ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ, ಅನರ್ಹತೆಗೆ ಸಂಬಂಧಪಟ್ಟಂತೆ ಬುಧವಾರ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರು ಸ್ಪೀಕರ್ ಕಚೇರಿಗೆ ದೌಡಾಯಿಸಿ ಚರ್ಚೆ ನಡೆಸಿದರು.
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಸಿದ್ದರಾಮಯ್ಯ ನೇತೃತ್ವದಲ್ಲಿ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ ಇತರರ ನಿಯೋಗ ಮೊದಲಿಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಕಾಂಗ್ರೆಸ್‌ನ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ಬಿಜೆಪಿ ಕೈವಾಡವಿದ್ದಂತಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ನಾಯಕ ಆರ್.ಅಶೋಕ್, ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಅತೃಪ್ತ ಶಾಸಕರೊಂದಿಗೆ ಕಾಣಿಸಿಕೊಂಡ ದೃಶ್ಯಾವಳಿಗಳು, ಮಾಹಿತಿಯನ್ನು ಕಾಂಗ್ರೆಸ್ ನಾಯಕರು ಸ್ಪೀಕರ್‌ಗೆ ಸಲ್ಲಿಸಿದ್ದಾರೆ. ಜತೆಗೆ ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಪಟ್ಟಂತೆ ಚರ್ಚೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಸ್ಪೀಕರ್ ಭೇಟಿಯಾದ ಮುಖ್ಯಮಂತ್ರಿ: ಇದೇ ವಿಚಾರವಾಗಿ ಸಿಎಂ ಕುಮಾರಸ್ವಾಮಿಯವರು ಸ್ಪೀಕರ್ ಕಚೇರಿಗೆ ತೆರಳಿ ಕೆಲಕಾಲ ಚರ್ಚೆ ನಡೆಸಿದರು. ರಾಜೀನಾಮೆ ಸಲ್ಲಿಸಿರುವ ಶಾಸಕರ ಪೈಕಿ ಕೆಲವರ ಅನರ್ಹತೆ ಕುರಿತಂತೆ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.
ಬಿಜೆಪಿ ನಿಯೋಗ ಭೇಟಿ: ಮೈತ್ರಿ ಪಕ್ಷಗಳ ನಾಯಕರ ಭೇಟಿ ಬೆನ್ನಲ್ಲೇ ಬಿಜೆಪಿಯ ಕೆ.ಜಿ.ಬೋಪಯ್ಯ, ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ ಇತರರು ಸ್ಪೀಕರ್ ಭೇಟಿಯಾಗಿ ಚರ್ಚಿಸಿದರು. ಗುರುವಾರ ನಿಗದಿಯಾಗಿರುವ ವಿಶ್ವಾಸ ಮತ ಯಾಚನೆ ಚರ್ಚೆಯನ್ನು ಮುಂದೂಡಲಾಗುತ್ತಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸ್ಪಷ್ಟನೆ ಕೋರಿದ್ದರು. ಸ್ಪೀಕರ್ ಗುರುವಾರ ಕಾರ್ಯಸೂಚಿಯಂತೆ ಕಲಾಪ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಬಿಜೆಪಿ ನಿಯೋಗ ಅಲ್ಲಿಂದ ತೆರಳಿತು.