Advertisement

Crime: ರಾಮೇಶ್ವರಂ ಕೆಫೆ ಬಾಂಬರ್‌ನ ರೀತಿ ಬಟ್ಟೆ ಬದಲಿಸಿ ಪರಾರಿಯಾಗಿದ್ದ ಕಳ್ಳರಿಬ್ಬರ ಬಂಧನ

09:55 AM Mar 17, 2024 | Team Udayavani |

ಬೆಂಗಳೂರು: ಒಂಟಿ ಮಹಿಳೆಯ ಸರ ಕಳವು ಮಾಡಿ, ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಯಿಂದ ಸ್ಫೂರ್ತಿ ಪಡೆದು ಬಟ್ಟೆ ಬದಲಿಸಿ ಪರಾರಿಯಾಗಿದ್ದ ಇಬ್ಬರು ಸರ ಕಳ್ಳರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತುಮಕೂರು ಜಿಲ್ಲೆ ಓಜೇನಹಳ್ಳಿ ಗ್ರಾಮದ ಪ್ರಸನ್ನ ಕುಮಾರ್‌(38) ಮತ್ತು ಕೊತ್ತನೂರು ದಿಣ್ಣೆ ಮುಖ್ಯರಸ್ತೆಯ ದಯಾನಂದ(39) ಬಂಧಿತರು. ಆರೋಪಿಗಳಿಂದ 2.75 ಲಕ್ಷ ರೂ. ಮೌಲ್ಯದ 44 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಮಾ.12ರಂದು ಬೆಳಗ್ಗೆ 10 ಗಂಟೆಗೆ ನಾರಾಯಣ ನಗರ 7ನೇ ಮುಖ್ಯರಸ್ತೆಯಲ್ಲಿ ಗೌರಮ್ಮ ಎಂಬವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗೌರಮ್ಮನ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಾಲ ತೀರಿಸಲು ಕೃತ್ಯ: ಆರೋಪಿಗಳ ಪೈಕಿ ದಯಾನಂದ ಕೊತ್ತನೂರು ದಿಣ್ಣೆಯಲ್ಲಿ ಸ್ಟೇಷನರಿ ಅಂಗಡಿ ನಡೆಸುತ್ತಿದ್ದ. ಪ್ರಸನ್ನ ಸ್ವಂತ ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆರೋಪಿ ದಯಾ ನಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಹೀಗಾಗಿ ಸ್ನೇಹಿತ ಪ್ರಸನ್ನನ ಸಹಾಯ ಪಡೆದು ಸರಗಳವು ಮಾಡಲು ನಿರ್ಧರಿಸಿದ್ದ. ಅದರಂತೆ ಊರಿನಿಂದ ಪ್ರಸನ್ನನನ್ನು ಕರೆಸಿಕೊಂಡಿದ್ದ ದಯಾ ನಂದ, ಇಬ್ಬರು ಬೈಕ್‌ನಲ್ಲಿ ತೆರಳಿ ಸರ ಕಳವು ಮಾಡಿ ದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಾ ಚರಣೆ ಆರಂಭಿಸಿದ ಇನ್‌ಸ್ಪೆಕ್ಟರ್‌ ಪಿ.ಸುರೇಶ್‌ ನೇತೃತ್ವದ ತಂಡ ಘಟನಾ ಸ್ಥಳ ಸೇರಿ ಸುಮಾರು 20 ಕಿ.ಮೀ. ಅಂತರದಲ್ಲಿ 85 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿತ್ತು. ಈ ವೇಳೆ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಈ ಹಿಂದೆ ಬೇರೆ ಯಾವುದೇ ಅಪರಾಧ ಪ್ರಕರಣಗಳು ಇಲ್ಲ ಎಂದು ಪೊಲೀಸರು ಹೇಳಿದರು.

 ರಾಮೇಶ್ವರಂ ಕೆಫೆ ಆರೋಪಿಯೇ ಸ್ಫೂರ್ತಿ :

Advertisement

ಇತ್ತೀಚೆಗೆ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ, ಕೃತ್ಯ ಎಸಗಿದ ಬಳಿಕ ಬಿಎಂಟಿಸಿ ಬಸ್‌ನಲ್ಲಿ ತೆರಳಿ, ಬಳಿಕ ಕ್ಯಾಪ್‌, ಬಟ್ಟೆ ಬದಲಾಯಿಸಿಕೊಂಡು ಪರಾರಿಯಾಗಿದ್ದ. ಇದನ್ನು ತಿಳಿದುಕೊಂಡಿದ್ದ ಆರೋಪಿ ಪ್ರಸನ್ನ ಸರಗಳ್ಳತನ ಕೃತ್ಯದ ಬಳಿಕ ತನ್ನ ಬಟ್ಟೆ ಬದಲಿಸಿದ್ದ. ಇನ್ನು ಘಟನೆಯ ದಿನ ಆರೋಪಿ ದಯಾನಂದ ದ್ವಿಚಕ್ರ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿಕೊಂಡು ನಿಂತಿದ್ದ. ಆರೋಪಿ ಪ್ರಸನ್ನ ಕುಮಾರ್‌ ರಸ್ತೆಯಲ್ಲಿ ಮಹಿಳೆಯನ್ನು ಹಿಂಬಾಲಿಸಿ ಸರ ಕಿತ್ತುಕೊಂಡು ಓಡಿಬಂದು ಬಳಿಕ ದಯಾನಂದನ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಸುಮಾರು 1 ಕಿ.ಮೀ. ಮುಂದೆ ಹೋದ ಬಳಿಕ ಆರೋಪಿ ಪ್ರಸನ್ನ ತನ್ನ ಗುರುತು ಮರೆಮಾಚಲು ತಾನು ಧರಿಸಿದ್ದ ಟೋಪಿ, ಬಟ್ಟೆಯನ್ನು ಕಳಚಿ ಬೇರೆ ಬಟ್ಟೆಯನ್ನು ಧರಿಸಿದ್ದ. ಈ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next