ಬೆಂಗಳೂರು: ಹೊಸಕೆರೆಹಳ್ಳಿಯಲ್ಲಿರುವ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರ್‌ಗೆ ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟು ಸಿಬ್ಬಂದಿ ಗಮನ ಬೇರೆಡೆ ಸೆಳೆದು ಚಿನ್ನದ ಉಂಗುರ ಕಳ್ಳತನ ಮಾಡಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವೇಲೂರು ಜಿಲ್ಲೆಯ ಆಸ್ಗರ್ ಹಾಗೂ ಮುಬಾರಕ್ ಬಂಧಿತರು. ಮಾ.4 ರಂದು ಹೊಸಕೆರೆಹಳ್ಳಿಯಲ್ಲಿರುವ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರಿ ಶಾಪ್‌ಗೆ ಗ್ರಾಹಕರ ಸೋಗಿನಲ್ಲಿ ಆರೋಪಿಗಳು ಬಂದಿದ್ದರು. ನಮಗೆ ಹೆಚ್ಚಿನ ಬೆಲೆಯ ಉಂಗುರ ಖರೀದಿಸಬೇಕಿದೆ. ವಿವಿಧ ಶೈಲಿಯ ಉಂಗುರ ತೋರಿಸುವಂತೆ ಅಂಗಡಿಯಲ್ಲಿದ್ದ ಸಿಬ್ಬಂದಿ ಓಂಪ್ರಕಾಶ್‌ಗೆ ಸೂಚಿಸಿದ್ದರು. ವಿವಿಧ ಡಿಸೈನ್ ತೋರಿಸಿದರೂ ಒಪ್ಪದೇ ಇನ್ನಷ್ಟು ಬಗೆ ಬಗೆಯ ಚಿನ್ನದುಂಗುರ ತೋರಿಸುವಂತೆ ಕೇಳಿದ್ದರು. ಇದೇ ವೇಳೆ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳಾ ಗ್ರಾಹಕರೊಂದಿಗೆ ಸಿಬ್ಬಂದಿ ಮಾತನಾಡುವಾಗ ಓಂಪ್ರಕಾಶ್ ಗಮನ ಬೇರೆಡೆ ಸೆಳೆದು ಸುಮಾರು 3.60 ಲಕ್ಷ ರೂ. ಬೆಲೆಯ 60 ಗ್ರಾಂ ಮೌಲ್ಯದ ಉಂಗುರವನ್ನು ಜೇಬಿನೊಳಗಿಟ್ಟಿದ್ದರು. ನೀವು ತೋರಿಸಿದ ಡಿಸೈನ್ ಇಷ್ಟವಾಗಲಿಲ್ಲ ಎಂದು ಹೇಳಿ ಅಂಗಡಿಯಿಂದ ತೆರಳಿದ್ದರು.
ಆರೋಪಿಗಳ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ: ಅಭರಣ ಅಂಗಡಿ ಮಾಲೀಕ ಓಮರಾಮ್ ಬಂದು ಬಾಕ್ಸ್‌ನಲ್ಲಿದ್ದ ಚಿನ್ನದುಂಗುರ ಪರಿಶೀಲಿಸಿದಾಗ ಇದರಲ್ಲಿ 60 ಗ್ರಾಂ ಮೌಲ್ಯದ ಚಿನ್ನದುಂಗುರ ಇಲ್ಲದಿರುವುದು ಕಂಡು ಬಂದಿತ್ತು. ಈ ಬಗ್ಗೆ ಓಂಪ್ರಕಾಶ್‌ಗೆ ಪ್ರಶ್ನಿಸಿದ್ದರು. ಸತತ ಹುಡುಕಾಟ ನಡೆಸಿದರೂ ಉಂಗುರ ಸಿಗದ ಪರಿಣಾಮ ಅನುಮಾನಗೊಂಡ ಓಂಪ್ರಕಾಶ್ ಅಂಗಡಿಗೆ ಬಂದಿದ್ದ ಇಬ್ಬರು ಗ್ರಾಹಕರ ಬಗ್ಗೆ ಸಂಶಯ ವ್ಯಕ್ತಪಡಿಸಿ ಸಿಸಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಅವರು ಚಿನ್ನದುಂಗುರ ಲಪಟಾಯಿಸಿರುವುದು ಕಂಡು ಬಂದಿತ್ತು. ಅಂಗಡಿ ಮಾಲೀಕ ಓಮರಾಮ್ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು.
ಬೈಕ್ ಸಂಖ್ಯೆ ಆಧರಿಸಿ ಕಾರ್ಯಾಚರಣೆ : ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ಬಂದಿದ್ದ ಬೈಕ್ ಸಂಖ್ಯೆ ಆಧಾರಿಸಿ ಕಾರ್ಯಾಚರಣೆ ನಡೆಸಿದಾಗ ತಮಿಳುನಾಡಿನ ವೇಲೂರಿನಲ್ಲಿರುವುದು ಕಂಡು ಬಂದಿತ್ತು. ಕೂಡಲೇ ಅವರನ್ನು ಅಲ್ಲಿಗೆ ಬಂಧಿಸಲು ಹೊರಟಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು.
ಬಳಿಕ ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಿ ತಮಿಳುನಾಡಿನಿಂದ ಬೆಂಗಳೂರಿಗೆ ಪೊಲೀಸರು ಆರೋಪಿಗಳನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಕದ್ದ ಚಿನ್ನವನ್ನು ಬೇರೆಡೆ ಮಾರಾಟ ಮಾಡಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಹೀಗಾಗಿ ಇನ್ನಷ್ಟೇ ಆಭರಣ ಜಪ್ತಿ ಮಾಡಿಕೊಳ್ಳಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.