ಕಾಸರಗೋಡು: ತೃಕ್ಕನ್ನಾಡು ರೈಲ್ವೇ ಹಳಿಯಲ್ಲಿ ಕಾಂಕ್ರೀಟ್ ಒಳಗೊಂಡ ಕಬ್ಬಿಣದ ಬೀಮ್ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಕಳ್ಳಕುರುಚ್ಚಿ ನಿವಾಸಿ ಕನಕವಲ್ಲಿ(22)ಯನ್ನು ಪೊಲೀಸರು ಬಂಧಿಸಿದ್ದಾರೆ.
ಕನಕವಲ್ಲಿ ಕುಟುಂಬ ಸಮೇತ ಪಳ್ಳಿಕೆರೆ ಅರಳಿಕಟ್ಟೆಯಲ್ಲಿ ವಾಸ್ತವ್ಯ ಹೂಡಿದ್ದು, ಗುಜರಿ ಸಾಮಗ್ರಿ ಸಂಗ್ರಹಿಸಿ ಮಾರಾಟಗೈಯ್ಯುವ ಕೆಲಸ ನಿರ್ವಹಿಸುತ್ತಿದ್ದಳು.
ಆ.20 ರಂದು ಸಂಜೆ ರೈಲು ಹಳಿಯಲ್ಲಿ ಬೀಮ್ ಪತ್ತೆಯಾಗಿತ್ತು. ಇನ್ನೊಂದು ಹಳಿಯಲ್ಲಿ ಸಂಚರಿಸಿದ ರೈಲಿನ ಲೋಕೋ ಪೈಲೆಟ್‌ನ ಗಮನಕ್ಕೆ ಬಂದುದರಿಂದ ಅವರು ನೀಡಿದ ಮಾಹಿತಿಯಂತೆ ಪೊಲೀಸರು ಹಾಗು ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಬೀಮ್ ತೆರವುಗೊಳಿಸಿದ್ದರಿಂದ ಸಂಭವನೀಯ ದುರಂತ ತಪ್ಪಿತ್ತು.
ರೈಲು ಬುಡಮೇಲು ಕೃತ್ಯಕ್ಕಾಗಿ ಹಳಿ ಮೇಲೆ ಬೀಮ್ ಇರಿಸಿರುವುದಾಗಿ ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು, ಆರ್‌ಪಿಎಫ್ ಹಾಗು ರೈಲ್ವೇ ಪೊಲೀಸರು ಸಂಯುಕ್ತವಾಗಿ ತನಿಖೆ ನಡೆಸಿದ್ದರು. ತನಿಖೆ ಮುಂದುವರಿಯುತ್ತಿದ್ದಂತೆ ಕನಕವಲ್ಲಿ ಹಳಿ ಮೂಲಕ ನಡೆದು ಹೋಗುತ್ತಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಹಳಿಯಲ್ಲಿ ಬೀಮ್ ಇರಿಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಳು.
ಹಳಿಯಲ್ಲಿರಿಸಿದ ಕಾಂಕ್ರೀಟ್ ಬೀಮ್ ಮೇಲೆ ರೈಲು ಸಂಚರಿಸಿದಾಗ ಕಾಂಕ್ರೀಟ್ ಬೇರ್ಪಟ್ಟು ಕಬ್ಬಿಣ ಲಭಿಸಬಹುದೆಂಬ ನಿರೀಕ್ಷೆಯಿಂದ ಕನಕವಲ್ಲಿ ಬೀಮ್ ಇರಿಸಿದ್ದಳೆಂದು ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.