Advertisement
ಮೂಲತಃ ಅರ್ಚಕರಾದ ಇವರು ಅರಸೀಕೆರೆ ನಗರದಲ್ಲಿ “ಅವಧೂತ ಹೋಟೆಲ್’ ಅನ್ನೂ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸಾಮಾನ್ಯ ಗ್ರಾಹಕರಿಗೂ ಕಡಿಮೆ ದರದಲ್ಲಿ ರುಚಿಯಾದ ಊಟ ಕೊಡುತ್ತಾರೆ. ಉಡುಪಿ ಜಿಲ್ಲೆಯ ಮಂದಾರ್ತಿಯವರಾದ ಮುರಳಿ, 1999ರಲ್ಲಿ ಕೆಲಸ ಅರಸಿ ಅರಸೀಕೆರೆಗೆ ಬಂದರು. ಚಕ್ಲಿ, ನಿಪ್ಪಟ್ಟು, ಕೊಡುಬಳೆ, ಪುಳಿಯೋಗರೆ ಪುಡಿ ಹೀಗೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ನಿರೀಕ್ಷಿತ ಲಾಭ ಸಿಗದೇ ಹೋದಾಗ, ವ್ಯಾಪಾರ ಬಿಟ್ಟು ಅರ್ಚಕ ವೃತ್ತಿಯನ್ನು ಆರಂಭಿಸಿದರು. 2001ರಲ್ಲಿ ಆನೆಘಟ್ಟ ಸುಬ್ರಹ್ಮಣ್ಯ ಸ್ವಾಮಿ, 2003ರಿಂದ ಕಂಟೇನಹಳ್ಳಿ ಶನೇಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ.
Related Articles
ಅರಸೀಕೆರೆಯಲ್ಲಿನ ಹೊಯ್ಸಳೇಶ್ವರ, ಪ್ರತಿಭಾ ಕಾಲೇಜು, ವಿದ್ಯಾರಣ್ಯ ಐಟಿಐ ಕಾಲೇಜು, ಕನ್ನಿಕಾ, ಸರ್ಕಾರಿ ಶಾಲೆಗೆ ಸೇರಿದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರು ಮಧ್ಯಾಹ್ನದ ಊಟಕ್ಕೆಂದು ಇಲ್ಲಿಗೆ ಬರುತ್ತಾರೆ.
Advertisement
ಫುಲ್ ಊಟಕ್ಕೆ 30 ರೂ.:ಸಾಮಾನ್ಯ ಗ್ರಾಹಕರಿಗೆ ಫುಲ್ ಊಟಕ್ಕೆ 30 ರೂ. ತೆಗೆದುಕೊಳ್ಳಲಾಗುತ್ತದೆ. ಅನ್ನ, ತಿಳಿ ಸಾರು, ಸಾಂಬಾರು, ಹಪ್ಪಳ, ಉಪ್ಪಿನಕಾಯಿ, ಚಪಾತಿ ಅಥವಾ ರಾಗಿ ಮುದ್ದೆ ಕೊಡುತ್ತಾರೆ. ವಿದ್ಯಾರ್ಥಿಗಳಿಗೆ 10 ರೂ.ಗೆ ಅನ್ನ, ಸಾಂಬಾರು, ಹಪ್ಪಳ, ಉಪ್ಪಿನಕಾಯಿ ಕೊಡ್ತಾರೆ. 20 ರೂ.ಗೆ ತಿಂಡಿ:
ಚಿತ್ರಾನ್ನ, ರೈಸ್‌ಬಾತ್, ತಟ್ಟೆ ಇಡ್ಲಿ (ಎರಡು), ಗುಂಡು ಇಡ್ಲಿ (ಮೂರು) 20 ರೂ.ಗೆ ಸಿಗುತ್ತದೆ. ವಿದ್ಯಾರ್ಥಿಗಳಿಗಾದ್ರೆ 10 ರೂ.
ಇಷ್ಟು ಕಡಿಮೆ ದರಕ್ಕೆ ಊಟ ತಿಂಡಿ ಕೊಡುತ್ತಿರುವ ಬಗ್ಗೆ ವಿವರ ನೀಡುವ ಮುರಳಿಯವರು, ಸಾಂಬಾರ್ ಪೌಡರ್, ಗೋಧಿ ಹಿಟ್ಟು ಹೀಗೆ ಹೋಟೆಲ್‌ಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಮನೆಯಲ್ಲಿ ತಯಾರಿಸುತ್ತೇವೆ. ಹೀಗಾಗಿ ಖರ್ಚು ಸ್ವಲ್ಪ ಕಡಿಮೆಯಾಗುತ್ತದೆ. ಅಲ್ಲದೆ, ಗ್ರಾಹಕರಿಗೂ ಇದರಿಂದ ಶುಚಿಯಾದ ಊಟ ಸಿಗುತ್ತದೆ ಎನ್ನುತ್ತಾರೆ ಹೋಟೆಲ್ ಮಾಲಿಕ ಮುರಳಿ ಮಂದಾರ್ತಿ. ಹೋಟೆಲ್ ಸಮಯ:
ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ, ಭಾನುವಾರ ರಜೆ. ಹೋಟೆಲ್ ವಿಳಾಸ:
ಬಿ.ಎಚ್.ರಸ್ತೆ, ಕೆಇಬಿ ಎದುರು, ಅರಸೀಕೆರೆ ನಗರ.
– ಭೋಗೇಶ ಆರ್. ಮೇಲುಕುಂಟೆ