Advertisement

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ- ಬೃಹತ್ ಮೊತ್ತ ವಂಚೆನೆ- ಇಬ್ಬರು ಟೆಕ್ಕಿಗಳ ಬಂಧನ

12:03 AM Jan 23, 2021 | Team Udayavani |

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಮಾಡಿಕೊಡುವ ಆಮಿಷ ನೀಡಿ ನೂರಾರು ಮಂದಿ ಟೆಕ್ಕಿಗಳಿಗೆ ವಂಚಿಸಿದ್ದ ಇಬ್ಬರು ಟೆಕ್ಕಿಗಳು, ಒಬ್ಬ ಬ್ಯಾಂಕ್‌ ಸಾಲ ಕೊಡಿಸುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಕೊತ್ತನೂರಿನ ಸ್ಟೀಫ‌ನ್‌ ಜೋನ್ಸ್‌  (35), ಕಲ್ಕೆರೆ  ರಾಘವೇಂದ್ರ  (34) ವಿದ್ಯಾರಣ್ಯಪುರದ ಮಂಜುನಾಥ್‌ ( 35) ಬಂಧಿತರು. ಆರೋಪಿಗಳಿಂದ ದುಬಾರಿ ಮೌಲ್ಯದ ಮುರು ಐಶಾರಾಮಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಮೂವರು ಆರೋಪಿಗಳ ಈ ಬೃಹತ್‌ ವಂಚನೆಯಲ್ಲಿ ನೂರು ಕೋಟಿ ರೂ.ಗಳಿಗೂ ಅಧಿಕ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಗಳ ಬ್ಯಾಂಕ್‌ ಖಾತೆಗಳನ್ನು ಸೀಜ್‌ ಮಾಡಿಸಲಾಗಿದೆ. ಆರೋಪಿಗಳು ಹೊಂದಿರುವ ಸ್ಥಿರಾಸ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರಲ್ಲಿ ಸ್ಟೀಫ‌ನ್‌ ಹಾಗೂ ರಾಘವೇಂದ್ರ ಈ ಹಿಂದೆ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು. ಷೇರು ಮಾರ್ಕೆಟ್‌ ವ್ಯವಹಾರದ ಬಗ್ಗೆ ಸ್ಟೀಫ‌ನ್‌ ಪರಿಣತನಾಗಿದ್ದಾನೆ. ಐದಾರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದ ಸ್ಟೀಫ‌ನ್‌ ಮೊದಲಿಗೆ ಒಬ್ಬನೇ ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದ.

ಹೆಚ್ಚಿನ ಲಾಭ ಗಳಿಸಿದ ಬಳಿಕ ಸ್ನೇಹಿತ ರಾಘವೇಂದ್ರನಿಗೆ ಹಣ ಮಾಡುವ ಉದ್ದೇಶ ತಿಳಿಸಿ ಆತನೂ ಕೆಲಸಕ್ಕೆ ಗುಡ್‌ಬೈ ಹೇಳಿದ. ಬಳಿಕ  ಪರಿಚಯ ಸಾಫ್ಟ್ವೇರ್‌ ಉದ್ಯೋಗಿಗಳನ್ನು ಸೇರಿಸಿಕೊಂಡು ಅವರ ಹಣವನ್ನು ಹೂಡಿಕೆ ಮಾಡಿ ಬಂದ ಲಾಭದಲ್ಲಿ ಅವರಿಗೆ ಹೆಚ್ಚಿನ ಲಾಭಾಂಶ ನೀಡುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ, ಈ ಯೋಜನೆಗೆ ಬ್ಯಾಂಕ್‌ಗಳಿಂದ ಸಾಲ ಕೊಡಿಸುವ  ಫ್ರೀ ಲ್ಯಾನ್ಸರ್‌ ಮಂಜುನಾಥ್‌ನನ್ನು ಸೇರಿಸಿಕೊಂಡಿದ್ದರು.

Advertisement

ಅವರೇ ಸಾಲ ಕೊಡಿಸಿ ಹೂಡಿಕೆ ಮಾಡಿಕೊಳ್ಳುತ್ತಿದ್ದರು! : 

