಹುಮಾನ ನೀಡಲಾಯಿತು. ಸಂಘದ ಅಧ್ಯಕ್ಷ ಆರ್‌.ಉಪೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next