ದಾವಣಗೆರೆ: ಚನ್ನಗಿರಿ, ಸಂತೇಬೆನ್ನೂರು ಮತ್ತು ಬಸವಾಪಟ್ಟಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಶ್ರೀಗಂಧ ಕಳ್ಳರ ಬಂಧಿಸಿ 6.5 ಲಕ್ಷ ಮೌಲ್ಯದ 61 ಕೆಜಿ ಶ್ರೀಗಂಧದ ತುಂಡುಗಳ ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಗಾಳಿಹಳ್ಳಿ ಗ್ರಾಮದ ಮರ ಕೊಯ್ಯುವ ಕೆಲಸಗಾರ ಇಸ್ಮಾಯಿಲ್ (40), ಭದ್ರಾವತಿ ತಾಲೂಕಿನ ದಡಂಗಟ್ಟೆಯ ಜಬೀವುಲ್ಲಾ (45), ಶಿವಮೊಗ್ಗದ ಸೂಳೆಬಲು ನಿವಾಸಿ ಮೆಕ್ಯಾನಿಕ್ ಹೈದರ್‌ಖಾನ್ (30) ಬಂಧಿತರು.
ಚನ್ನಗಿರಿ ಉಪವಿಭಾಗ ಠಾಣಾ ಸರಹದ್ದುಗಳಲ್ಲಿ ಹೆಚ್ಚಾಗಿದ್ದ ಶ್ರೀಗಂಧ ಮರ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ. ಬಸರಗಿ, ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಡಾ| ಕೆ.ಎಂ. ಸಂತೋಷ್, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ ಸಂತೇ ಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಪಿ.ಎಸ್.ಐ ರೂಪಾ ತೆಂಬದ್, ಸತೀಶ್, ರುದ್ರೇಶ್, ಉಮೇಶ ರೆಡ್ಡಿ, ಆಂಜನೇಯ, ರಾಘವೇಂದ್ರ, ಪ್ರವೀಣಗೌಡ, ನಾಗಭೂಷಣ, ಬಸವಾಪಟ್ಟಣ ಠಾಣೆಯ ಇಬ್ರಾಹಿಂ ಮನ್ನಖಾನ್, ಪ್ರಕಾಶ್, ಚನ್ನಗಿರಿ ಪೊಲೀಸ್ ಠಾಣೆಯ ಬೀರೆಶ ಪುಟ್ಟಕ್ಕನವರ, ರಘು, ಲೋಕೇಶ್ ಅವರನ್ನೊಳಗೊಂಡ ರಚಿಸಲಾಗಿತ್ತು. ಈ ತಂಡ ಮೂವರು ಶ್ರೀಗಂಧ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೂವರು ಆರೋಪಿಗಳು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ 3, ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2, ಬಸವಾಪಟ್ಟಣ, ಸಂತೇಬೆನ್ನೂರು ಠಾಣೆಯ ತಲಾ ಒಂದು ಒಟ್ಟು 7 ಶ್ರೀಗಂಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಶ್ರೀಗಂಧ ಮರಗಳ್ಳತನ ಪ್ರಕರಣಗಳಲ್ಲಿನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