ಪರಿಚಯಸ್ಥ ಟೆಕ್ಕಿಗಳಿಗೆ ಷೇರು ಮಾರುಕಟ್ಟೆ ಹೂಡಿಕೆ  ಬಗ್ಗೆ ವಿವರಣೆ ನೀಡಿ ಶೇ 10, 15ರಷ್ಟು ಲಾಭಾಂಶ ನೀಡುವುದಾಗಿ ನಂಬಿಸುತ್ತಿದ್ದರು. ಅವರ ಬಳಿ ಕೆಲವು ಲಕ್ಷಗಟ್ಟಲೆ ಹಣ ಕಟ್ಟಿಸಿಕೊಳ್ಳುತ್ತಿದ್ದರು.  ಒಂದು ವೇಳೆ ಅವರು ಹಣವಿಲ್ಲ ಎಂದಾದರೆ ವೇತನದ ಮೇಲೆ ಬ್ಯಾಂಕ್‌ನಲ್ಲಿ ಸಾಲ ಮಾಡಿ ನಮಗೆ ನೀಡಿ. ನಾವೇ ಆ ಸಾಲಕ್ಕೆ ಇಎಂಐ ಕಟ್ಟುತ್ತೇವೆ. ಜತೆಗೆ, ಲಾಭಾಂಶ ನೀಡುತ್ತೇವೆ. ನಿಮ್ಮ ತಿಂಗಳ ವೇತನ ನಿಮಗೆ ಉಳಿಯಲಿದೆ ಎಂದು ನಂಬಿಸುತ್ತಿದ್ದರು.

ಇವರ ಮಾತುಗಳಿಗೆ ಮರುಳಾಗಿ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಕೆಲವು ಟೆಕ್ಕಿಗಳು ಮುಂದಾಗುತ್ತಿದ್ದರು. ಈ ವೇಳೆ ಮಂಜುನಾಥ, ತಾನೇ ಸಾಲ ಕೊಡಿಸುವ ಪ್ರಕ್ರಿಯೆ ನಡೆಸಿಕೊಡುತ್ತಿದ್ದ. ಒಬ್ಬ ಟೆಕ್ಕಿ ವೇತನ ಆಧಾರದಲ್ಲಿ ಆತನಿಗೆ ತಿಳಿಯದಂತೆ ಐದಾರು ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ಐದಾರು ಬ್ಯಾಂಕ್‌ಗಳಲ್ಲಿಯೂ ಮೂರರಿಂದ ನಾಲ್ಕು ದಿನಗಳಿಗೆ ಸಾಲ ಮಂಜೂರು ಮಾಡಿಸಿಕೊಂಡು ಸಾಲ ಮುಂಜೂರಿನ ಡಿಡಿಯನ್ನು ಪಡೆದು. ಅದನ್ನು ಸ್ಟೀಫ‌ನ್‌ ಬ್ಯಾಂಕ್‌ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದರು. ಈ ವಿಚಾರ ಟೆಕ್ಕಿಗಳಿಗೆ ಗೊತ್ತಿರಲಿಲ್ಲ.

ಸ್ಟೀಫ‌ನ್‌ ಮತ್ತು ಉಳಿದ ಆರೋಪಿಗಳು ಸ್ವಲ್ಪ ಕಾಲ ಹೂಡಿಕೆದಾರರಿಗೆ ಲಾಭಾಂಶ ನೀಡಿದ್ದಾರೆ. ಬಳಿಕ ಅವರ ಹಣ ಕೊಡುವ ಗೋಜಿಗೆ ಹೋಗದೆ ಸ್ವಂತ ಆಸ್ತಿಗಳನ್ನು ಮಾಡಿಕೊಂಡಿದ್ದಾರೆ.  ಸ್ಟೀಫ‌ನ್‌ ವಂಚನೆ ಮಾಡಿದ ಹಣದಲ್ಲಿ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿಯೇ 9 ಕೋಟಿ ರೂ. ವೆಚ್ಚದ ಮನೆಕಟ್ಟಿಕೊಂಡಿದ್ದಾನೆ.

ಆರೋಪಿಗಳು ಲಾಭಾಂಶವನ್ನು ನೀಡುತ್ತಿರಲಿಲ್ಲ. ಜತೆಗೆ, ಸಾಲ ನೀಡಿದ್ದ ಬ್ಯಾಂಕ್‌ಗಳು ಟೆಕ್ಕಿಗಳಿಗೆ ನೋಟಿಸ್‌ ನೀಡಲು ಆರಂಭವಾಯಿತು ಆಗ ಎಚ್ಚೆತ್ತುಕೊಂಡವರು. ಸ್ಟೀಫ‌ನ್‌ನನ್ನು ಪ್ರಶ್ನಿಸಿದಾಗ ಅವರು ನಾನಾ ಸಬೂಬು ಹೇಳಿದ್ದಾರೆ. ಕಡೆಗೆ ಹಣ ಕಳೆದುಕೊಂಡಿದ್ದ ಡಿ.ಪಿ ಸತೀಶ್‌ ಎಂಬುವವರು  ಚಂದ್ರಲೇಔಟ್‌ನಲ್ಲಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ ಆಗಿದ್ದರಿಂದ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next