ಚನ್ನಪಟ್ಟಣ: ಮಿಂಚಿನ ಕಾರ್ಯಾಚರಣೆ ನಡೆಸಿದ ಅಕ್ಕೂರು ಪೊಲೀಸರು, ಹೈನಾತಿ ದ್ವಿಚಕ್ರವಾಹನ ಹಾಗೂ ಪಂಪ್‌ಸೆಟ್ ಮೋಟರ್ ಕಳ್ಳರನ್ನು ಬಂಧಿಸಿ, ಲಕ್ಷಂತರ ರೂ. ಮೌಲ್ಯದ ದ್ವಿಚಕ್ರವಾಹನಗಳು ಹಾಗೂ ಪಂಪ್‌ಸೆಟ್ ಮೋಟರ್ ವಶಪಡಿಸಿಕೊಂಡಿರುವ ಘಟನೆ, ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲೂಕಿನ ಕಾಲಿಕೆರೆ ಹಾಗೂ ಕನ್ನಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ಬಾಬು, ತಾಲೂಕು ಪೊಲೀಸ್ ಉಪವಿಭಾಗಾಧಿಕಾರಿ ಕೆ.ಎನ್.ರಮೇಶ್ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಬಿ.ಶಿವಕುಮಾರ್ ಮಾರ್ಗದರ್ಶನ ದಲ್ಲಿ ಪಿ.ಎಸ್.ಐ.ಬಸವರಾಜು, ಪ್ರೊಬೇಷನರಿ ಪಿ.ಎಸ್ .ಐ.ಮನೋಹರ್ ಹಾಗೂ ಸಿಬ್ಬಂದಿ ಸುನೀಲ್, ಪ್ರಕಾಶ್, ಹೊಂಬಾಳಶೇಖರ್, ಇತಿಯಾಜ್ ಪಾಷ ಹಾಗೂ ಇತರೆ ಸಿಬ್ಬಂದಿ ದ್ವಿಚಕ್ರವಾಹನ ಹಾಗೂ ಪಂಪ್‌ಸೆಟ್ ಕಳ್ಳರ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು.
ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ತಾಲ್ಲೂಕಿನಲ್ಲಿ ನಡೆಯುತ್ತಿದ್ದ, ದ್ವಿಚಕ್ರವಾಹನ ಕಳವು ಹಾಗೂ ಪಂಪ್‌ಸೆಟ್ ಕಳವು ಪ್ರಕರಣಗಳ ಬಗ್ಗೆ ಕೆಲವು ವರ್ಷಗಳಿಂದ ತಲೆಕೆಡಿಸಿಕೊಂಡಿದ್ದ ಅಕ್ಕೂರು ಪೊಲೀಸರು, ಕೊನೆಗೂ ಹೈನಾತಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ಕೂರು ಪೊಲೀಸರ ಬಂಧನ ಕ್ಕೊಳಗಾಗಿ ರುವ ಕಳ್ಳರನ್ನು ಕಾಲಿಕೆರೆ ಗ್ರಾಮದ ಕೃಷ್ಣ ಎಂಬುವರ ಮಗ ಯೋಗಿ ಆಲಿಯಾಸ್ ಯೋಗೇಶ್ (21), ಕನ್ನಿದೊಡ್ಡಿ ಗ್ರಾಮದ ಲೇಟ್ ಮುತ್ತಯ್ಯ ಎಂಬುವರ ಮಗ ಮುತ್ತುರಾಜ್ (32)ಎಂದು ಹೇಳಲಾಗಿದೆ.
ಕಳ್ಳರ ಬಗ್ಗೆ ಹಲವಾರು ಮಾಹಿತಿಯನ್ನು ಕಲೆ ಹಾಕಿದ ಠಾಣೆಯ ಪಿಎಸ್‌ಐ ಬಸವರಾಜು ಹಾಗೂ ಪ್ರೊಬೇಷನರಿ ಪಿ.ಎಸ್ .ಐ.ಮನೋಹರ್ ತಮ್ಮದೇ ಆದ ತಂಡವನ್ನು ರಚನೆ ಮಾಡಿಕೊಂಡು, ಆರೋಪಿಗಳ ಪತ್ತೆ ಕಾರ್ಯದಲ್ಲಿದ್ದ ಸಂದರ್ಭದಲ್ಲಿ ಅನುಮಾನಸ್ಪದವಾಗಿ ಕೋಡಂಬಳ್ಳಿ ಬಳಿ ದ್ವಿಚಕ್ರವಾಹನಗಳಲ್ಲಿ ತೆರಳುತ್ತಿದ್ದ ಯೋಗೇಶ್ ಹಾಗೂ ಮುತ್ತುರಾಜ್‌ನನ್ನು ಬೆನ್ನಟ್ಟಿ ಹಿಡಿದು ವಿಚಾರಣೆಗೊಳಪಡಿಸಿದಾಗ ತಾವೇ ದ್ವಿಚಕ್ರವಾಹನಗಳು ಹಾಗೂ ಪಂಪ್‌ಸಟ್ ಮೋಟರ್ ಗಳನ್ನು ಕಳವು ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.