ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ನಿರ್ಗಮನದ ಬೆನ್ನಲ್ಲೇ ಈಶಾನ್ಯ ಮಾರುತಗಳ ಪ್ರವೇಶವಾಗಿದ್ದು, ಹಿಂಗಾರು ಮಳೆ ಆರಂಭವಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ.
ಬುಧವಾರವೇ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕಕ್ಕೆ ಹಿಂಗಾರು ಪ್ರವೇಶಿಸಿದೆ. ಇದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದ ಅಲ್ಲಲ್ಲಿ ಭಾರಿ ಮಳೆಯಾಗಿದೆ. ಮುಂದಿನ ನಾಲ್ಕು ದಿನಗಳವರೆಗೂ ಉತ್ತರ ಒಳನಾಡಿನ ಕೆಲ ಭಾಗಗಳನ್ನು ಹೊರತುಪಡಿಸಿ, ರಾಜ್ಯದ ಇತರೆಡೆ ಮಳೆಯಾಗಲಿದೆ.
ಪ್ರಮುಖವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅ.17 ರಿಂದ 19ರವರೆಗೆ ಚದುರಿದಂತೆ ಭಾರಿ ಮಳೆ ಸುರಿಯುವ ಸಂಭವವಿದೆ. ಕರಾವಳಿ ಜಿಲ್ಲೆಯಲ್ಲಿ ಎಲ್ಲೆಡೆ ಅ.17ರಿಂದ 19ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಎರಡು ದಿನ ತಡವಾಗಿ ಅ.18 ರಿಂದ 20 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಾಸನದಲ್ಲಿ 10 ಸೆಂ.ಮೀ. ಮಳೆ: ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಯಿತು. ಹಾಸನದಲ್ಲಿ ರಾಜ್ಯದಲ್ಲಿಯೇ ಅಧಿಕ, 10 ಸೆಂ.ಮೀ.ಮಳೆ ಸುರಿಯಿತು.
ರಂಗನತಿಟ್ಟಿನಲ್ಲಿ ದೋಣಿವಿಹಾರ ಸ್ಥಗಿತ: ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿವಿಹಾರ ಸ್ಥಗಿತಗೊಳಿಸಲಾಗಿದೆ.
ಕೆಆರ್‌ಎಸ್‌ನ ಗರಿಷ್ಠ ಮಟ್ಟದಲ್ಲಿ ದಾಖಲೆ – ಶ್ರೀರಂಗಪಟ್ಟಣ: ಕೆಆರ್‌ಎಸ್ ಅಣೆಕಟ್ಟೆ ಕಳೆದ 10 ವರ್ಷಗಳ ನಂತರ ನೀರಿನ ಸಂಗ್ರಹದಲ್ಲಿ ದಾಖಲೆ ನಿರ್ಮಿಸಿದೆ. 2006ರಲ್ಲಿ 90 ದಿನಗಳ ಕಾಲ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿತ್ತು. 2006ನ್ನು ಹೊರತು ಪಡಿಸಿದರೆ ಇದೇ ಮೊದಲ ಬಾರಿಗೆ 59 ದಿನಗಳ ತನಕ ತುಂಬಿದ್ದು, 60ನೇ ದಿನಕ್ಕೆ ಕಾಲಿಟ್ಟಿದೆ.