ಪಡುಬಿದ್ರಿ: ಮುದರಂಗಡಿಯ ಸಮನ್ಯು ಎಚ್‌ಪಿ ಗ್ಯಾಸ್ ಏಜೆನ್ಸಿಯ ಗೋದಾಮಿನ ಬಳಿ ಇರುವ ಅದರ ಮೂವರು ಲೋಡಿಂಗ್ ಕಾರ್ಮಿಕರಾಗಿರುವ ರಾಜಸ್ಥಾನ ಮೂಲದವರ ಮನೆಗೆ ಕಾಪು ಆಹಾರ ನಿರೀಕ್ಷಕರ ಜತೆಗೂಡಿ ಜೂ. 22ರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಪ್ರಸನ್ನ ಹಾಗೂ ಸಿಬಂದಿ ಗ್ರಾಹಕರಿಗೆ ನೀಡಬೇಕಾಗಿರುವ ಗ್ಯಾಸ್ ಸಿಲಿಂಡರ್‌ಗಳಿಂದ ವಾಣಿಜ್ಯ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಗ್ಯಾಸ್ ಮರುಪೂರಣ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.
ಗ್ಯಾಸ್ ಏಜೆನ್ಸಿಯ ಮಾಲಕಿ ವಿದ್ಯಾ ಎಸ್. ಹೆಗ್ಡೆ, ಕಾರ್ಮಿಕರಾದ ಸುರೇಂದ್ರ ಕುಮಾರ್, ಸುಖ್‌ದೇವ್ ಮತ್ತು ದೇವರಾಮ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಸುರೇಂದ್ರ ಕುಮಾರ್ ಮತ್ತು ಸುಖ್‌ದೇವ್ ಅವರನ್ನು ಬಂಧಿಸಲಾಗಿದೆ. ದೇವರಾಮ್ ಪರಾರಿಯಾಗಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರಿಂದ ಗೃಹಬಳಕೆಯ 11 ಹಾಗೂ ವಾಣಿಜ್ಯೋದ್ದೇಶದ 4 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಠಾಣಾಧಿಕಾರಿ ಪ್ರಸನ್ನ ಅವರಿಗೆ ಬಂದ ಖಚಿತ ಮಾಹಿತಿಯನ್ವಯ ಅದನ್ನು ಕಾಪು ತಹಶೀಲ್ದಾರ್ ಪ್ರತಿಭಾ ಅವರಿಗೆ ರವಾನಿಸಲಾಗಿತ್ತು. ಹಾಗಾಗಿ ಬೆಳಗ್ಗೆ 6 ಗಂಟೆಗೆ ಕಾಪು ಆಹಾರ ನಿರೀಕ್ಷಕ ಎಂ.ಟಿ. ಲೀಲಾನಂದ ಅವರ ಜತೆಗೇ ಪೊಲೀಸರು ದಾಳಿಯನ್ನು ಸಂಘಟಿಸಿ ಅಕ್ರಮವನ್ನು ಬಯಲಿಗೆಳೆದರು.
ಆರೋಪಿಗಳು ಪ್ರತೀದಿನ ವಿತರಣೆಗಾಗಿ ಹಿಂದಿನ ದಿನದ ಸಾಯಂಕಾಲವೇ ಸಿಲಿಂಡರ್‌ಗಳನ್ನು ತಮ್ಮ ವಾಹನಗಳಿಗೆ ಪೇರಿಸಿ ತಮ್ಮ ಮನೆಯ ಸಮೀಪ ನಿಲ್ಲಿಸುತ್ತಿದ್ದರು. ರಾತ್ರಿ ವೇಳೆ ತಮ್ಮ ವಾಹನಗಳಿಂದ ಗೃಹಬಳಕೆಯ ಸಿಲಿಂಡರ್‌ಗಳನ್ನು ಇಳಿಸಿ ಪ್ರತೀ ಸಿಲಿಂಡರ್‌ನಿಂದಲೂ 2-3 ಕೆಜಿಯಷ್ಟು ಗ್ಯಾಸನ್ನು ತಮ್ಮಲ್ಲಿರುವ ವಾಣಿಜ್ಯ ಉದ್ದೇಶದ ಸಿಲಿಂಡರ್‌ಗೆ ತುಂಬಿಸಿ ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ಗೃಹಬಳಕೆಯ ಸಿಲಿಂಡರ್‌ಗಳ ಒಟ್ಟು ತೂಕ 30 ಕೆಜಿ ಇರಬೇಕಾಗಿದ್ದುದು ಸುಮಾರು 27 ಕೆಜಿ ಆಸುಪಾಸಿನಲ್ಲಿರುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೂವರೆ ವರ್ಷದಿಂದ…
ಆರೋಪಿತ ಕಾರ್ಮಿಕರು ಸುಮಾರು 2 ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಿಂದ ಈ ಅಕ್ರಮ ನಡೆಯುತ್ತಿದ್ದ ಮಾಹಿತಿ ಲಭಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಸ್ ಢಿಕ್ಕಿಯಾಗಿ ಪಾದಚಾರಿ ಸಾವು
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ನ್ನು ದಾಟುತ್ತಿದ್ದ ವ್ಯಕ್ತಿಯೊಬ್ಬರು ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಜೂ. 21ರ ರಾತ್ರಿ ಸಂಭವಿಸಿದೆ. ಭವಾನಿ ಮಟನ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಗಪ್ಪ (60) ಮೃತಪಟ್ಟವರು. ಮೂಲತಃ ಹುಬ್ಬಳ್ಳಿಯ ಕುಸುಗಲ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ಪಡುಬಿದ್ರಿಯಲ್ಲಿ ಒಂಟಿಯಾಗಿ ನೆಲೆಸಿದ್ದರು.