Advertisement
ಪ್ರಕರಣದ ವಿವರಇಬ್ಬರು ಕಾವಿಧಾರಿಗಳು ಪಂಜ ಪೇಟೆಯಿಂದ ಮಗುವನ್ನು ಅಪಹರಿಸಿ ಸರಕಾರಿ ಬಸ್ಸಿನಲ್ಲಿ ಕಡಬ ಮೂಲಕ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಲಂಕಾರಿನಲ್ಲಿ ಬಸ್ಸನ್ನು ತಡೆಯಲಾಯಿತು. ಬಸ್ಸಲ್ಲಿದ್ದ ಇಬ್ಬರು ಶಂಕಿತರನ್ನು ಕೆಳಗಿಳಿಸಿ ಪ್ರಶ್ನಿಸಲಾರಂಭಿಸಿದಾಗ ಕಡಬ ಠಾಣೆಯ ಹೋಂಗಾರ್ಡ್ ಚೇತನ್ ಕೂಡ ಸ್ಥಳಕ್ಕಾಗಮಿಸಿದರು.
ವಿಚಾರಣೆ ವೇಳೆ, ತಾವು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕು ಬಕಪ್ಪನಕೊಪ್ಪಲು ಸುಡುಗಾಡು ಸತೀಶ (32) ಮತ್ತು ಪ್ರದೀಪ (27) ಎಂಬವರಾಗಿದ್ದು, ಬೆಳಗ್ಗೆ ಬೆಳ್ಳಾರೆಯಿಂದ ಕಡಬ ತನಕ ಮನೆ ಮನೆಗೆ ತೆರಳಿ ಭವಿಷ್ಯ ಹೇಳಿದ್ದೇವೆ. ಬಳಿಕ ಕಡಬದಿಂದ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಈ ಮಾಹಿತಿಯನ್ನು ಹೋಂಗಾರ್ಡ್ ಕಡಬ ಠಾಣೆಗೆ ನೀಡಿದರು. ಜತೆಗೆ ಬೆಳ್ಳಾರೆ ಠಾಣೆಯನ್ನೂ ಸಂಪರ್ಕಿಸಲಾಗಿದ್ದು, ಅಲ್ಲಿ ಮಗು ಅಪಹರಣವಾದ ಬಗ್ಗೆ ದೂರು ದಾಖಲಾಗಿಲ್ಲ ಎಂಬುದು ತಿಳಿದ ಬಳಿಕ ಅವರನ್ನು ಬಿಟ್ಟು ಕಳುಹಿಸಲಾಯಿತು. ಮತ್ತೆ ಸಿಕ್ಕಿತು ಕಳ್ಳರೆಂಬ ಮಾಹಿತಿ!
ಶಂಕಿತರು ನಿರಪರಾಧಿಗಳು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದ ಕಾರಣ ಅವರನ್ನು ಬಿಟ್ಟು ಕಳುಹಿಸಲಾಯಿತು. ಆದರೆ ಬಳಿಕ ಬಂದ ಮಾಹಿತಿಯಂತೆ ಇವರಿಬ್ಬರು ಬೆಳ್ಳಾರೆ ಸಮೀಪದ ಮನೆಯೊಂದರಿಂದ ಬೆಲೆಬಾಳುವ ಸೊತ್ತುಗಳನ್ನು ಕದ್ದವರಾಗಿದ್ದು, ಇವರ ಜತೆಗಿದ್ದ ಓರ್ವನನ್ನು ಸಂಪ್ಯದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆಲಂಕಾರಿನಲ್ಲಿ ಇಬ್ಬರನ್ನು ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ ಎಂಬ ಮಾಹಿತಿಯಂತೆ ಅಲ್ಲಿಗಾಗಮಿಸಿದ ಸಂಪ್ಯ ಪೊಲೀಸರು ಕಳವಿನ ಬಗ್ಗೆ ಮಾಹಿತಿ ನೀಡಿದರು. ಆರೋಪಿಗಳ ಫೋಟೋವನ್ನು ಪರಿಶೀಲಿಸಿದಾಗ ಅವರು ಕಳ್ಳರೆಂಬುದು ಸ್ಪಷ್ಟವಾಯಿತು. ತತ್‌ಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಉಪ್ಪಿನಂಗಡಿ ಬಸ್ ತಂಗುದಾಣದಲ್ಲಿ ಬಂಧಿಸಲಾಯಿತು.